ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಹಕ್ಕು ಕಾಯ್ದೆ ಎತ್ತಿ ಹಿಡಿದಿದ್ದು ಸ್ವಾಗತಾರ್ಹ: MLC ಎಚ್. ವಿಶ್ವನಾಥ್

Published 10 ಏಪ್ರಿಲ್ 2024, 13:27 IST
Last Updated 10 ಏಪ್ರಿಲ್ 2024, 13:27 IST
ಅಕ್ಷರ ಗಾತ್ರ

ಮೈಸೂರು: ‘5, 8 ಮತ್ತು 9ನೇ ತರಗತಿ ಮಕ್ಕಳಿಗೆ ಬೋರ್ಡ್‌ ಪರೀಕ್ಷೆ ಮಾಡುವ ಸರ್ಕಾರದ ಕಾನೂನುಬಾಹಿರ ಕ್ರಮವನ್ನು ತಡೆ ಹಿಡಿಯುವ ಮೂಲಕ ಸುಪ್ರೀಂ ಕೋರ್ಟ್‌ ಮೂಲಭೂತ ಹಕ್ಕಾದ ಶಿಕ್ಷಣ ಹಕ್ಕು ಕಾಯ್ದೆಯನ್ನು ಎತ್ತಿ ಹಿಡಿದಿದೆ. ಈ ನಿಟ್ಟಿನಲ್ಲಿ ಸಮರ್ಪಕ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಶಿಕ್ಷಣ ಸಚಿವರನ್ನು ಬದಲಿಸಿ ಅನುಭವ ಉಳ್ಳವರಿಗೆ ಜವಾಬ್ದಾರಿ ಕೊಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ರಾಜ್ಯ ಸರ್ಕಾರವು ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ. ಆದರೆ, ಈಗ ಅಧ್ವಾನ ಮಾಡಿದೆ. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದರಿಂದ ಸರ್ಕಾರ ಬೆತ್ತಲಾಗಿದೆ’ ಎಂದು ಟೀಕಿಸಿದರು.

‘ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಮಕ್ಕಳು 8ನೇ ತರಗತಿ ಮುಗಿಸುವವರೆಗೆ ಯಾವುದೇ ಬೋರ್ಡ್ ಪರೀಕ್ಷೆ ಪಾಸ್ ಮಾಡುವ ಅಗತ್ಯ ಇಲ್ಲವೆಂದು ಗೊತ್ತಿದ್ದರೂ ಸರ್ಕಾರ ಮುಂದಾಗಿದ್ದು ಸರಿಯಲ್ಲ’ ಎಂದರು.

‘ಪರೀಕ್ಷೆ ನಡೆಸುವ ಮತ್ತು ಪ್ರಶ್ನೆಪತ್ರಿಕೆ ಮುದ್ರಿಸುವ ಕಾರ್ಯದಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿರುವುದರಿಂದ ಅದನ್ನು ಮುಚ್ಚಿ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ. ಪ್ರಶ್ನೆಪತ್ರಿಕೆ ಮುದ್ರಣ ಕಾರ್ಯದಲ್ಲಿ ಪ್ರತಿ ಪುಟದ ಬೆಲೆಯನ್ನು ಹೆಚ್ಚಿಸಿರುವುದರಿಂದ ಕಿಕ್ ಬ್ಯಾಕ್ ಪಡೆದಿರುವ ಅನುಮಾನವಿದೆ. ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದು ಕಂಡುಬಂದಿದೆ’ ಎಂದು ಆರೋಪಿಸಿದರು. ‘ಈ ಬಗ್ಗೆ ಕೂಡಲೇ ಇಲಾಖಾ ತನಿಖೆಗೆ ಆದೇಶಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಿದೆ. ಜನರಿಗೆ ನೀಡಿರುವ ಐದು ಗ್ಯಾರಂಟಿ ಜತೆಗೆ ಶಿಕ್ಷಣದ ಗ್ಯಾರಂಟಿಯನ್ನೂ ಮುಖ್ಯವಾಗಿ ಕೊಡಬೇಕು. ಮುಖ್ಯಮಂತ್ರಿಯು ಶಿಕ್ಷಣ ಇಲಾಖೆಯಲ್ಲಿ ಆಗಿರುವ ವೈಫಲ್ಯವನ್ನು ಗಮನಿಸಬೇಕು’ ಎಂದು ಒತ್ತಾಯಿಸಿದರು.

ಉಸ್ತುವಾರಿ ಸಚಿವರ ವಿರುದ್ಧ ಕಿಡಿ

‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ರೈತರ ಸಮಸ್ಯೆಗಳನ್ನು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಜೆ ಹಾಕಿದ್ದಾರೆಯೇ?’ ಎಂದು ಪ್ರಶ್ನಿಸಿದರು.

‘ಚುನಾವಣೆಯಲ್ಲಿ ನಿಮ್ಮ (ಮಹದೇವಪ್ಪ) ಮಗನನ್ನು ಗೆಲ್ಲಿಸಬೇಕು ಅಂತ ಓಡಾಡಬೇಕು ನಿಜ. ಆದರೆ, ನೀವು ಸಭೆ ಮಾಡದಿದ್ದರೆ ಜಿಲ್ಲಾಧಿಕಾರಿಗೆ ಸೂಚಿಸಿ ಕೆಲಸ ಮಾಡಿಸಬೇಕು. ಜಿಲ್ಲಾ ಮಂತ್ರಿ ಅಥವಾ ಜಿಲ್ಲಾಧಿಕಾರಿಯೂ ಕೈಗೆ ಸಿಗುತ್ತಿಲ್ಲ’ ಎಂದು ಟೀಕಿಸಿದರು.

‘ಕೊಳವೆಬಾವಿ ಕೊರೆಯುವವರು ಅಡಿಗೆ ₹100 ಏರಿಕೆ ಮಾಡಿದ್ದಾರೆ. ದಲ್ಲಾಳಿಗಳು ರೈತರಿಂದ ಸುಲಿಗೆ ಮಾಡುತ್ತಿದ್ದಾರೆ. ಸರ್ಕಾರ ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಿಸಿದವರು ರೈತರ ಸಮಸ್ಯೆಗಳನ್ನು ನಿವಾರಿಸಲಿ’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT