ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿಗೆ ಒತ್ತಾಯಿಸಿ ವಾಲ್ಮೀಕಿ ಸ್ವಾಮೀಜಿ ಹೋರಾಟ 25ನೇ ದಿನಕ್ಕೆ

ಶೇ 7.5 ಮೀಸಲಾತಿಗೆ ಒತ್ತಾಯಿಸಿ ಸತ್ಯಾಗ್ರಹ l ಶೆಡ್‌ನಲ್ಲೇ ಅಹೋರಾತ್ರಿ ಧರಣಿ
Last Updated 6 ಮಾರ್ಚ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ವಾಲ್ಮೀಕಿ ಸಮುದಾಯಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 7.5 ಮೀಸಲಾತಿ ನೀಡುವಂತೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹ ಭಾನುವಾರ 25ನೇ ದಿನ ಪೂರೈಸಿದೆ. ಸ್ವಾಮೀಜಿಯವರನ್ನು ಬೀದಿಯಲ್ಲಿ ಕೂರುವಂತೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್ ದಾಸ್ ವರದಿ ಶಿಫಾರಸುಗಳನ್ನು ಜಾರಿಗೆ ತರಬೇಕು’ ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಫೆ. 9ರಿಂದ ಪ್ರಸನ್ನಾನಂದ ಸ್ವಾಮೀಜಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಉದ್ಯಾನದಲ್ಲಿ ಚಿಕ್ಕದೊಂದು ಶೆಡ್ ನಿರ್ಮಿಸಲಾಗಿದ್ದು, ಅಲ್ಲಿಯೇ ಸ್ವಾಮೀಜಿ ನಿತ್ಯವೂ ಕುಳಿತುಕೊಳ್ಳುತ್ತಿದ್ದಾರೆ. ಶೆಡ್‌ನಲ್ಲೇ ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸುತ್ತಿದ್ದಾರೆ. ‘ಸಮುದಾಯಕ್ಕೆ ನ್ಯಾಯ ಸಿಗುವವರೆಗೂ ಸತ್ಯಾಗ್ರಹ ಕೈಬಿಡುವುದಿಲ್ಲ’ ಎಂದು ಸ್ವಾಮೀಜಿ ಪಟ್ಟು ಹಿಡಿದಿದ್ದಾರೆ.

‘ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯದ ಸ್ವಾಮೀಜಿ, 25 ದಿನಗಳಿಂದ ಉದ್ಯಾನದಲ್ಲಿ ಕುಳಿತಿದ್ದಾರೆ. ಅವರ ಬಳಿ ಬಂದು ಮಾತನಾಡುವ ಸೌಜನ್ಯವೂ ಮುಖ್ಯಮಂತ್ರಿ ಅವರಿಗಿಲ್ಲ. ಸ್ವಾಮೀಜಿಯವರನ್ನು ಬೀದಿಯಲ್ಲಿ ಕೂರಿಸಿರುವ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಸ್ವಾಮೀಜಿ ಕರೆ ನೀಡಿದರೆ ಸಾಕು, ಯಾವ ಹೋರಾಟಕ್ಕಾದರೂ ನಾವು ಸಿದ್ಧ’ ಎಂದು ವಾಲ್ಮೀಕಿ ಸಮುದಾಯದ ಆಪಾದಿಸಿದರು.

ಆದೇಶ ಪ್ರತಿ ಸಿಗುವವರೆಗೂ ಸತ್ಯಾಗ್ರಹ: ‘ಮೀಸಲಾತಿ ನಿಗದಿ ಸಂಬಂಧ ಸರ್ಕಾರವೇ ರಚಿಸಿದ್ದ ಆಯೋಗ ಈಗಾಗಲೇ ವರದಿ ನೀಡಿದೆ. ಅದರ ಶಿಫಾರಸುಗಳನ್ನು ಜಾರಿಗೆ ತರಲು ಮಾತ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 7.5 ಮೀಸಲಾತಿ ಸಿಗುವವರೆಗೂ ಸತ್ಯಾಗ್ರಹ ಕೈಬಿಡುವುದಿಲ್ಲ’ ಎಂದು ಪ್ರಸನ್ನಾನಂದ ಸ್ವಾಮೀಜಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ನಮ್ಮ ಸಮುದಾಯ ಅತ್ಯಂತ ಕೆಳಸ್ತರದಲ್ಲಿದೆ. ನಮಗೆ ಸಾಮಾಜಿಕ ನ್ಯಾಯ ಬೇಕಿದೆ. ಹೀಗಾಗಿ, ಮೀಸಲಾತಿ ಕೇಳುತ್ತಿದ್ದೇವೆ’ ಎಂದೂ ಹೇಳಿದರು.

‘ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲೂ ಮೀಸಲಾತಿಗಾಗಿ ‘ರಾಜನಹಳ್ಳಿಯಿಂದ ರಾಜಧಾನಿ ಚಲೊ‘ ಹೋರಾಟ ಮಾಡಲಾಗಿತ್ತು. ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರವಾಗಿ ಮಾತುಕತೆಗೆ ಬಂದಿದ್ದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಮೀಸಲಾತಿ ಭರವಸೆ ನೀಡಿ ಈಡೇರಿಸಲಿಲ್ಲ. ನಂತರ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಮೀಸಲಾತಿ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ರಚಿಸಿದ್ದರು. ವರದಿ ಬರುತ್ತಿದ್ದಂತೆ ಮೀಸಲಾತಿ ಆದೇಶ ಹೊರಡಿಸುವ ಭರವಸೆ ನೀಡಿದ್ದರು. ವರದಿ ಬಂದರೂ ಶಿಫಾರಸು ಜಾರಿಗೆಕ್ರಮ ಕೈಗೊಳ್ಳಲಿಲ್ಲ. ಇದು ನಮ್ಮ ಸಮು
ದಾಯಕ್ಕೆ ಮಾಡಿದ ಅನ್ಯಾಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಆಯೋಗದ ವರದಿಜಾರಿಗೆ ಅಡ್ಡಿಗಳಿಲ್ಲ. ಆದರೂ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಇದರ ಹಿಂದಿನ ಉದ್ದೇಶವೇನು ಎಂಬುದು ಗೊತ್ತಿಲ್ಲ. ವರದಿ ಜಾರಿಗೆ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಭರವಸೆಯನ್ನಷ್ಟೇ ನೀಡುತ್ತಿರುವ ಸರ್ಕಾರ, ನಂತರ ಮೌನವಾಗುತ್ತಿದೆ. ಹೀಗಾಗಿ, ಈ ಬಾರಿ ನಮ್ಮ ಸತ್ಯಾಗ್ರಹ ನಿರಂತರ’ ಎಂದೂ ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT