ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಬಡಾವಣೆಗೆ ಜೈಲು ಶಿಕ್ಷೆ: ಸಚಿವ ಈಶ್ವರ ಖಂಡ್ರೆ ಪ್ರಸ್ತಾವ

ದಂಡ, ಶಿಕ್ಷೆ ನಿಗದಿ ಪಡಿಸಲು ಕಾನೂನಿಗೆ ತಿದ್ದುಪಡಿ: ಸಚಿವ ಈಶ್ವರ ಖಂಡ್ರೆ ಪ್ರಸ್ತಾವ
Published 28 ಡಿಸೆಂಬರ್ 2023, 12:02 IST
Last Updated 28 ಡಿಸೆಂಬರ್ 2023, 12:02 IST
ಅಕ್ಷರ ಗಾತ್ರ

ಬೆಂಗಳೂರು: ಸಂಬಂಧಪಟ್ಟ ಪ‍್ರಾಧಿಕಾರಗಳ ಅನುಮೋದನೆ ಪಡೆಯದೇ ಅನಧಿಕೃತವಾಗಿ ಬಡಾವಣೆಗಳನ್ನು ನಿರ್ಮಿಸಿದವರಿಗೆ ಜೈಲುಶಿಕ್ಷೆ ಮತ್ತು ದಂಡ ವಿಧಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಕಠಿಣ ನಿಯಮಗಳನ್ನು ರೂಪಿಸಲಿದೆ.

ಬಿಬಿಎಂಪಿ ಕಾಯ್ದೆ 2020ರ ಕಲಂ 144(6) ಮತ್ತು (21)ರ ಅಂಶಗಳನ್ನು ರಾಜ್ಯದ ಇತರ ಮಹಾನಗರ ಪಾಲಿಕೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೂ ವಿಸ್ತರಿಸುವ ಸಂಬಂಧ ಸರ್ಕಾರ ರಚಿಸಿರುವ ಸಂಪುಟ ಉಪಸಮಿತಿಯ ಸಭೆಯಲ್ಲಿ ಸಮಿತಿಯ ಅಧ್ಯಕ್ಷ, ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಭೆ ಗುರುವಾರ ನಡೆಯಿತು.

‘ಸ್ಥಳೀಯ ಸಂಸ್ಥೆಗಳಿಂದ ನಕ್ಷೆ ಮಂಜೂರಾತಿ ಪಡೆಯದೇ ಬಡಾವಣೆಗಳನ್ನು ನಿರ್ಮಿಸುವುದು ಗಂಭೀರ ವಿಚಾರ. ಇದಕ್ಕೆ ಕಡಿವಾಣ ಹಾಕಲು ಕಾನೂನಿಗೆ ತಿದ್ದುಪಡಿ ತರುವುದು ಅಗತ್ಯ. ಇಲ್ಲವಾದರೆ ಅನಧಿಕೃತ ಬಡಾವಣೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಲೇ ಇರುತ್ತವೆ. ಆದ್ದರಿಂದ ಕಟ್ಟುನಿಟ್ಟಿನ ಕಾನೂನು ಅಗತ್ಯ’ ಎಂದು ಅವರು ಸಭೆಯಲ್ಲಿ ಪ್ರತಿಪಾದಿಸಿದರು.

‘ಒಂದು ವೇಳೆ ನಕ್ಷೆಗೆ ಮಂಜೂರಾತಿ ಪಡೆದ ಬಳಿಕ ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸುವವರ ವಿರುದ್ಧವೂ ಕ್ರಮ ಜರುಗಿಸಬೇಕು. ನಿರ್ಮಾಣ ಹಂತದಲ್ಲಿಯೇ ಇಂತಹ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಅನುವಾಗುವಂತೆ ನಿಯಮಗಳಿಗೆ ತಿದ್ದುಪಡಿ ತರಬೇಕಾಗಿದೆ’ ಎಂದೂ ಖಂಡ್ರೆ ತಿಳಿಸಿದರು.

ನ್ಯಾಯಸಮ್ಮತವಾಗಿ ಸಾರ್ವಜನಿಕ ಉದ್ದೇಶಕ್ಕೆ ಜಾಗ ಬಿಟ್ಟು ಬಡಾವಣೆ ನಿರ್ಮಿಸಲು ಮುಂದಾದರೆ ಮತ್ತು ಮನೆಯನ್ನು ನಿರ್ಮಿಸಲು ನಿಯಮಾನುಸಾರ ನಕ್ಷೆಗೆ ಮಂಜೂರಾತಿ ಬಯಸಿದಲ್ಲಿ ನಿಯಮ ಸರಳೀಕರಣ ಮಾಡಿ, ನಿರ್ದಿಷ್ಟ ಕಾಲಮಿತಿಯೊಳಗೆ ಮಂಜೂರಾತಿ ನೀಡುವಂತೆ ಮಾಡಲು ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದು ಹೇಳಿದರು. 

ನಕಲಿ ಖಾತೆ ಮಾಡಿಸಿಕೊಂಡು ನೋಂದಣಿ ಮಾಡಿಸಲು ಯಾರಿಗೂ ಅವಕಾಶ ಇರದಂತೆ ‘ಕಾವೇರಿ’ ತಂತ್ರಾಂಶದಲ್ಲಿ ಮಾರ್ಪಾಡು ಮಾಡಿದರೆ ಆಗ ಅನಧಿಕೃತ ಬಡಾವಣೆ, ಕಟ್ಟಡಗಳನ್ನು ನಿಯಂತ್ರಿಸಬಹುದು ಎಂದು ಸಚಿವರು ಸಲಹೆ ನೀಡಿದರು.

ಯಾವುದೇ ಸಮುಚ್ಚಯಗಳನ್ನು, ಗುಂಪು ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವಾಗ ಜಲಕಾಯ್ದೆ, ವಾಯುಕಾಯ್ದೆ ಮತ್ತು ಪರಿಸರ ಸಂರಕ್ಷಣೆ ಕಾಯ್ದೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರ ವಿರುದ್ಧ ಕಾನೂನು ರೀತ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಮತ್ತು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಇತರ ಅಧಿಕಾರಿಗಳು ಇದ್ದರು.

ಅಕ್ರಮ: ಮೊದಲ ವರ್ಷ ದಂಡದ ಜತೆ ದುಪ್ಪಟ್ಟು

ತೆರಿಗೆ ಬಡಾವಣೆ ಅನುಮೋದನೆ ನಕ್ಷೆ ಮಂಜೂರಾತಿ ಇಲ್ಲದೆ ನಿಯಮ ಉಲ್ಲಂಘಿಸಿ ಕಂದಾಯ ಭೂಮಿಯಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ಬಿಬಿಎಂಪಿಯ ರೀತಿಯಲ್ಲೇ ರಾಜ್ಯಾದ್ಯಂತ ಏಕರೂಪದ ತೆರಿಗೆ ವಿಧಿಸುವುದು ಸೂಕ್ತ ಎಂದು ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದರು. ಅನಧಿಕೃತವಾಗಿ ಕಟ್ಟಿರುವ ಕಟ್ಟಡಗಳ ಸಕ್ರಮಗೊಳಿಸಲು ಒಂದು ಬಾರಿ ಅವಕಾಶ ನೀಡುವುದು ಸೂಕ್ತ. ಅಕ್ರಮಕ್ಕೆ ತಕ್ಕಂತೆ ದಂಡ ನಿಗದಿ ಮಾಡಿ ಮೊದಲ ವರ್ಷ ದುಪ್ಪಟ್ಟು ತೆರಿಗೆ ವಿಧಿಸಿ ನಂತರದ ವರ್ಷಗಳಲ್ಲಿ ನಿಯಮಿತವಾಗಿ ತೆರಿಗೆ ವಿಧಿಸಬಹುದು ಎಂದೂ ಹೇಳಿದರು. ಈವರೆಗೆ ನಡೆದಿರುವ ಎಲ್ಲ ಸಭೆಗಳಲ್ಲಿ ನಡೆದ ಚರ್ಚೆಯ ಅಂಶಗಳನ್ನು ಕ್ರೋಡೀಕರಿಸಿ ಮಸೂದೆ ರೂಪಿಸಲು ಮತ್ತು ಬಿಬಿಎಂಪಿಯಲ್ಲಿ ಕಟ್ಟಡಗಳಿಗೆ ತೆರಿಗೆ ವಿಧಿಸುತ್ತಿರುವ ರೀತಿಯಲ್ಲೇ ರಾಜ್ಯದ ಇತರ ಪ್ರದೇಶಗಳಲ್ಲೂ ತೆರಿಗೆ ಸಂಗ್ರಹಿಸಲು ನಿಯಮ ರೂಪಿಸುವಂತೆ ಅವರು ಸೂಚಿಸಿದರು.

ನಿಯಮ ಸರಳೀಕರಣ:

ಯಾರೇ ನ್ಯಾಯಸಮ್ಮತವಾಗಿ ಸಾರ್ವಜನಿಕ ಉದ್ದೇಶಕ್ಕೆ ಜಾಗ ಬಿಟ್ಟು ಬಡಾವಣೆ ನಿರ್ಮಿಸಲು ಮುಂದಾದರೆ ಮತ್ತು ಮನೆ ನಿರ್ಮಾಣ ಮಾಡಲು ನಿಯಮಾನುಸಾರ ನಕ್ಷೆ ಮಂಜೂರಾತಿ ಬಯಸಿದಲ್ಲಿ ನಿಯಮ ಸರಳೀಕರಣ ಮಾಡಿ, ಮುಖಾಮುಖಿ ರಹಿತವಾಗಿ ನಿರ್ದಿಷ್ಟ ಕಾಲಮಿತಿಯೊಳಗೆ ಮಂಜೂರಾತಿ ಲಭಿಸುವಂತೆ ತಂತ್ರಾಂಶ ಅಭಿವೃದ್ಧಿ ಪಡಿಸುವ ಅಗತ್ಯವನ್ನೂ ಪ್ರತಿಪಾದಿಸಿದರು.

ಯಾರೊಬ್ಬರೂ ನಕಲಿ ಖಾತೆ ಪಡೆದು ನೋಂದಣಿ ಮಾಡಿಸದಂತೆ ‘ಕಾವೇರಿ’ ತಂತ್ರಾಂಶದಲ್ಲಿ ಮಾರ್ಪಾಡು ಮಾಡಿದರೆ ಆಗ ಅನಧಿಕೃತ ಬಡಾವಣೆ, ಕಟ್ಟಡಗಳನ್ನು ನಿಯಂತ್ರಿಸಬಹುದು ಎಂದು ಈಶ್ವರ ಖಂಡ್ರೆ ಸಲಹೆ ನೀಡಿದರು.

ನೂತನವಾಗಿ ಯಾವುದೇ ಸಮುಚ್ಚಯಗಳನ್ನು, ಗುಂಪು ಮನೆಗಳನ್ನು ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವಾಗ ಜಲ ಕಾಯಿದೆ, ವಾಯು ಕಾಯಿದೆ ಮತ್ತು ಪರಿಸರ ಸಂರಕ್ಷಣೆ ಕಾಯಿದೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರ ವಿರುದ್ಧ ಕಾನೂನು ರೀತ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಇನ್ನು ಮುಂದೆ ನಕ್ಷೆ ಮಂಜೂರಾತಿ ಪಡೆದ ಬಳಿಕ ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸುವವರ ವಿರುದ್ಧವೂ ಕ್ರಮ ಜರುಗಿಸಬೇಕು. ನಿರ್ಮಾಣ ಹಂತದಲ್ಲಿಯೇ ಇಂತಹ ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈಶ್ವರ ಖಂಡ್ರೆ ತಿಳಿಸಿದರು.

ಈವರೆಗೆ ನಡೆದಿರುವ ಎಲ್ಲ ಸಭೆಗಳಲ್ಲಿ ನಡೆದ ಚರ್ಚೆಯ ಅಂಶಗಳನ್ನು ಕ್ರೋಡೀಕರಿಸಿ, ವಿಧೇಯಕ ರೂಪಿಸಲು ಮತ್ತು ಬಿಬಿಎಂಪಿಯಲ್ಲಿ ಬಿ ವಿಧಿಯಡಿ ಕಟ್ಟಡ ತೆರಿಗೆ ವಿಧಿಸುತ್ತಿರುವ ರೀತಿಯಲ್ಲೇ ರಾಜ್ಯದ ಇತರ ಪ್ರದೇಶಗಳಲ್ಲೂ ತೆರಿಗೆ ಸಂಗ್ರಹಿಸಲು ನಿಯಮಾವಳಿ ರೂಪಿಸುವಂತೆ ಸೂಚಿಸಿದರು.

ಸಭೆಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಮತ್ತು ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT