ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಸಾಲ ಚುಕ್ತಾ; ಬ್ಯಾಂಕ್‌ ಸಾಲ ಮನ್ನಾ: ರೈತರಿಗೆ ಹಿತ; ಬಡ್ಡಿಕೋರರಿಗೆ ಹೊಡೆತ

₹2 ಲಕ್ಷದವರೆಗಿನ ಸುಸ್ತಿ ಸಾಲ ಮನ್ನಾ – ‘ವರ’ಮಹಾಲಕ್ಷ್ಮಿ ಉಡುಗೊರೆ
Last Updated 24 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲೇವಾದೇವಿಗಾರರು, ಖಾಸಗಿ ಹಣಕಾಸು ಸಂಸ್ಥೆಗಳು, ಗಿರವಿ ಅಂಗಡಿಗಳಲ್ಲಿ ರೈತರು, ಭೂರಹಿತ ಕೃಷಿ ಕಾರ್ಮಿಕರು ಹಾಗೂ ದುರ್ಬಲ ವರ್ಗದವರು ಮಾಡಿರುವ ಸಾಲವನ್ನು ಕಟ್ಟಬೇಕಿಲ್ಲ.

ಈ ಎಲ್ಲ ಸಾಲವನ್ನು ಏಕಗಂಟಿನಲ್ಲಿ ‘ಚುಕ್ತಾ’ ಮಾಡುವ ಕ್ರಾಂತಿಕಾರಕ ನಿರ್ಣಯವನ್ನು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಕೈಗೊಂಡಿದೆ. 1976ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ತಂದಿದ್ದ ‘ಋಣ ಪರಿಹಾರ ಕಾಯ್ದೆ’ಯ ಮಾದರಿಯ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಷ್ಟ್ರಪತಿಗಳ ಅನುಮೋದನೆ ನಂತರ ಇದನ್ನು ಜಾರಿಗೊಳಿಸಲಾಗುತ್ತದೆ.

ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ್ದ ಬೆಳೆ ಸಾಲ ಮನ್ನಾ ಮಾಡಿದ್ದ ರಾಜ್ಯ ಸರ್ಕಾರ, ಈಗ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲವನ್ನೂ ಮನ್ನಾ ಮಾಡುವ ನಿರ್ಧಾರ ಪ್ರಕಟಿಸುವ ಮೂಲಕ ‘ವರ’ ಮಹಾಲಕ್ಷ್ಮಿ ಹಬ್ಬದ ಉಡುಗೊರೆ ನೀಡಿದೆ. ಹಬ್ಬದ ವೇಳೆ ನಾಡಿನ ಜನರಿಗೆ ಬಹು ದೊಡ್ಡ ಉಡುಗೊರೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೆಲವು ದಿನಗಳ ಹಿಂದೆ ಘೋಷಿಸಿದ್ದರು.

ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಈ ಮಹತ್ವದ ತೀರ್ಮಾನಗಳನ್ನು ಪ್ರಕಟಿಸಿದರು. ಕೈ ಸಾಲವೂ ಚುಕ್ತಾ ಆಗಲಿದೆ ಎಂದು ತಿಳಿಸಿದರು.

ಆದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅನುಮತಿ ಪಡೆದಿರುವ ಖಾಸಗಿ ಬ್ಯಾಂಕ್‌ಗಳು, ಸೊಸೈಟಿಗಳು, ಭಾರತೀಯ ಜೀವ ವಿಮಾ ನಿಗಮ ಹಾಗೂ ಸರ್ಕಾರದ ಕಂಪನಿಗಳಲ್ಲಿ ಮಾಡಿರುವ ಸಾಲಕ್ಕೆ ಈ ಸುಗ್ರೀವಾಜ್ಞೆ ಅನ್ವಯಿಸುವುದಿಲ್ಲ.

ಸಂಪುಟದ ಸಹೋದ್ಯೋಗಿಗಳು ಕಕ್ಕಾಬಿಕ್ಕಿ: ಖಾಸಗಿ ಹಾಗೂ ಕೈಸಾಲದಿಂದ ಜನರಿಗೆ ಮುಕ್ತಿ ಕೊಡುವ ವಿಷಯದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಪ್ರಸ್ತಾಪಿಸಿದಾಗ ಸಂಪುಟದ ಸಹೋದ್ಯೋಗಿಗಳು ಕಕ್ಕಾಬಿಕ್ಕಿಯಾದರು.

‘45 ವರ್ಷಗಳ ಹಿಂದೆ ಅರಸು ಅವರು ಕಾಯ್ದೆ ತಂದಿದ್ದರು. ಆಗಿನ ಸನ್ನಿವೇಶ ಬೇರೆ, ಈಗಿನ ಸ್ಥಿತಿ ಬೇರೆ. ಈಗ ಅನುಷ್ಠಾನ ಸಾಧ್ಯವೇ’ ಎಂದು ಕೆಲವು ಹಿರಿಯ ಸಚಿವರು ಪ್ರಶ್ನಿಸಿದರು. ‘ಅರಸು ಅವರ ನಡೆಗೆ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಕಾಯ್ದೆ ಪರವಾಗಿ ನ್ಯಾಯಾಲಯವೂ ಬೆಂಬಲ ನೀಡಿತ್ತು. ಈಗಲೂ ನ್ಯಾಯಾಲಯದ ಬೆಂಬಲ ಸಿಗುವ ವಿಶ್ವಾಸ ಇದೆ. ಈನಡೆಯಿಂದ ರಾಜ್ಯದ ಬಹುಸಂಖ್ಯಾತರಿಗೆ ಅನುಕೂಲವಾಗಲಿದೆ’ ಎಂದು ಕುಮಾರಸ್ವಾಮಿ ಅವರು ಮನವೊಲಿಸಿದರು ಎಂದು ಸಚಿವರೊಬ್ಬರು ತಿಳಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ

ರಾಷ್ಟ್ರೀಕೃತ ಬ್ಯಾಂಕ್‌ಗಳ ₹2 ಲಕ್ಷದವರೆಗಿನ ಸುಸ್ತಿಸಾಲದ ಜತೆಗೆ ₹25 ಸಾವಿರದವರೆಗಿನ ಚಾಲ್ತಿ ಬೆಳೆಸಾಲ ಮನ್ನಾದ ಸೌಲಭ್ಯವೂ ರೈತರಿಗೆ ಸಿಗಲಿದೆ. ಈ ರೀತಿಯ ಒಟ್ಟು ಸಾಲ ₹30,163 ಕೋಟಿಗಳಷ್ಟಿದ್ದು, ಇದರಿಂದಾಗಿ 23 ಲಕ್ಷ ರೈತರಿಗೆ (17 ಲಕ್ಷ ಮಂದಿ ಸುಸ್ತಿಸಾಲ ಹಾಗೂ 6 ಲಕ್ಷ ಮಂದಿ ಚಾಲ್ತಿ ಸಾಲ ಹೊಂದಿರುವವರು) ಅನುಕೂಲವಾಗಲಿದೆ.

ಸಾಲಮನ್ನಾ ಯೋಜನೆ ಅನುಷ್ಠಾನಗೊಳಿಸಿ, ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ನೀಡಲು ಇಬ್ಬರು ಐಎಎಸ್ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು ಎಂದೂ ಕುಮಾರಸ್ವಾಮಿ ತಿಳಿಸಿದರು.

ನಾಲ್ಕು ವರ್ಷಗಳಲ್ಲಿ ಪಾವತಿ

ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮುಂದಿನ ನಾಲ್ಕು ವರ್ಷಗಳಲ್ಲಿ ಸರ್ಕಾರ ಹಣ ಪಾವತಿಸಲಿದೆ. ಈ ವರ್ಷದಿಂದಲೇ ಶೇ 12ರ ದರದಲ್ಲಿ ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರ ಪಾವತಿಸಲಿದೆ. ‘ಸಾಲ ಮನ್ನಾ ಮಾಡಲು ರಾಷ್ಟ್ರೀಕೃತ ಬ್ಯಾಂಕ್‌ಗಳು ಆರಂಭದಲ್ಲಿ ಒಪ್ಪಿದ್ದವು. ಕೆಲವರ ಮಾತು ಕೇಳಿಕೊಂಡು ಬಳಿಕ ಕೆಲವು ಬ್ಯಾಂಕ್‌ಗಳು ನಿಲುವು ಬದಲಾಯಿಸಿದವು. ಈ ರೀತಿ ಮಾಡಿದವರಿಗೆ ಹಾಗೂ ದಾರಿ ತಪ್ಪಿಸಿದವರಿಗೆ ಒಳ್ಳೆಯದಾಗಲಿ. ಅವರಿಗೆ ಉಡುಗೊರೆ ನೀಡುತ್ತಿದ್ದೇನೆ’ ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದರು.

‘ನಾಲ್ಕು ವರ್ಷಗಳಲ್ಲಿ ಪಾವತಿ ಮಾಡುವ ಪ್ರಸ್ತಾಪಕ್ಕೆ ಬ್ಯಾಂಕ್‌ಗಳು ಒಪ್ಪಿವೆ. ರೈತರಿಗೆ ಕೂಡಲೇ ಋಣಮುಕ್ತ ಪ್ರಮಾಣ ಪತ್ರ ನೀಡಲಾಗುತ್ತದೆ’ ಎಂದರು. ‘ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನೀಡಲು ಈ ವರ್ಷದ ಬಜೆಟ್‌ನಲ್ಲಿ ₹6,500 ಕೋಟಿ ಇಟ್ಟಿದ್ದೇವೆ. 2019–20ರಲ್ಲಿ ₹8,656 ಕೋಟಿ, 20–21ರಲ್ಲಿ ₹7,876 ಕೋಟಿ, 21–22ರಲ್ಲಿ ₹7,131 ಕೋಟಿ ಪಾವತಿ ಮಾಡಲಿದ್ದೇವೆ’ ಎಂದರು. ಬ್ಯಾಂಕ್‌ಗಳಿಗೆ ಹಣ ಪಾವತಿ ಮಾಡಲು ನಾಲ್ಕು ವರ್ಷಗಳವರೆಗೆ ಕಾಯುವುದೂ ಇಲ್ಲ ಎಂದರು.

ಚಕ್ರಬಡ್ಡಿಗೆ ಬರೆ: ಸುಗ್ರೀವಾಜ್ಞೆಯ ರಕ್ಷಣೆ

ಚಕ್ರಬಡ್ಡಿ, ಮೀಟರ್‌ ಬಡ್ಡಿ ವಸೂಲಿ ಮಾಡುವವರಿಂದ ರೈತರು ಹಾಗೂ ಬಡವರನ್ನು ರಕ್ಷಿಸಲು ಸುಗ್ರೀವಾಜ್ಞೆ ಅನುಕೂಲ ಕಲ್ಪಿಸಲಿದೆ.

*ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಹಾಗೂ ₹1.25 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ಕೈ ಸಾಲ ಅಥವಾ ಲೇವಾದೇವಿಗಾರರಿಂದ ಮಾಡಿರುವ ಸಾಲ ಕಟ್ಟಬೇಕಿಲ್ಲ.

*ಸ್ಥಿರ ಅಥವಾ ಚರಾಸ್ತಿಯನ್ನು ಅಡವಿಟ್ಟು ಪಡೆದ ಸಾಲವನ್ನು ಕೂಡ ಪಾವತಿಸಬೇಕಿಲ್ಲ.

*ಇಂತಹ ಸಾಲಕ್ಕೆ ಸಂಬಂಧಿಸಿದಂತೆ ಲೇವಾದೇವಿಗಾರರು ನ್ಯಾಯಾಲಯದ ಮೆಟ್ಟಿಲೇರಲು ಸುಗ್ರೀವಾಜ್ಞೆ ನಿರ್ಬಂಧ ವಿಧಿಸುತ್ತದೆ.

*ಲೇವಾದೇವಿಗಾರರು ಸಾಲ ನೀಡುವಾಗ ಒಪ್ಪಂದ ಮಾಡಿಕೊಂಡಿದ್ದರೂ ಈ ಸಂಬಂಧ ಡಿಕ್ರಿ, ಆದೇಶ ಇದ್ದರೂ ಇಲ್ಲಿ ಅನ್ವಯವಾಗುವುದಿಲ್ಲ.

*ಕಾಯ್ದೆ ಉಲ್ಲಂಘನೆ ಮಾಡಿದವರಿಗೆ 1 ವರ್ಷ ಜೈಲು ಹಾಗೂ ₹1.25 ಲಕ್ಷದವರೆಗೆ ದಂಡ ವಿಧಿಸಲು ಸುಗ್ರೀವಾಜ್ಞೆ ಅವಕಾಶ ಕಲ್ಪಿಸಲಿದೆ.

***

* ಸಾಲದ ಸುಳಿಯಲ್ಲಿ ಸಿಲುಕಿದವರನ್ನು ಮುಕ್ತಗೊಳಿಸಿ ಸ್ವತಂತ್ರ ಬದುಕು ನಿರ್ವಹಿಸಲು ಕ್ರಾಂತಿಕಾರಕ ಹೆಜ್ಜೆಯನ್ನು ಸರ್ಕಾರ ಇಟ್ಟಿದೆ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT