ಕಲ್ಪೆಟ್ಟ (ವಯನಾಡ್ ಜಿಲ್ಲೆ): ಚೂರಲ್‌ಮಲದಲ್ಲಿ ವಾಸವಾಗಿದ್ದ ಸಿಸಿಲಿ ಅವರಿಗೆ ಹೃದ್ರೋಗವಿದೆ. ಎಕೊ ಮಾಡಿಸಬೇಕು ಎಂದು ವೈದ್ಯರು ಬರೆದುಕೊಟ್ಟಿದ್ದರು. ಮೇಪ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರದಲ್ಲಿರುವ ಅವರು, ಭಾನುವಾರ ಆಸ್ಪತ್ರೆಗೆ ಹೋಗಲು ಸಜ್ಜಾಗಿ ಮಗ ಬರಲಿ ಎಂದು ಕಾಯುತ್ತಿದ್ದರು. ಆದರೆ ಡಿಎಂ ವಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಸ್ವಂತ ತಾಯಿ ಎಂಬಂತೆ ಅವರನ್ನು ಕರೆದುಕೊಂಡು ಹೋದರು.
ಚೂರಲ್‌ಮಲದ ಖದೀಜ ಮತ್ತು ಜಮಾಲ್ ದಂಪತಿಯೂ ಇದೇ ಕಾಳಜಿ ಕೇಂದ್ರದಲ್ಲಿದ್ದಾರೆ. ಬೆನ್ನುನೋವು, ಕಾಲುನೋವು, ಮಧುಮೇಹ, ರಕ್ತದೊತ್ತಡ ಇತ್ಯಾದಿ ಸಮಸ್ಯೆ ಇಬ್ಬರನ್ನೂ ಕಾಡುತ್ತಿದೆ. ಕಾಳಜಿ ಕೇಂದ್ರದ ಸಿಬ್ಬಂದಿ ಆಗಾಗ ಬಂದು ಔಷಧಿ ಸೇವಿಸುವಂತೆ ಹೇಳುತ್ತಿದ್ದರು. ಔಷಧಿ ತೆಗೆದುಕೊಳ್ಳುವವರೆಗೂ ಅವರ ಒತ್ತಾಯ ಮುಂದುವರಿಯಿತು.
ನಾಲ್ಕು ಊರುಗಳನ್ನು ಸರ್ವನಾಶ ಮಾಡಿದ ಭೂಕುಸಿತದಲ್ಲಿ ಸಂಬಂಧಿಕರು, ಆಪ್ತರು ಮತ್ತು ಮನೆಗಳನ್ನು ಕಳೆದುಕೊಂಡು ಕಾಳಜಿ ಕೇಂದ್ರಗಳಲ್ಲಿ ಕಳೆಯುತ್ತಿರುವವರಿಗೆ ಇಂಥ ಆಪ್ತ ಆರೈಕೆ ಸಿಗುತ್ತಿದೆ. ಈ ಸಂದರ್ಭದಲ್ಲಿ ಕೆಲವು ನಿಮಿಷ ನೋವು ಮರೆಯುವ ಅವರು, ಕ್ಷಣಾರ್ಧದಲ್ಲಿ ದುರಿತ ತಂದ ಕುಸಿತದ ಆ ದಿನಗಳನ್ನು ನೆನೆದು ಬೆಚ್ಚಿಬೀಳುತ್ತಾರೆ.
ಅವರ ಬಳಿ ದುರಂತವನ್ನು ವಿವರಿಸಲು ಪದಗಳಿಲ್ಲ. ಆದರೆ ಜನಿಸಿ ಬೆಳೆದ ಊರಿನ ಬಗ್ಗೆ ಹೇಳಲು ನೂರಾರು ಕಥೆಗಳಿವೆ. ಅಂಥ ಊರನ್ನು ಮರೆಯಲು ಅವರೀಗ ಪ್ರಯತ್ನಿಸುತ್ತಿದ್ದಾರೆ. ಇನ್ನೆಷ್ಟು ಕಾಲ ಕಳೆದರೂ ದುರಂತದ ಆ ದಿನಗಳನ್ನು, ಕಣ್ಣಮುಂದೆಯೇ ಕಳೆದುಹೋದವರನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಚೂರಲ್‌ಮಲ ಶಾಲೆಯ ಸಮೀಪದ ರಸ್ತೆಯ ಬದಿಯಲ್ಲಿ ಮನೆ ಇದ್ದ ಜಮಾಲ್ ಮತ್ತು ಖದೀಜ ಅವರ ಕುಟುಂಬದವರೆಲ್ಲರೂ ಬದುಕಿ ಉಳಿದಿದ್ದಾರೆ. ಆದರೆ ಖದೀಜ ಅವರ ದೊಡ್ಡಪ್ಪನ ಕುಟುಂಬ ಸೇರಿದಂತೆ ನಾಲ್ಕು ಮನೆಗಳ 22 ಮಂದಿ ಒಮ್ಮೆಲೇ ಇಲ್ಲವಾಗಿದ್ದಾರೆ. ಇವರ ಪೈಕಿ ಕೆಲವರ ದೇಹ ಮಾತ್ರ ಸಿಕ್ಕಿದೆ. ಉಳಿದವರ ಬಗ್ಗೆ ಯಾವ ಮಾಹಿತಿಯೂ ಇಲ್ಲ ಎಂದು ಹೇಳುವಷ್ಟರಲ್ಲಿ ಖದೀಜ ಭಾವುಕರಾದರು. ಬಿಕ್ಕಿಬಿಕ್ಕಿ ಅತ್ತು ‘ಮಾತ್ರೆ ಸೇವಿಸುವುದಕ್ಕಿದೆ’ ಎಂದು ಹೇಳಿ ಅತ್ತ ಸಾಗಿದರು.
‘ಭೂಕುಸಿತ ಉಂಟಾಗುವ ಹಿಂದಿನ ರಾತ್ರಿ ನಮ್ಮ ಮನೆಯ ಹಿಂದೆ ಕೆಸರು ಮಿಶ್ರಿತ ನೀರು ಕಂಡಿದ್ದೆವು. ಸಂದೇಹಗೊಂಡು ಎಲ್ಲರೂ ಮೇಪ್ಪಾಡಿಯ ಕೋಟ್ಟತ್ತರವಯಲ್‌ನಲ್ಲಿರುವ ಮಗಳ ಮನೆಗೆ ಬಂದು ಆಶ್ರಯ ಪಡೆದೆವು. 2018ರಲ್ಲಿ ಉಂಟಾದ ದುರಂತದ ಸಂದರ್ಭದಲ್ಲಿ ಮಗಳ ಮನೆಯವರು ಮೇಪ್ಪಾಡಿಗೆ ಬಂದು ನೆಲೆಸಿದ್ದರು. ಆಕೆಯ ಮನೆಗೆ ಬಂದ ಕಾರಣ ನಾವೆಲ್ಲರೂ ಉಳಿದೆವು’ ಎಂದು ಜಮಾಲ್ ಹೇಳಿದರು.
ಖದೀಜ ಅವರ ದೊಡ್ಡಪ್ಪ ಮತ್ತು ಕುಟುಂಬ ಮುಂಡಕ್ಕೈಯಲ್ಲಿದ್ದರು. ಹಿಂದಿನ ದಿನ ಸಣ್ಣದೊಂದು ಕುಸಿತ ಸಂಭವಿಸಿದ್ದರಿಂದ ಹೆದರಿ ಗುಡ್ಡ ಇಳಿದು ಚೂರಲ್‌ಮಲದ ಸಂಬಂಧಿಕರ ಮನೆಯಲ್ಲಿ ಆಸರೆ ಪಡೆದಿದ್ದರು. ಆದರೆ ಆ ಮನೆ ಮತ್ತು ಅಲ್ಲಿದ್ದವರೆಲ್ಲರನ್ನೂ ಕೆಸರುನೀರು ಕೊಚ್ಚಿಕೊಂಡು ಹೋಗಿದೆ.
ಖದೀಜ ಮತ್ತು ಶೆರೀಫಾ ಅಕ್ಕಪಕ್ಕದ ನಿವಾಸಿಗಳು. 2018ರಲ್ಲಿ ಉಂಟಾದ ಪುತ್ತುಮಲ ಭೂಕುಸಿತದಲ್ಲಿ ಬಚಾವಾದ ಶೆರೀಫಾ ಮತ್ತು ಕುಟುಂಬದವರು ಚೂರಲ್‌ಮಲ ಪ್ರದೇಶಕ್ಕೆ ಬಂದಿದ್ದರು. ಗುಡ್ಡಕುಸಿತದಲ್ಲಿ ಭಾರಿ ಪ್ರಮಾಣದ ನೀರು ಬರುವುದು ಕಂಡು ಗುಡ್ಡ ಹತ್ತಿ ಓಡಿಹೋಗಿ ಯಾರದೋ ಮನೆಯಲ್ಲಿ ಆಶ್ರಯ ಪಡೆದು ಕಾಳಜಿ ಕೇಂದ್ರಕ್ಕೆ ತಲುಪಿದ್ದಾರೆ.
‘ನಮ್ಮದು ಹೆಂಚು ಹಾಸಿದ ಸಣ್ಣ ಮನೆ. ಅದರ ಒಂದು ಭಾಗಕ್ಕೆ ಮಾತ್ರ ಹಾನಿಯಾಗಿದೆ. ಆದರೆ ಸ್ವಲ್ಪ ದೂರ ಸಂಬಂಧಿಕರಿದ್ದರು. ಅವರದು ಎರಡು ಮಹಡಿ ಮನೆ. ಅದು ಪೂರ್ಣ ಕೊಚ್ಚಿಕೊಂಡು ಹೋಗಿದೆ. ಜೊತೆಯಲ್ಲಿದ್ದ ಯಾರೂ ಈಗ ನಮ್ಮ ಊರಿನಲ್ಲಿ ಇಲ್ಲ. ಆದ್ದರಿಂದ ಇನ್ನು ಅತ್ತ ತೆರಳುವ ಪ್ರಶ್ನೆಯೇ ಇಲ್ಲ’ ಎಂದು ಶೆರೀಫಾ ಹೇಳಿದರು.
12 ಮಂದಿ ಆಪ್ತ ಸಮಾಲೋಚಕರು ಮಲಪ್ಪುರಂ ಜಿಲ್ಲೆಯಿಂದ ಬಂದಿದ್ದೇವೆ. ಮಕ್ಕಳನ್ನು ಆಘಾತದಿಂದ ಹೊರತರುವುದೇ ನಮ್ಮ ಮುಖ್ಯ ಉದ್ದೇಶ.–ಧನ್ಯಾ ಆಬಿದ್ ಆಪ್ತ ಸಮಾಲೋಚಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.