ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿಗೆ ಕಾವೇರಿ ನೀರು: ಕಾನೂನು ತಂಡದ ಜತೆ ಚರ್ಚಿಸಿ ತೀರ್ಮಾನ- ಸಿದ್ದರಾಮಯ್ಯ

Published 13 ಸೆಪ್ಟೆಂಬರ್ 2023, 10:19 IST
Last Updated 13 ಸೆಪ್ಟೆಂಬರ್ 2023, 10:19 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡಿಗೆ ಪ್ರತಿದಿನ ಕಾವೇರಿಯಿಂದ 5,000 ಕ್ಯೂಸೆಕ್‌ ನೀರು ಬಿಡುವ ಸ್ಥಿತಿಯಲ್ಲಿ ರಾಜ್ಯ ಇಲ್ಲ. ನೀರು ಬಿಡುವ ಕುರಿತು ಕಾನೂನು ತಜ್ಞರ ತಂಡದ ಜತೆ ಗುರುವಾರ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ತಮಿಳುನಾಡಿಗೆ ಬುಧವಾರದಿಂದ 15 ದಿನಗಳವರೆಗೆ ಪ್ರತಿದಿನ 5,000 ಕ್ಯೂಸೆಕ್‌ ನೀರು ಬಿಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ತುರ್ತಾಗಿ ಸರ್ವಪಕ್ಷಗಳ ಸಭೆ ನಡೆಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲಿಸಲು ಸಾಧ್ಯವಾಗುವುದಿಲ್ಲ ಎಂಬ ವಿಷಯವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಲಾಗುವುದು’ ಎಂದರು.

‘ರಾಜ್ಯದಲ್ಲಿರುವ ನೀರಿನ ಅಭಾವದ ಕುರಿತು ವಾಸ್ತವಾಂಶವನ್ನೂ ವಿವರಿಸಲಾಗುವುದು. ಈ ಬಗ್ಗೆ ಸಭೆಯಲ್ಲಿ ಹಾಜರಿದ್ದ ಎಲ್ಲ ಪಕ್ಷಗಳು ಒಪ್ಪಿಗೆ ಸೂಚಿಸಿವೆ. ನಾಡಿನ ಜಲ ಮತ್ತು ಭಾಷೆಯ ವಿಷಯದಲ್ಲಿ ಎಲ್ಲ ಪಕ್ಷಗಳೂ ಒಗ್ಗಟ್ಟಾಗಿವೆ ಎಂದು ವಿವರಿಸಿದರು.

‘ನೀರು ಹರಿಸುವ ಮತ್ತು ಅರ್ಜಿಗಳನ್ನು ಸಲ್ಲಿಸುವ ವಿಚಾರಗಳ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಗುರುವಾರ ದೆಹಲಿಯಲ್ಲಿ ಕಾನೂನು ತಜ್ಞರ ತಂಡದ ಜತೆ ಸಮಾಲೋಚನೆ ನಡೆಸಲಿದ್ದಾರೆ. ತಜ್ಞರು ಸಲಹೆಯ ಪ್ರಕಾರವೇ ಮುಂದಿನ ಹೆಜ್ಜೆ ಇಡಲಿದ್ದೇವೆ. ಈ ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ಜತೆ ಮಾತನಾಡುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

‘ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ಅಡಿ ನೀರು ಬಿಡಬೇಕು. ಆದರೆ ಸಂಕಷ್ಟ ಹಂಚಿಕೆ ಸೂತ್ರ ರೂಪಿಸದ ಕಾರಣ ನಾವು ಇಕ್ಕಟ್ಟಿಗೆ ಸಿಲುಕಿದ್ದೇವೆ. ಇದುವರೆಗೆ 99 ಟಿಎಂಸಿ ಅಡಿ ನೀರು ಬಿಡಬೇಕಿತ್ತು. 33.7 ಟಿಎಂಸಿ ಅಡಿ ನೀರು ಬಿಡಲಾಗಿದೆ. ಈಗಂತೂ ನೀರಿಲ್ಲ. 70 ಟಿಎಂಸಿ ಅಡಿ ನೀರು ಬೆಳೆ ಉಳಿಸಿಕೊಳ್ಳಲು ಬೇಕು. ಕುಡಿಯುವ ನೀರಿಗಾಗಿ 33 ಟಿಎಂಸಿ ಅಡಿ ಮತ್ತು ಕೈಗಾರಿಕೆಗಳಿಗೆ 3 ಟಿಎಂಸಿ ಅಡಿ ನೀರು ಬೇಕು. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿರುವ ನಾಲ್ಕು ಜಲಾಶಯಗಳಲ್ಲಿ 53 ಟಿಎಂಸಿ ಅಡಿ ನೀರು ಲಭ್ಯವಿದೆ. ಬೆಳೆಗಳಿಗೆ ಕಟ್ಟು ನೀರು ಬಿಡಲಾಗುತ್ತಿದೆ’ ಎಂದು ವಿವರಿಸಿದರು.

‘ಕಾವೇರಿ ನೀರು ನಿಯಂತ್ರಣ ಸಮಿತಿಯು ಮೊದಲಿಗೆ 10,000 ಕ್ಯೂಸೆಕ್‌ ನೀರು ಬಿಡುವಂತೆ ಶಿಫಾರಸು ಮಾಡಿ ನಂತರ 5,000 ಕ್ಯೂಸೆಕ್‌ ನೀರು ಬಿಡುವಂತೆ ಹೇಳಿದೆ. ನೆಲ– ಜಲದ ವಿಷಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ಮಾಡಿದ್ದೇವೆ. ತುರ್ತಾಗಿ ಕರೆದಿದ್ದರಿಂದ ವಿರೋಧ ಪಕ್ಷಗಳ ಹಲವು ನಾಯಕರಿಗೆ ಬರಲು ಸಾಧ್ಯವಾಗಲಿಲ್ಲ’ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಆಗಸ್ಟ್‌ ತಿಂಗಳಲ್ಲಿ 125 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ ಆಗಿತ್ತು. ಸಂಕಷ್ಟ ಸೂತ್ರ ಇನ್ನೂ ಹೊರಬಂದಿಲ್ಲ. ರೈತರಿಗೆ ಅನ್ಯಾಯ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಬಿಜೆಪಿ ಸಂಸದರಾದ ಪ್ರತಾಪ್ ಸಿಂಹ, ಪಿ.ಸಿ.ಮೋಹನ್, ಶಿವಕುಮಾರ್ ಉದಾಸಿ, ಸುಮಲತಾ, ಶಾಸಕರಾದ ದರ್ಶನ್‌ ಪುಟ್ಟಣ್ಣಯ್ಯ, ಜನಾರ್ದನ ರೆಡ್ಡಿ, ಕಾವೇರಿ ಅಚ್ಚುಕಟ್ಟು ಪ್ರದೇಶದ ಶಾಸಕರು, ರಾಜ್ಯಸಭಾ ಸದಸ್ಯ ಲಹರ್ ಸಿಂಗ್‌ ಭಾಗವಹಿಸಿದ್ದರು.

ಮೋದಿಯನ್ನು ಏಕೆ ಎಳೆದು ತರುತ್ತೀರಿ?

‘ಕಾವೇರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಎಳೆದು ತರುವುದು ಏಕೆ? ಅದರ ಅಗತ್ಯವಿಲ್ಲ. ತಮಿಳುನಾಡು ರಾಜ್ಯ ಸುಪ್ರೀಂಕೋರ್ಟ್‌ ಮೂಲಕವೇ ನ್ಯಾಯಕ್ಕಾಗಿ ಹೊರಾಡುತ್ತಿದೆ. ನಾವೂ ನಮ್ಮ ವಾದವನ್ನು ಬಲವಾಗಿ ಮಂಡಿಸಿ ನ್ಯಾಯ ಕೇಳಬೇಕು’ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡು ಮುಖ್ಯಮಂತ್ರಿ ಜತೆ ಮಾತನಾಡ ಬಹುದು. ಸುಪ್ರೀಂ ಕೋರ್ಟ್‌ ಅಥವಾ ಕಾವೇರಿ ನೀರು ನಿರ್ವ ಹಣಾ ಪ್ರಾಧಿಕಾರದ ಮೂಲಕವೂ ತೀರ್ಮಾನ ಮಾಡಿಕೊಳ್ಳಬಹುದು. ರಾಜ್ಯದ ಹಿತದ ವಿಚಾರದಲ್ಲಿ ನಾವೆಲ್ಲ ನಿಮ್ಮ ಜತೆಗೆ ಇದ್ದೇವೆ. ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೂ ನಮ್ಮ ಪೂರ್ಣ ಸಹಕಾರವಿದೆ’ ಎಂದು ಹೇಳಿದರು.

ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡದ ಸಚಿವ: ಸಂಸದೆ ಸುಮಲತಾ ಆಕ್ಷೇಪ

ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿದ ನಂತರ ಮತ್ತು ಎಲ್ಲ ಜಲಾಶಯಗಳು ಬರಿದಾಗುತ್ತಾ ಬಂದ ಬಳಿಕವೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಡ್ಯ ಮತ್ತು ಕಾವೇರಿ ಅಚ್ಚುಕಟ್ಟು ಪ್ರದೇಶಕ್ಕೆ ಅವರು ಭೇಟಿ ನೀಡಬೇಕಿತ್ತು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ‘ನನಗೆ ಅಲ್ಲಿನ ಪರಿಸ್ಥಿತಿ ಗೊತ್ತಿದೆ. ಸಂಸದರು ಹೇಳಿದರೆ ಅಲ್ಲೇ ಹೋಗಿ ಮಲಗಲು ತಯಾರಿದ್ದೇನೆ’ ಎಂದರು.

ನೀರು ಬಿಡುವುದು ಸುಲಭವಲ್ಲ: ‘ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡಬಾರದು. ನೀರಿನ ವಿಚಾರದಲ್ಲಿ ಯಾವುದೇ ಪಕ್ಷವು ರಾಜಕೀಯ ಮಾಡಬಾರದು’ ಎಂದು ಸುಮಲತಾ ಹೇಳಿದರು.

‘ತಮಿಳುನಾಡಿನವರು ಎಲ್ಲ ವಿಚಾರಗಳಿಗೂ ಆಕ್ರಮಣಶೀಲರಾಗಿ ವರ್ತಿಸುತ್ತಾರೆ. ಹವಾಮಾನ ಬದಲಾವಣೆಯಿಂದ 2–3 ವರ್ಷಗಳಿಂದ ವಾತಾವರಣ ಬದಲಾಗಿದೆ. ಸರಿಯಾದ ಸಮಯಕ್ಕೆ ಮಳೆ ಬರುವುದಿಲ್ಲ’ ಎಂದರು.

ತಮಿಳುನಾಡಿಗೆ ನೀರು ಕೊಡಬಾರದು ಎಂದೇನಿಲ್ಲ. ಆದರೆ, ನಮ್ಮ ಬಳಿಯೇ ನೀರು ಇಲ್ಲದಿರುವಾಗ ಎಲ್ಲಿಂದ ಕೊಡುವುದು? ಸರ್ಕಾರದ ತೀರ್ಮಾನವನ್ನು ವಿರೋಧ ಪಕ್ಷಗಳು ಒಪ್ಪಿವೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT