ಬೆಂಗಳೂರು: ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿ ಗ್ರಾಮದ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಲಾದ ಪ್ರಕರಣದಲ್ಲಿ; ಘಟನೆಯನ್ನು ಮೂಕ ಪ್ರೇಕ್ಷಕರಾಗಿ ಗಮನಿಸಿದ ಗ್ರಾಮಸ್ಥರ ಮೇಲೆ ಪುಂಡುಗಂದಾಯದ (ಪುಂಡಾಟದ ಮೂಲಕ ಸಮಾಜದ ಶಾಂತಿಗೆ ಭಂಗ ತಂದವರ ಊರಿನ ಮೇಲೆ ಸರ್ಕಾರ ಹೇರುವ ಒತ್ತಾಯದ ತೆರಿಗೆ) ಮಾದರಿಯಲ್ಲಿ ಸಾಮೂಹಿಕ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು‘ ಎಂದು ಹೈಕೋರ್ಟ್ ಆದೇಶಿಸಿದೆ.
ಘಟನೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ’ಇದಕ್ಕೊಂದು ಸಂದೇಶ ರವಾನೆಯಾಗಲೇಬೇಕು. ಗ್ರಾಮದ ಎಲ್ಲರಿಗೂ, ನಿರ್ದಿಷ್ಟವಾಗಿ ತಪ್ಪು ಮಾಡಿದವರು ಹಣ ಪಾವತಿಸುವಂತೆ ಮಾಡಬೇಕು. ಬ್ರಿಟಿಷರ ಆಡಳಿತದಲ್ಲಿ ಬಂಗಾಳದ ಮೊದಲ ಗವರ್ನರ್ ಆಗಿದ್ದ ವಿಲಿಯಮ್ ಬೆಂಟಿಕ್, ಕಳ್ಳತನ ಮಾಡುವವರಿದ್ದ ಗ್ರಾಮಕ್ಕೆ ಪುಂಡ ದಂಡ ಎಂಬ ತೆರಿಗೆ ವಿಧಿಸುತ್ತಿದ್ದ. ಅದೇ ಮಾದರಿಯಲ್ಲಿ ಈ ಘಟನೆಯಲ್ಲೂ ತೆರಿಗೆ ವಿಧಿಸಿದ್ದೇ ಆದರೆ ಜನರಿಗೆ ಸ್ವಲ್ಪವಾದರೂ ಜವಾಬ್ದಾರಿ ಹೆಚ್ಚಾಗಲಿದೆ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.
‘ನಾವು ನಾಗರಿಕ ಸಮಾಜ ಎಂದು ಹೇಳಿಕೊಳ್ಳುತ್ತೇವೆ. ಆದರೆ, ಇಂತಹ ಘಟನೆ ನಡೆದಾಗ ಗ್ರಾಮಸ್ಥರ ಪಾತ್ರ ಏನು? ಜನರು ಏಕೆ ಮೂಕ ಪ್ರೇಕ್ಷಕರಾಗಿದ್ದರು ಎಂಬುದಕ್ಕೆ ಕಾರಣಗಳಿವೆಯೇ? ಅವರು ಪೊಲೀಸ್, ನ್ಯಾಯಾಂಗ, ರಾಜಕೀಯ ವ್ಯಕ್ತಿಗಳಿಗೆ ಹೆದರಿದ್ದಾರೆಯೇ? ಗ್ರಾಮದ ಸಾಕ್ಷರತೆಯ ಪ್ರಮಾಣವೇನು? ಸರ್ಕಾರ ಯಾಕೆ ಯಾವಾಗಲೂ ಆಲಸಿಯಾಗಿ ವರ್ತಿಸುತ್ತದೆ? ಇಂತಹ ಘಟನೆ ನಡೆದಾಗ ಜನರ ಭಾಗಿದಾರಿಕೆ ಏಕಿಲ್ಲ? ಇಂತಹವುಗಳನ್ನು ನಿಯಂತ್ರಿಸುವುದಾದರೂ ಹೇಗೆ..?’ ಎಂದು ನ್ಯಾಯಪೀಠ, ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಿತು.
‘ನಮ್ಮನ್ನು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಿಲುಕಿಸಲಾಗುತ್ತದೆ. ನಮಗೆ ಸೂಕ್ತ ಗೌರವ ಸಿಗುವುದಿಲ್ಲ ಎಂದು ಸಾಕ್ಷಿಗಳು ಹೆದರುತ್ತಾರೆ. ಹೀಗಾಗಿ, ಸಾಮಾನ್ಯರು ಅಪರಾಧದ ಬಗ್ಗೆ ಮಾಹಿತಿ ನೀಡಲು ಮುಂದಾಗುವುದಿಲ್ಲ. ಈ ಸಾಮಾಜಿಕ ಆಯಾಮದ ಬಗ್ಗೆಯೂ ನಾವು ಗಮನಹರಿಸಬೇಕಿದೆ‘ ಎಂದ ನ್ಯಾಯಪೀಠ, ‘ಬಹಳಷ್ಟು ಪ್ರಕರಣಗಳಲ್ಲಿ ಸಾಕ್ಷಿಗಳು ಮತ್ತು ಆರೋಪಿಗಳಿಗೆ ವ್ಯತ್ಯಾಸವೇ ಇರುವುದಿಲ್ಲ’ ಎಂದು ಕಟುವಾಗಿ ನುಡಿಯಿತು.
‘ಗಂಡು ಮಕ್ಕಳಿಗೆ ಕಲಿಸಿ‘
‘ಸಮಾಜದಲ್ಲಿ ಹೆಣ್ಣು ಮಗುವನ್ನು ರಕ್ಷಿಸಲು ಬೇಟಾ ಪಡಾವೋ ಆಗಬೇಕು ಆ ಕುರಿತು ಗಂಡು ಮಗುವಿಗೆ ಮನದಟ್ಟು ಮಾಡಬೇಕು‘ ಎಂದ ನ್ಯಾಯಪೀಠ ‘ಮಹಿಳೆಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಪುರುಷರಿಗೆ ಕಲಿಸಬೇಕಾಗಿದೆ‘ ಎಂದು ಹೇಳಿತು. ‘ವಂಟಮುರಿ ಗ್ರಾಮದಲ್ಲಿ ಸುಮಾರು 800 ಜನರಿದ್ದಾರೆ. ಘಟನೆ ವೇಳೆ 13 ಮಂದಿ ಮಹಿಳೆಯ ಮೇಲೆ ಆಕ್ರಮಣ ನಡೆಸಿದ್ದಾರೆ. 60ಕ್ಕೂ ಹೆಚ್ಚು ಮಂದಿ ಘಟನೆಗೆ ಮೂಕ ಪ್ರೇಕ್ಷಕರಾಗಿದ್ದಾರೆ. ಅವರಲ್ಲಿ ಜಹಂಗೀರ್ ಎನ್ನುವ ವ್ಯಕ್ತಿ ಮಹಿಳೆಯ ರಕ್ಷಣೆಗೆ ಮುಂದಾಗಿ ಹಲ್ಲೆಗೊಳಗಾಗಿದ್ದಾರೆ. ಇನ್ನುಳಿದ ಜನ ಯಾವ ಕಾರಣಕ್ಕೆ ಮುಂದಾಗಲಿಲ್ಲ‘ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು. ರೋಮ್ ಸಾಮ್ರಾಜ್ಯವನ್ನು ಉಲ್ಲೇಖಿಸಿದ ನ್ಯಾಯಪೀಠ ‘ಉತ್ತಮ ಸಮಾಜವನ್ನು ನಿರ್ಮಿಸದ ಹೊರತು ಉತ್ತಮ ರಾಷ್ಟ್ರನಿರ್ಮಾಣ ಸಾಧ್ಯವಿಲ್ಲ‘ ಎಂದು ಹೇಳಿತು.
ಸಂತ್ರಸ್ತೆಗೆ ಪರಿಹಾರ
ಎ.ಜಿ ವಿಚಾರಣೆ ವೇಳೆ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ‘ಪ್ರಕರಣದಲ್ಲಿ ಇಬ್ಬರನ್ನು ಹೊರತುಪಡಿಸಿ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹ 5 ಲಕ್ಷ ಪರಿಹಾರ ಹಾಗೂ 2.5 ಎಕರೆ ಜಮೀನು ಒದಗಿಸಲಾಗುವುದು. ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಯನ್ನು ಈಗಾಗಲೇ ಅಮಾನತು ಪಡಿಸಲಾಗಿದೆ‘ ಎಂದು ವಿವರಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ಸಂತ್ರಸ್ತ ಮಹಿಳೆಗೆ ಕಾನೂನು ಸೇವಾ ಪ್ರಾಧಿಕಾರದಿಂದ ನೀಡುವ ₹ 50 ಸಾವಿರ ಪರಿಹಾರದ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶಿಸಿತು. ತನಿಖೆಯ ಪ್ರಗತಿಯ ವರದಿಯನ್ನು ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಜನವರಿ ಮೂರನೇ ವಾರಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.