ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮ ಹಗರಣ | ಸರ್ಕಾರದ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ: ನಾರಾಯಣಸ್ವಾಮಿ

Published : 11 ಸೆಪ್ಟೆಂಬರ್ 2024, 15:12 IST
Last Updated : 11 ಸೆಪ್ಟೆಂಬರ್ 2024, 15:12 IST
ಫಾಲೋ ಮಾಡಿ
Comments

ಬೆಂಗಳೂರು: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ  ಜನಾಂದೋಲನ ರೂಪಿಸಲು ಉತ್ತರ ಕರ್ನಾಟಕ ಭಾಗದಲ್ಲಿ ಪಾದಯಾತ್ರೆ ನಡೆಸಲು ಪಕ್ಷ ಉದ್ದೇಶಿಸಿದ್ದು, ವರಿಷ್ಠರು ಇದಕ್ಕೆ ಅನುಮತಿ ನೀಡಿದ್ದಾರೆ’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಬಳ್ಳಾರಿಗೆ ಪಾದಯಾತ್ರೆ ನಡೆಸಲಾಗುವುದು. ಎಲ್ಲಿಂದ ಯಾತ್ರೆ ಮತ್ತು ಯಾವಾಗ ಎಂಬುದನ್ನು ಅಧ್ಯಕ್ಷರು ಮತ್ತು ಇತರ ನಾಯಕರು ಸೇರಿ ತೀರ್ಮಾನಿಸುತ್ತಾರೆ. ಬಹುತೇಕ ಮುಂದಿನ ತಿಂಗಳ ಕೊನೆಯ ವೇಳೆಗೆ ನಡೆಯುವ ಸಾಧ್ಯತೆ ಇದೆ. ಒಟ್ಟು ಎರಡು ಹಂತಗಳಲ್ಲಿ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.

‘ಮೈಸೂರು ಚಲೋ ಪಾದಯಾತ್ರೆ ಮುಡಾ ಹಗರಣಕ್ಕೆ ಸೀಮಿತವಾಗಿತ್ತು. ಅಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿಚಾರ ಹೆಚ್ಚು ಪ್ರಸ್ತಾಪವಾಗಲಿಲ್ಲ. ಬಿಜೆಪಿಯ ಹೋರಾಟದಿಂದಾಗಿಯೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದೀಗ ನಾಗೇಂದ್ರ ಅವರೇ ಈ ಹಗರಣದ ‘ಮಾಸ್ಟರ್ ಮೈಂಡ್‌’ ಎಂಬುದು ಇಡಿ ತನಿಖೆಯಿಂದ ಬಯಲಾಗಿದೆ. ರಾಜ್ಯ ಸರ್ಕಾರ ಹಗರಣವನ್ನು ಮುಚ್ಚಿ ಹಾಕಲೆಂದೇ ಎಸ್‌ಐಟಿ ತನಿಖೆಗೆ ಆದೇಶಿಸಿತ್ತು. ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಅವರಿಗೆ ಎಸ್‌ಐಟಿ ಕ್ಲೀನ್ ಚಿಟ್‌ ನೀಡಿದೆ’ ಎಂದು ದೂರಿದರು.

‘ಮುಖ್ಯಮಂತ್ರಿಯವರ ಅಧೀನದ ಇಲಾಖೆಯಲ್ಲೇ ನಡೆದ ಇಷ್ಟು ದೊಡ್ಡ ಹಗರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಸಂಚು ನಡೆಸಿದ್ದರು. ಎಸ್‌ಐಟಿಗೆ ಮೂರು ಕಾಸಿನ ಮಾರ್ಯದೆ ಇದೆಯಾ? ₹20 ಕೋಟಿ ಬಳ್ಳಾರಿ ಚುನಾವಣೆಗೆ ಬಳಕೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಇದಕ್ಕೆ ಮುಖ್ಯಮಂತ್ರಿಯವರು ಏನು ಹೇಳುತ್ತಾರೆ? ಹಗರಣದಲ್ಲಿ ಭಾಗಿಯಾಗಿರುವ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರನ್ನು ಇನ್ನೂ ಏಕೆ ಇಟ್ಟುಕೊಂಡಿದ್ದೀರಿ’ ಎಂದು ಪ್ರಶ್ನಿಸಿದರು.

ಹನಿಟ್ರ್ಯಾಪ್‌ ಪ್ರಕರಣ ಸಿಬಿಐಗೆ ಕೊಡಿ:

‘ಕಲಬುರಗಿಯಲ್ಲಿ ಕಾನೂನು– ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಎಲ್ಲ ಕೆಟ್ಟ ಪರಂಪರೆಯ ಕಥೆಗಳೂ ಅಲ್ಲಿಂದ ಆರಂಭ ಆಗುತ್ತಿವೆ. ನಿನ್ನೆ ಹನಿಟ್ರ್ಯಾಪ್‌ ವಿಚಾರ ಕೇಳಿ ಬಂದಿದೆ. 6 ಜನರನ್ನು ಬಂಧಿಸಿದ್ದು, ಇದರ ಹಿಂದೆ ಬಹಳ ಜನರಿದ್ದಾರೆ. ಪ್ರಿಯಾಂಕ್‌ ಖರ್ಗೆ ಕೆಟ್ಟ ಹೆಸರು ಬಾರದಂತೆ ಶರಣಾಗತಿ ಆಗುತ್ತೇವೆ ಎಂದು ಆರೋಪಿಗಳು ಹೇಳಿದ್ದಾರೆ. ಇದರ ಬಗ್ಗೆ ಸಿಬಿಐ ತನಿಖೆಯೇ ಆಗಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT