ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲೂ ವಿದ್ಯುತ್ ಕೊರತೆ ಉಂಟಾಗದಂತೆ ಕ್ರಮ: ಸಚಿವ ಕೆ.ಜೆ. ಜಾರ್ಜ್

Published 19 ಫೆಬ್ರುವರಿ 2024, 15:48 IST
Last Updated 19 ಫೆಬ್ರುವರಿ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಖೋತ್ಪನ್ನ ಮೂಲಗಳಿಂದ ಗರಿಷ್ಠ ಪ್ರಮಾಣದ ಉತ್ಪಾದನೆ, ವಿನಿಮಯ, ಅಲ್ಪಾವಧಿ ಖರೀದಿ ಮೂಲಕ ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಸುತ್ತಿದ್ದು, ಬೇಸಿಗೆಯಲ್ಲೂ ವಿದ್ಯುತ್ ಕೊರತೆ ಉಂಟಾಗದಂತೆ ಕ್ರಮ ವಹಿಸಲಾಗುವುದು’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಜಾರ್ಜ್‌, ‘ಕಳೆದ ನವೆಂಬರ್ ಅಂತ್ಯದವರೆಗೆ ಶಾಖೋತ್ಪನ್ನ, ಜಲ, ಕೇಂದ್ರದಿಂದ ರಾಜ್ಯದ ಪಾಲು, ಖಾಸಗಿ ಸೇರಿ 62,738.86 ದಶಲಕ್ಷ ಯುನಿಟ್ ವಿದ್ಯುತ್ ಲಭ್ಯವಾಗಿದೆ. ಡಿಸೆಂಬರ್ ಅಂತ್ಯದವರೆಗೆ ₹ 1,296.10 ಕೋಟಿ ಮೊತ್ತದಲ್ಲಿ 1,932.32 ದಶಲಕ್ಷ ಯುನಿಟ್ ವಿದ್ಯುತ್ ಖರೀದಿಸಲಾಗಿದೆ’ ಎಂದರು.

‘ಬ್ಯಾಂಕಿಂಗ್ ವ್ಯವಸ್ಥೆಯಡಿ ಉತ್ತರಪ್ರದೇಶ ಮತ್ತು ಪಂಜಾಬ್‌ ರಾಜ್ಯಗಳಿಂದ ಪ್ರತಿದಿನ 400-500 ಮೆಗಾ ವಾಟ್‌ ವಿದ್ಯುತ್ (8.9 ದಶಲಕ್ಷ ಯೂನಿಟ್) 2024ರ ಮೇ ವರೆಗೆ ಲಭ್ಯವಾಗಲಿದೆ. ಕೇಂದ್ರ ಸರ್ಕಾರ 2023ರ ನವೆಂಬರ್‌ನಿಂದ 2024ರ ಜೂನ್ ಅಂತ್ಯದವರೆಗೆ ಹೆಚ್ಚುವರಿಯಾಗಿ 302.36 ಮೆಗಾ ವಾಟ್‌ ಪೂರೈಸಲು ಒಪ್ಪಿಕೊಂಡಿದೆ. ಕೂಡಗಿ ವಿದ್ಯುತ್ ಸ್ಥಾವರದಿಂದ ರಾಜ್ಯದ ಪಾಲು 150 ಮೆಗಾ ವಾಟ್‌ ವಿದ್ಯುತ್ ನವೆಂಬರ್‌ನಿಂದ ದೊರೆಯುತ್ತಿದೆ’ ಎಂದು ಮಾಹಿತಿ ನೀಡಿದರು.

‘ಶಾಖೋತ್ಪನ್ನ ಸ್ಥಾವರಗಳಿಗೆ ಬೇಕಾದ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ವಿದ್ಯುತ್ ಕಾಯ್ದೆ 11ಇ ಸೆಕ್ಷನ್ ಜಾರಿಗೊಳಿಸಿ ಖಾಸಗಿ ಉತ್ಪಾದಕರಿಂದ ಒಂದು ಸಾವಿರ ಮೆಗಾ ವಾಟ್‌ ಪಡೆಯಲಾಗುತ್ತಿದೆ. ಅಲ್ಪಾವಧಿ ಖರೀದಿ ನಿಯಮಾವಳಿ, ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗವು ನಿಗದಿಪಡಿಸಿದ ದರದಂತೆ ದಿನವಹಿ ಆಧಾರದಲ್ಲಿ ವಿದ್ಯುತ್ ಖರೀದಿಸಲಾಗುತ್ತದೆ’ ಎಂದೂ ಅವರು ತಿಳಿಸಿದರು.

‘ಎರಡು ತಿಂಗಳ ಸಂಕಷ್ಟ ಕಾಲದಲ್ಲಿ ನೀರಾವರಿ ಪಂಪ್‌ಸೆಟ್‌ಗಳಿಗೆ ಐದು ತಾಸು ತ್ರಿ ಫೇಸ್ ವಿದ್ಯುತ್ ಪೂರೈಕೆಯಾಗಿದೆ. ಪರ್ಯಾಯ ವ್ಯವಸ್ಥೆಗಳಾದ ನಂತರ ಮುಖ್ಯಮಂತ್ರಿ ಸೂಚನೆಯಂತೆ ಮತ್ತೆ ಏಳು ತಾಸು ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ತಾಂತ್ರಿಕವಾಗಿ ಸಾಧ್ಯತೆ ಇಲ್ಲದಿರುವ ಪ್ರದೇಶಗಳಲ್ಲಿ ಪಾಳಿ ಪ್ರಕಾರ ಹಗಲು ನಾಲ್ಕು ತಾಸು, ರಾತ್ರಿ ಮೂರು ತಾಸುಗಳ ಕಾಲ ತ್ರಿ ಫೇಸ್‌ ವಿದ್ಯುತ್ ಪೂರೈಕೆಯಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

‘ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಎಸ್ಕಾಂವಾರು ಶಾಸಕರ ಸಭೆಗೆ ನಡೆಸಲಾಗುತ್ತಿದೆ’ ಎಂದು ಜಾರ್ಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT