ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾ ಮೇಲ್ದಂಡೆ | ಕೇಂದ್ರದಿಂದ ರಾಜ್ಯಕ್ಕೆ ಘೋರ ಅನ್ಯಾಯ: ಸಚಿವ ಎಚ್‌.ಕೆ.ಪಾಟೀಲ

Published : 10 ಸೆಪ್ಟೆಂಬರ್ 2024, 11:13 IST
Last Updated : 10 ಸೆಪ್ಟೆಂಬರ್ 2024, 11:13 IST
ಫಾಲೋ ಮಾಡಿ
Comments

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ತನ್ನ ಪಾಲಿನ ₹5,300 ಕೋಟಿ ಬಿಡುಗಡೆ ಮಾಡುವ ಬದಲಿಗೆ ಹೊಸ ಷರತ್ತುಗಳನ್ನು ವಿಧಿಸುವ ಮೂಲಕ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಘೋರ ಅನ್ಯಾಯ ಮಾಡಿದೆ. ಇದರ ವಿರುದ್ಧ ರಾಜಕೀಯ ಒತ್ತಡ ಹೇರುವುದರ ಜತೆಗೆ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಜಲಶಕ್ತಿ ಕಾರ್ಯದರ್ಶಿ ಅವರು ಇದೇ 5 ರಂದು ಬರೆದಿರುವ ಪತ್ರ ಕರ್ನಾಟಕಕ್ಕೆ ಆಘಾತ ತಂದಿದೆ ಎಂದು ಹೇಳಿದರು.

ಭದ್ರಾ ಯೋಜನೆಗೆ ಸಂಬಂಧಿಸಿದಂತೆ ಸಚಿವಾಲಯಕ್ಕೆ ಹಣಕಾಸಿನ ನವೀಕೃತ ಮಾಹಿತಿ ಸಲ್ಲಿಸಬೇಕು. ಆದ್ದರಿಂದ, ಈವರೆಗೆ ಮಾಡಿದ ವೆಚ್ಚ, ಬಾಕಿ ವೆಚ್ಚ ಮತ್ತು ಬಾಕಿ ವೆಚ್ಚದ ಆಧಾರದ ಮೇಲೆ ಕೇಂದ್ರದಿಂದ ಪಡೆಯಬೇಕಾದ ನೆರವು ಎಷ್ಟು ಎಂಬ ವಿವರಗಳನ್ನೂ ನೀಡಬೇಕು. ಅಲ್ಲದೇ, ಯೋಜನೆಯ ಭೌಗೋಳಿಕ ಹಂಚಿಕೆ, ಆದ್ಯತೆ ಮತ್ತು ಹಣಕಾಸು ಲಭ್ಯತೆಯ ಆಧಾರದಲ್ಲಿ ಹೊಸ ಯೋಜನೆಗಳನ್ನು ಸೇರಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ದೇಬಶ್ರೀ ಮುಖರ್ಜಿ ಪತ್ರ ಬರೆದಿದ್ದಾರೆ ಎಂದು ಪಾಟೀಲ ಹೇಳಿದರು.

 ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಕುರಿತಾಗಿ ಕರ್ನಾಟಕಕ್ಕೆ ನೀಡಿದ್ದ ಬದ್ಧತೆಯಿಂದ ನುಣುಚಿಕೊಂಡಿದೆ. ಇದರ ಅರ್ಥ ₹5,300 ಕೋಟಿ ಅನುದಾನವನ್ನು ನೀಡುವುದಕ್ಕೆ ಹಿಂದೇಟು ಹಾಕುತ್ತಿದೆ. ಬಯಲುಸೀಮೆ ಜನರಿಗೆ ನೀರು ಕೊಡುತ್ತೇವೆ ಎಂದು ಹೇಳಿದ ಕೇಂದ್ರ ಸರ್ಕಾರ ಸಂಪೂರ್ಣ ತಣ್ಣೀರು ಎರಚಿದೆ ಎಂದರು.

ಕೇಂದ್ರ ಸರ್ಕಾರ ನಿಯಮಗಳು ಮತ್ತು ಷರತ್ತುಗಳಂತೆ ಎಲ್ಲಾ ಹಂತಗಳಲ್ಲೂ ಅನುಮೋದನೆಗೊಂಡು ಮುಂಗಡ ಪತ್ರದಲ್ಲಿ ಘೋಷಣೆಯಾಗಿರುವ ಯೋಜನೆಗೆ ಈಗ ನಿರಾಕರಿಸುತ್ತಿರುವುದ ಒಕ್ಕೂಟ ವ್ಯವಸ್ಥೆಯ ಉನ್ನತ ಸಂಪ್ರದಾಯಗಳಿಗೆ ಮತ್ತು ನಿಯಮಗಳಿಗೆ ತದ್ವಿರುದ್ಧವಾಗಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸರ್ಕಾರಗಳು ಯಾವ ಪಕ್ಷದ್ದೇ ಆಗಿರಲಿ ಪಕ್ಷಪಾತ ರಹಿತವಾಗಿ ಜನಹಿತ ಕಾಪಾಡುವ ಮೌಲ್ಯಗಳಿಗೆ ಕೇಂದ್ರದ ಬಿಜೆಪಿ ಸರ್ಕಾರ ತಿಲಾಂಜಲಿ ಇಟ್ಟಿದೆ. ಭದ್ರಾ ಮೇಲ್ದಂಡೆ ಯೋಜನೆಯ ₹5,300 ಕೋಟಿ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಯೋಜನೆಗೆ ರಾಜ್ಯಸರ್ಕಾರ ಈವರೆಗೆ ₹9,713.28 ಕೋಟಿ ಖರ್ಚು ಮಾಡಿದೆ. ಈ ಯೋಜನೆಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ತನ್ನ ಶಕ್ತಿ ಮೀರಿ ಶ್ರಮ ಹಾಕಲಿದೆ. ಈ ಬೆಳವಣಿಗೆ ಕುರಿತು ಸಂಸದರ ಜತೆ ಚರ್ಚಿಸುತ್ತೇವೆ. ಮುಂದಿನ ಸಚಿವ ಸಂಪುಟದಲ್ಲೂ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT