ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

3ಎ ಮೀಸಲಾತಿ ಶೇ 10ಕ್ಕೆ ಹೆಚ್ಚಿಸಿ: ಸರ್ಕಾರಕ್ಕೆ ರಾಜ್ಯ ಒಕ್ಕಲಿಗರ ಸಂಘದ ಒತ್ತಾಯ

ಸರ್ಕಾರಕ್ಕೆ ರಾಜ್ಯ ಒಕ್ಕಲಿಗರ ಸಂಘದ ಒತ್ತಾಯ
Published : 9 ಅಕ್ಟೋಬರ್ 2022, 15:40 IST
ಫಾಲೋ ಮಾಡಿ
Comments

ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಮೀಸಲಾತಿ ಹೆಚ್ಚಿಸಿದ ಮಾದರಿಯಲ್ಲೇ ಹಿಂದುಳಿದ ವರ್ಗಗಳ ಪ್ರವರ್ಗ 3ಎ ಮೀಸಲಾತಿಯನ್ನೂ ಈಗಿರುವ ಶೇಕಡ 4ರಿಂದ ಶೇ 10ಕ್ಕೆ ಹೆಚ್ಚಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರೂ ಆಗಿರುವ ಶಾಸಕ ಸಿ.ಎನ್‌. ಬಾಲಕೃಷ್ಣ ಹಾಗೂ ಪದಾಧಿಕಾರಿಗಳು ಮತ್ತು ನಿರ್ದೇಶಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಒಕ್ಕಲಿಗರ ಉಪ ಪಂಗಡಗಳು ಮತ್ತು ಇತರ ಜಾತಿಗಳು ಸೇರಿದಂತೆ ರಾಜ್ಯದ ಶೇ 16ರಷ್ಟು ಜನರು ಪ್ರವರ್ಗ 3ಎ ವ್ಯಾಪ್ತಿಯಲ್ಲಿದ್ದಾರೆ. ಈ ಸಮುದಾಯಗಳಿಗೆ ಶೇ 4ರಷ್ಟು ಮೀಸಲಾತಿ ಸಾಕಾಗುವುದಿಲ್ಲ. ಆದ್ದರಿಂದ ಈ ಸಮುದಾಯಗಳಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇ 10ಕ್ಕೆ ಏರಿಕೆ ಮಾಡುವ ಮೂಲಕ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಆಯಾ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಎಸ್‌.ಸಿ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಮತ್ತು ಎಸ್‌.ಟಿ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸುವ ಸರ್ಕಾರದ ನಿರ್ಧಾರವನ್ನು ಒಕ್ಕಲಿಗರ ಸಂಘ ಸ್ವಾಗತಿಸುತ್ತದೆ. ಇತರ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವುದನ್ನು ಸಂಘವು ವಿರೋಧಿಸುವುದಿಲ್ಲ. ಆದರೆ, ಅದೇ ಮಾದರಿಯಲ್ಲಿ ಪ್ರವರ್ಗ 3ಎ ಮೀಸಲಾತಿ ಹೆಚ್ಚಿಸದಿದ್ದರೆ ಒಕ್ಕಲಿಗರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.

‘ಒಕ್ಕಲಿಗ ಸಮುದಾಯವೂ ಕೃಷಿಯನ್ನೇ ನಂಬಿ ಬದುಕುತ್ತಿದೆ. ಬೇಸಾಯದ ವೆಚ್ಚ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಅತಿವೃಷ್ಟಿ, ಪ್ರವಾಹ, ಬರ, ಕೀಟ ಮತ್ತು ರೋಗ ಬಾಧೆಯಿಂದ ರೈತರು ಪದೇ ಪದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಒಕ್ಕಲಿಗ ಸಮುದಾಯದ ಶೇ 70ರಷ್ಟು ಮಂದಿ ಈಗಲೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಬಡವರು ನಮ್ಮ ಸಮುದಾಯಗಳಲ್ಲೂ ಇದ್ದಾರೆ. ಈ ಎಲ್ಲವನ್ನೂ ಪರಿಗಣಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಿಸುವ ನಿರ್ಧಾರ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರವರ್ಗ 3ಎ ಸಮುದಾಯಗಳಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಿ ಕೂಡಲೆ ಆದೇಶ ಹೊರಡಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮೀಸಲಾತಿ ಹೆಚ್ಚಳಕ್ಕಾಗಿ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT