ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಿ ರಾಜಕಾರಣದಿಂದ ಬಿಜೆಪಿಗೆ ಸೋಲು: ಸಿ.ಟಿ ರವಿ ಕಿಡಿ

Published 9 ಜೂನ್ 2023, 19:49 IST
Last Updated 9 ಜೂನ್ 2023, 19:49 IST
ಅಕ್ಷರ ಗಾತ್ರ

ನವದೆಹಲಿ: ‘ಕೆಲವರ ರಾಜಿ ಹಾಗೂ ಹೊಂದಾಣಿಕೆ ರಾಜಕಾರಣದಿಂದಲೂ ಸಹ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು’ ಎಂದು ಬಿಜೆಪಿ ರಾಷ್ಟ್ರೀಯ ‍ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಶುಕ್ರವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ನಮ್ಮ ಕಡೆಯಿಂದ ತಪ್ಪಾಗಿದೆ. ಕೆಲವರ ರಾಜಿ ರಾಜಕಾರಣದಿಂದ ಪಕ್ಷಕ್ಕೆ ತೊಂದರೆ ಆಯಿತು. ತಪ್ಪು ಮಾಡಿದವರ ಜತೆಗೆ ರಾಜಿ ಮಾಡಿಕೊಳ್ಳದೆ ಬೀದಿಗೆ ನಿಲ್ಲಿಸಿ ರಾಜಕಾರಣ ಮಾಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ’ ಎಂದು ವ್ಯಾಖ್ಯಾನಿಸಿದರು. 

‘ತಪ್ಪು ಮಾಡಿದವರನ್ನು ನಾವು ಬೀದಿಗೆ ನಿಲ್ಲಿಸಬೇಕಿತ್ತು. ಆಗ ಪಕ್ಷಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ. ಪಕ್ಷ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ. ನಾವು ತಪ್ಪಿತಸ್ಥರ ಸಾಲಿನಲ್ಲಿ ನಿಲ್ಲುತ್ತಿರಲಿಲ್ಲ’ ಎಂದು ಅವರು ಹೇಳಿದರು. 

‘2013–18ರ ಅವಧಿಯಲ್ಲಿ ನಡೆದ ಅರ್ಕಾವತಿ ಹಗರಣದ ಬಗ್ಗೆ ತನಿಖೆ ನಡೆಸಿ ಎಂದು ಹಲವು ಸಲ ನಾವು ಒತ್ತಾಯ ಮಾಡಿದ್ದೆವು. ಈ ಬಗ್ಗೆ ತನಿಖೆ ನಡೆಸಬೇಕಿತ್ತು. ಆದರೆ, ಆ ಕೆಲಸ ಆಗಲಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯ ಸೌರಶಕ್ತಿ ಹಗರಣದ ಬಗ್ಗೆಯೂ ತನಿಖೆ ನಡೆಸುವಂತೆ ಕೇಳಿಕೊಂಡಿದ್ದೆವು. ನಾವು ಹೇಳಿದ್ದನ್ನು ಕೇಳಲಿಲ್ಲ. ಇವುಗಳ ತನಿಖೆ ನಡೆಸದೆ ಸದನವನ್ನು ಮುಂದೂಡಿದರು’ ಎಂದು ಅವರು ಬೇಸರ ವ್ಯಕ್ತಪಡಿಸಿದರು. 

‘ಸಿದ್ದರಾಮಯ್ಯ ಸರ್ಕಾರದ ಅವಧಿಯ ಅರ್ಕಾವತಿ ಹಗರಣದಿಂದ ಬೊಕ್ಕಸಕ್ಕೆ ₹8 ಸಾವಿರ ಕೋಟಿ ನಷ್ಟ ಉಂಟಾಗಿದೆ. ತಪ್ಪಿತಸ್ಥರನ್ನು ಜೈಲಿಗೆ ಅಟ್ಟುತ್ತೇವೆ’ ಎಂದು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವು ಸಲ ಹೇಳಿದ್ದರು. ‘ಸಿದ್ದರಾಮಯ್ಯ ವಿರುದ್ಧ 57 ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಲೋಕಾಯುಕ್ತಕ್ಕೆ ಒಪ್ಪಿಸುತ್ತೇವೆ’ ಎಂದೂ ಹೇಳಿದ್ದರು.

ಸಿ.ಟಿ.ರವಿ ಪರಮಾಪ್ತರಾಗಿದ್ದ ಎಚ್‌.ಡಿ.ತಮ್ಮಯ್ಯ ಅವರು ವಿಧಾನಸಭಾ ಚುನಾವಣೆಗೆ ಆರು ತಿಂಗಳು ಇದ್ದಾಗ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಅವರನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸಿತ್ತು. ತಮ್ಮಯ್ಯ ವಿರುದ್ಧ ರವಿ ಸೋತಿದ್ದರು. ತಮ್ಮ ಸೋಲಿಗೆ ಪಕ್ಷದಲ್ಲಿರುವ ಕೆಲವರ ಷಡ್ಯಂತ್ರವೂ ಕಾರಣ ಎಂದು ರವಿ ಅವರು ಆಪ್ತರಲ್ಲಿ ಹೇಳಿಕೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT