ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಡ್‌ ಮೂಲಕ ನಿಧಿ ಸಂಗ್ರಹಕ್ಕೆ ಸಲಹೆ

ಯುಕೆಪಿ ಯೋಜನೆ: ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ಆಗ್ರಹ
Last Updated 11 ಜುಲೈ 2018, 17:37 IST
ಅಕ್ಷರ ಗಾತ್ರ

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ(ಯುಕೆ‍ಪಿ) ಮೂರನೇ ಹಂತದ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸಲು ಬೇಕಾಗಿರುವ ₹ 50 ಸಾವಿರ ಕೋಟಿಯನ್ನು ಬಾಂಡ್‌ ಮೂಲಕ ಸಂಗ್ರಹಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ವಿಧಾನಸಭೆಯಲ್ಲಿ ಮಂಗಳವಾರ ನಡೆದ ಬಜೆಟ್‌ ಮೇಲಿನ ಚರ್ಚೆಯಲ್ಲಿ ಕೃಷ್ಣಾ ನೀರಾವರಿ ಯೋಜನೆಗಳ ತ್ವರಿತಗತಿಯ ಅನುಷ್ಠಾನ ಮಾಡುವಂತೆ ಬಿಜೆಪಿ ಸದಸ್ಯರು ಆಗ್ರಹಿಸಿದರು.

‘ಹಣ ಒದಗಿಸುವ ದಾರಿಯನ್ನೂ ಹೇಳಿ’ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಕೇಳಿದರು.

ವಿರೋಧಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ, ‘ಸಿದ್ದರಾಮಯ್ಯ ಅವರ ಸರ್ಕಾರ ಕೃಷ್ಣಾ ಯೋಜನೆಗಳಿಗೆ ಐದು ವರ್ಷಗಳಲ್ಲಿ ₹ 50 ಸಾವಿರ ಕೋಟಿ ವ್ಯಯಿಸುವ ವಾಗ್ದಾನ ಮಾಡಿತ್ತು. ಆದರೆ, ಖರ್ಚು ಮಾಡಿದ್ದು ಬರಿ ₹ 8,500 ಕೋಟಿ. ಈ ವೇಗದಲ್ಲಿ ಕೆಲಸ ನಡೆದರೆ 25 ವರ್ಷವಾದರೂ ಕೆಲಸ ಪೂರ್ಣವಾಗುವುದಿಲ್ಲ. ಬಾಂಡ್‌ ಬಿಡುಗಡೆ ಮಾಡಿದರೆ ಯೋಜನೆಗೆ ಬೇಕಾದ ಹಣ ತ್ವರಿತವಾಗಿ ಸಂಗ್ರಹವಾಗಲಿದೆ’ ಎಂದು ಹೇಳಿದರು.

ಚರ್ಚೆಯಲ್ಲಿ ಪಾಲ್ಗೊಂಡ ಬಸವರಾಜ ಬೊಮ್ಮಾಯಿ, ‘ನಾವು ಈ ಹಿಂದೆ ವಿಶ್ವಬ್ಯಾಂಕ್‌ ನೆರವು ಪಡೆದಿದ್ದೆವು. ಅದಕ್ಕಿಂತ ಮೊದಲು ಕೃಷ್ಣಾ ಜಲಭಾಗ್ಯ ಬಾಂಡ್ ಬಿಡುಗಡೆ ಮಾಡಲಾಗಿತ್ತು. ಬಜೆಟ್‌ ಮೇಲಿನ ಅವಲಂಬನೆಗಿಂತ ಇಂತಹ ಹೊರಗಿನ ಹಣಕಾಸು ಮೂಲಗಳತ್ತ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.

‘ಯೋಜನೆಯ ಆದ್ಯತೆಗಳನ್ನು ಗುರುತಿಸಿ, ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿ ಪ್ರಗತಿ ಪರಿಶೀಲನೆಗೆ ಕಾಲಕಾಲಕ್ಕೆ ಉನ್ನತಾಧಿಕಾರ ಸಮಿತಿ ಸಭೆ ನಡೆಸಬೇಕು’ ಎಂದು ಹೇಳಿದರು.

‘ನಮ್ಮ ಕ್ಷೇತ್ರದ 11 ಹಳ್ಳಿಗಳನ್ನು ಸ್ಥಳಾಂತರ ಮಾಡದೆ, ಅವುಗಳ ಸುತ್ತ ನಾರ್ವೆ ಮಾದರಿ ತಡೆಗೋಡೆ ಕಟ್ಟುತ್ತೇವೆ ಎಂದು ಹಿಂದಿನ ಜಲ ಸಂಪನ್ಮೂಲ ಸಚಿವರು ಹೇಳಿದ್ದರು. ತಡೆಗೋಡೆಯಿಂದ ಪ್ರಯೋಜನ ಇಲ್ಲ. ನೀರು ಬಸಿದು ಮನೆಯೊಳಗೆ ಬರುತ್ತದೆ. ಹಾವು, ಚೇಳು, ಕಪ್ಪೆಗಳು ಈಗಲೇ ಬರುತ್ತಿವೆ. ಈ ಎಲ್ಲ ಹಳ್ಳಿಗಳನ್ನು ಸ್ಥಳಾಂತರ ಮಾಡಲೇಬೇಕು’ ಎಂದು ಗೋವಿಂದ ಕಾರಜೋಳ ಆಗ್ರಹಿಸಿದರು.

***

519.60 ಮೀಟರ್‌ - ಆಲಮಟ್ಟಿ ಅಣೆಕಟ್ಟೆಯ ಈಗಿನ ಎತ್ತರ

524.256 ಮೀಟರ್‌ - ಆಲಮಟ್ಟಿ ಅಣೆಕಟ್ಟೆಯ ಉದ್ದೇಶಿತ ಎತ್ತರ

130.90 ಟಿಎಂಸಿ ಅಡಿ - ಅಣೆಕಟ್ಟೆ ಎತ್ತರಿಸುವ ಮೂಲಕ ಹೆಚ್ಚಲಿರುವ ನೀರು ಸಂಗ್ರಹಣಾ ಸಾಮರ್ಥ್ಯದ ಪ್ರಮಾಣ

₹ 17,207 ಕೋಟಿ - ಮೂರನೇ ಹಂತದ ಯೋಜನೆಗೆ ಮೊದಲು ಮಾಡಲಾಗಿದ್ದ ಅಂದಾಜು

₹ 50 ಸಾವಿರ ಕೋಟಿ - ಮೂರನೇ ಹಂತದ ಯೋಜನೆಗೆ ಪರಿಷ್ಕೃತ ಅಂದಾಜು

20 - ಸ್ಥಳಾಂತರ ಆಗಬೇಕಾದ ಹಳ್ಳಿಗಳು

5 ಲಕ್ಷ ಹೆಕ್ಟೇರ್‌ - ಸದ್ಯ ಕೃಷ್ಣಾ ಯೋಜನೆಯ ನೀರಾವರಿ ಪ್ರದೇಶ

5.30 ಲಕ್ಷ ಹೆಕ್ಟೇರ್‌ - ಆಲಮಟ್ಟಿ ಎತ್ತರದಿಂದ ಹೆಚ್ಚುವರಿಯಾಗಿ ನೀರಾವರಿ ವ್ಯಾಪ್ತಿಗೆ ಒಳಪಡುವ ಪ್ರದೇಶ

ಏನಿದು ಬಾಂಡ್‌?

ದೇವೇಗೌಡರ ನೇತೃತ್ವದ ಸರ್ಕಾರ ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಕೃಷ್ಣಾ ಜಲ ಭಾಗ್ಯ ನಿಧಿ ಸ್ಥಾಪಿಸಿತು. 1996–98ರ ಅವಧಿಯಲ್ಲಿ ಬಾಂಡ್‌ಗಳನ್ನು ವಿತರಿಸುವ ಮೂಲಕ ಯೋಜನೆ ಅನುಷ್ಠಾನಕ್ಕೆ ಅಗತ್ಯವಾದ ಹಣವನ್ನು ಸಂಗ್ರಹ ಮಾಡಿತ್ತು. ಹತ್ತು ವರ್ಷಗಳಲ್ಲಿ ಆ ಮೊತ್ತವನ್ನು ಹಿಂದಿರುಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT