ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜರು ಜಮೀನಿನ ಫಲವತ್ತತೆ ಉಳಿಸಲು ವಿಜ್ಞಾನ ಬಳಸಿ: ಗಿರಿರಾಜ್ ಸಿಂಗ್

Last Updated 8 ಮೇ 2022, 8:18 IST
ಅಕ್ಷರ ಗಾತ್ರ

ಬೆಂಗಳೂರು: ಫಲವತ್ತತೆ ಕಳೆದುಕೊಂಡು ಬಂಜರಾಗಿರುವ ಜಮೀನುಗಳ ಪುನರುಜ್ಜೀವನಕ್ಕೆ ವಿಜ್ಞಾನವನ್ನು ರೈತರು ಪರಿಣಾಮಕಾರಿಯಾಗಿ ಬಳಸಬೇಕು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಸಲಹೆ ನೀಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ನಡೆದ ವಿಶ್ವ ಬ್ಯಾಂಕ್ ನೆರವಿನ ರಾಷ್ಟ್ರಮಟ್ಟದ ರಿವಾರ್ಡ್ ಯೋಜನೆ, ಜಲಾನಯನ ಉತ್ಕೃಷ್ಟತಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 18ರಷ್ಟು ಜನರು ಭಾರತದಲ್ಲಿದ್ದಾರೆ. ಇಲ್ಲಿನ ಜನರಿಗೆ ತಲಾ 0.14 ಹೆಕ್ಟೇರ್ ಜಮೀನು ಮಾತ್ರ ಇದೆ. ಆದರೆ, ಎಲ್ಲ ಜಮೀನು ಫಲವತ್ತಾಗಿ ಉಳಿದಿಲ್ಲ. ಬಂಜರಾಗಿರುವ ಜಮೀನುಗಳನ್ನು ಪುನರುಜ್ಜೀವನಗೊಳಿಸಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ದಿಕ್ಕಿನಲ್ಲಿ ಪ್ರಯತ್ನ ಮಾಡಬೇಕು ಎಂದರು.

2050ರ ವೇಳೆಗೆ ವಿಶ್ವದಲ್ಲಿ ಆಹಾರ ಧಾನ್ಯಗಳ ಕೊರತೆ ಎದುರಾಗಲಿದೆ. ಮನುಷ್ಯರಿಗಾಗಿ ಮಾತ್ರವಲ್ಲ ಕೋಳಿ,‌ ಮೀನು ಸಾಕಣೆಗೆ ಆಹಾರ ಉತ್ಪಾದಿಸುವುದಕ್ಕೂ ಧಾನ್ಯಗಳು ಬೇಕು. ಈ ಬೇಡಿಕೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಯೋಚಿಸಿ, ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಬಂಜರು ಜಮೀನುಗಳ ಪುನರುಜ್ಜೀವನ ಕುರಿತು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ವಿಶ್ವ ಬ್ಯಾಂಕ್ ನೆರವಿನಲ್ಲಿ ಜಲಾನಯನ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಕರ್ನಾಟಕದ ರೈತರು ಪರಿಣಾಮಕಾರಿಯಾಗಿ ಈ ಯೋಜನೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, 'ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಗುರಿ. ಅದನ್ನು ಸಾಧಿಸಲು ರೈತರು ತಮ್ಮ‌ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳಬೇಕು.‌ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಮುಂದಾಗಬೇಕು' ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಒಡಿಶಾ ಕೃಷಿ ಸಚಿವ ಅರುಣ್ ಸಾಹು, ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ, ತೋಟಗಾರಿಕೆ ಸಚಿವ ‌ಮುನಿರತ್ನ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT