ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಕನ ಮೊಬೈಲ್‌ನಲ್ಲಿ ಬಾಲಕಿಯರ ವಿಡಿಯೊ: ಎಫ್‌ಐಆರ್‌ ರದ್ದತಿಗೆ ನಕಾರ

Published : 11 ಸೆಪ್ಟೆಂಬರ್ 2024, 15:20 IST
Last Updated : 11 ಸೆಪ್ಟೆಂಬರ್ 2024, 15:20 IST
ಫಾಲೋ ಮಾಡಿ
Comments

ಬೆಂಗಳೂರು: ಸರ್ಕಾರಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ವೇಳೆ ಫೋಟೊಗಳನ್ನು ಕ್ಲಿಕ್ಕಿಸಿದ ಹಾಗೂ ವಿಡಿಯೊ ಚಿತ್ರೀಕರಣ ಮಾಡಿದ ಆರೋಪ ಹೊತ್ತಿರುವ ವಸತಿ ಶಾಲೆಯೊಂದರ ಚಿತ್ರಕಲಾ ಶಿಕ್ಷಕನ ವಿರುದ್ಧದ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

‘ನನ್ನ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಬೇಕು’ ಎಂದು ಕೋರಿ ವಸತಿ ಶಾಲೆಯ ಶಿಕ್ಷಕ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಆರೋಪಿ ಎಸಗಿದ್ದಾನೆ ಎನ್ನಲಾದ ಕೃತ್ಯ ನಿಜಕ್ಕೂ ಅಸಭ್ಯ ಹಾಗೂ ಭಯಾನಕವಾಗಿದೆ’ ಎಂದು ತೀವ್ರ ಕಳವಳ ವ್ಯಕ್ತಪಡಿಸಿದೆ.

‘ಅರ್ಜಿದಾರ ಶಿಕ್ಷಕ 5 ಮೊಬೈಲ್‌ ಪೋನ್‌ಗಳನ್ನು ಹೊಂದಿದ್ದು, ಪ್ರತಿ ಮೊಬೈಲ್‌ನಲ್ಲೂ ಸುಮಾರು ಸಾವಿರ ಫೋಟೊಗಳು ಹಾಗೂ ನೂರಾರು ವಿಡಿಯೊಗಳಿವೆ ಎಂಬುದು ಪ್ರಕರಣದ ತನಿಖಾ ವರದಿ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ದಾಖಲೆಗಳಿಂದ ಕಂಡುಬಂದಿದೆ. ಈ ವಿಚಾರ ನಿಜಕ್ಕೂ ಆಘಾತಕಾರಿ’ ಎಂದು ಎಂದು ನ್ಯಾಯಪೀಠ ವ್ಯಾಕುಲ ಹೊರಹಾಕಿದೆ.

‘ಒಬ್ಬ ಶಿಕ್ಷಕನಾಗಿ ಈ ರೀತಿಯ ವಿಡಿಯೊ ಚಿತ್ರೀಕರಿಸುವುದು ನಿಜವಾಗಿಯೂ ಅಸಭ್ಯತನದ ಪರಮಾವಧಿ. ಇಂತಹ ಕೃತ್ಯಗಳು ಕ್ಷಮಾರ್ಹವಲ್ಲ. ಬೇಕಿದ್ದರೆ ಅರ್ಜಿದಾರ ಪೂರ್ಣ ಪ್ರಮಾಣದ ವಿಚಾರಣೆ ಎದುರಿಸಿ ಆರೋಪಮುಕ್ತನಾಗಿ ಹೊರಬರಲಿ. ಆದರೆ, ಈ ಹಂತದಲ್ಲಿ ಎಫ್‌ಐಆರ್‌ ರದ್ದುಪಡಿಸಿದರೆ ಆತನ ಅಕ್ರಮ ಚುಟವಟಿಕೆಯನ್ನು ಉತ್ತೇಜಿಸಿದಂತಾಗುತ್ತದೆ. ಹೀಗಾಗಿ, ಪ್ರಕರಣದ ಸತ್ಯಾಂಶ ತನಿಖೆ ಹಾಗೂ ವಿಚಾರಣೆಯಿಂದ ಬಹಿರಂಗವಾಗಬೇಕಿದೆ’ ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.

ಪ್ರಕರಣವೇನು?: ‘ಶಾಲಾ ಬಾಲಕಿಯರು ಬಟ್ಟೆ ಬದಲಿಸುವ ಸಮಯದಲ್ಲಿ ಫೋಟೊ ಕ್ಲಿಕ್ಕಿಸಿದ ಹಾಗೂ ವಿಡಿಯೊ ಚಿತ್ರೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಶಿಕ್ಷಕನ ವಿರುದ್ಧ ನಿಯಂತ್ರಣ ಕೊಠಡಿ ಮೂಲಕ ದೂರು ಸ್ವೀಕರಿಸಿದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು 2023ರ ಡಿಸೆಂಬರ್ 15ರಂದು ದೂರು ದಾಖಲಿಸಿದ್ದರು. ಡಿಸೆಂಬರ್ 17ರಂದು ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಇದರನ್ವಯ ಕೋಲಾರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಪೋಕ್ಸೊ ವಿಶೇಷ ನ್ಯಾಯಾಲಯ) ನ್ಯಾಯಿಕ ವಿಚಾರಣೆ ಕೈಗೊಂಡಿತ್ತು.

ನ್ಯಾಯಮೂರ್ತಿ ಎಂ.ನಾಗಪ್ರಸನ್ನ
ನ್ಯಾಯಮೂರ್ತಿ ಎಂ.ನಾಗಪ್ರಸನ್ನ

ಆಕ್ಷೇಪ:

‘ಎಫ್‌ಐಆರ್‌ ದಾಖಲಾಗುವ ಮುನ್ನ ಶಿಕ್ಷಕ ಯಾವುದೇ ತಪ್ಪು ಎಸಗಿರಲಿಲ್ಲ. 2023ರ ಡಿಸೆಂಬರ್ 15ರಂದು ನಿಯಂತ್ರಣ ಕೊಠಡಿ ಮೂಲಕ ದೂರು ಸ್ವೀಕರಿಸಿದ ನಂತರ ಜಂಟಿ ನಿರ್ದೇಶಕರು ಶಿಕ್ಷಕನ ಮೊಬೈಲ್‌ ಫೋನ್‌ ಜಪ್ತಿ ಮಾಡಿದ್ದರು. ನಂತರ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್ ದಾಖಲಾಗುವ ಮುನ್ನವೇ ತನಿಖೆ ಆರಂಭವಾಗಿದ್ದು, ಇದು ಕಾನೂನಿನ ಉಲ್ಲಂಘನೆ’ ಎಂದು ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು ಆಕ್ಷೇಪಿಸಿದ್ದರು.

ಪೋಕ್ಸೊ ಕಾಯ್ದೆ––2012ರ ಕಲಂ 11ರ ಪ್ರಕಾರ ಮಕ್ಕಳ ದೇಹ ಅಥವಾ ದೇಹದ ಯಾವುದೇ ಭಾಗವನ್ನು ಅಸಭ್ಯ ರೀತಿಯಲ್ಲಿ ತೋರಿಸುವುದು ಲೈಂಗಿಕ ಕಿರುಕುಳವಾಗುತ್ತದೆ. ಈ ಕೃತ್ಯವು ಪೋಕ್ಸೊ ಕಾಯ್ದೆಯ ಕಲಂ 12ರ ಅಡಿ ಶಿಕ್ಷಾರ್ಹ ಅಪರಾಧ
– ಎಂ.ನಾಗಪ್ರಸನ್ನ ನ್ಯಾಯಮೂರ್ತಿ

ಅರ್ಜಿದಾರ ತನಿಖೆಗೆ ಸಹಕರಿಸುತ್ತಿಲ್ಲ...

‘ಅರ್ಜಿದಾರರ ಬಳಿ ಇರುವ ಮೊಬೈಲ್‌ ಪೋನ್‌ಗಳಲ್ಲಿ ಭಾರಿ ಡೇಟಾ ಸಂಗ್ರಹವಿದೆ. ಫೋನ್ ಲಾಕ್‌ ಮಾಡಲಾಗಿದೆ ಮತ್ತು ಅರ್ಜಿದಾರರು ತನಿಖೆಗೆ ಸಹಕರಿಸುತ್ತಿಲ್ಲ’ ಎಂದು ರಾಜ್ಯ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌ ನ್ಯಾಯಪೀಠಕ್ಕೆ ದೂರಿದ್ದರು. ‘

ಶಿಕ್ಷಕನ ಬಳಿ ಇದ್ದ ಎಲ್ಲ ಮೊಬೈಲ್‌ಗಳೂ ಲಾಕ್‌ ಆಗಿವೆ. ಮೊಬೈಲ್‌‌ನ ಮೆಮೊರಿ ಕಾರ್ಡ್‌ನಲ್ಲಿರುವ ಚಿತ್ರಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು ಅವು ಅರ್ಜಿದಾರರ ಮೇಲಿನ ಆರೋಪಗಳನ್ನು ದೃಢಪಡಿಸುತ್ತವೆ’ ಎಂದು ಅವರ ಪರ ವಕೀಲರ ವಾದವನ್ನು ಬಲವಾಗಿ ಅಲ್ಲಗಳೆದಿದ್ದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ಸಿದ್ಧವಾಗಿದ್ದು ಯಾವುದೇ ಸಂದರ್ಭದಲ್ಲಾದರೂ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಕೆಯಾಗಬಹುದು. ಆದ್ದರಿಂದ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬಾರದು’ ಎಂದು ಜಗದೀಶ್‌ ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT