ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೂಕ್ಷ್ಮ ಪ್ರದೇಶಗಳಲ್ಲಿ ಅಭಿವೃದ್ಧಿ ಬೇಡ: ಪರಿಸರ ತಜ್ಞ ಮಾಧವ ಗಾಡ್ಗೀಳ್‌

ಚರ್ಚೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾಧವ ಗಾಡ್ಗೀಳ್‌
Published : 10 ಆಗಸ್ಟ್ 2024, 12:17 IST
Last Updated : 10 ಆಗಸ್ಟ್ 2024, 12:17 IST
ಫಾಲೋ ಮಾಡಿ
Comments

ಬೆಂಗಳೂರು: ‘ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ನೀಡಿದ ವರದಿಯಲ್ಲಿ ಸಾಮಾನ್ಯ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದೇವೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಬಾರದು’ ಎಂದು ಪರಿಸರ ತಜ್ಞ ಮಾಧವ ಗಾಡ್ಗೀಳ್‌ ತಿಳಿಸಿದರು.

‘ಪರಿಸರಕ್ಕಾಗಿ ನಾವು’ ಸಂಘಟನೆ ಶನಿವಾರ ಹಮ್ಮಿಕೊಂಡಿದ್ದ ‘ಗಾಡ್ಗೀಳ್‌ ವರದಿ ಜಾರಿ ಮಾಡಲು ಇನ್ನು ಎಷ್ಟು ಬಲಿ ಬೇಕು?’ ಜೀವಲೋಕದ ಹಕ್ಕೊತ್ತಾಯಕ್ಕಾಗಿ ಚರ್ಚೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ (ಆನ್ಲೈನ್ ಮೂಲಕ) ಅವರು ಮಾತನಾಡಿದರು.

‘ಪಶ್ಚಿಮ ಘಟ್ಟದಲ್ಲಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಾವು ನಿಷೇಧಿಸುವಂತೆ ವರದಿ ನೀಡಿರಲಿಲ್ಲ. ಸೂಕ್ಷ್ಮ ಪ್ರದೇಶಗಳಲ್ಲಿಯಷ್ಟೇ ನಿಷೇಧಿಸುವಂತೆ ತಿಳಿಸಲಾಗಿತ್ತು. ಈಗಿನ ಅಭಿವೃದ್ಧಿಯ ಚಿಂತನಾ ಕ್ರಮವೇ ಪರಿಸರಕ್ಕೆ ಮಾರಕವಾಗಿದೆ. ಪರಿಸರ ಪೂರಕವಾಗಿ ಸುಸ್ಥಿರ ಅಭಿವೃದ್ಧಿಗಳಾಗಬೇಕು’ ಎಂದರು.

‘ನಮ್ಮ ವರದಿಯನ್ನು ಅಧ್ಯಯನ ಮಾಡದೇ ತಪ್ಪು ಅಭಿಪ್ರಾಯಗಳನ್ನು ಹರಡಿದ್ದರಿಂದ ಹಿನ್ನಡೆಯಾಯಿತು. ಈ ವರದಿಯನ್ನು ಜಾರಿಗೊಳಿಸಿದರೆ ಪಶ್ಚಿಮ ಘಟ್ಟದಲ್ಲಿ ಉಂಟಾಗುವ ಅವಘಡಗಳನ್ನು ತಪ್ಪಿಸಬಹುದು’ ಎಂದು ತಿಳಿಸಿದರು.

ಐದು ವರ್ಷಗಳ ಹಿಂದೆ ಕೇರಳದಲ್ಲಿ ಪ್ರಕೃತಿ ವಿಕೋಪದಿಂದ ದುರ್ಘಟನೆ ನಡೆದಾಗ ಟೀ ಪ್ಲಾಂಟೇಶನ್‌ ಕಾರ್ಮಿಕರು ಮೃತಪಟ್ಟಿದ್ದರು. ಹಿಮಾಚಲ, ಹಿಮಾಲಯ, ಮಹಾರಾಷ್ಟ್ರ, ಪಶ್ಚಿಮ ಘಟ್ಟ ಹೀಗೆ ಅನೇಕ ಕಡೆಗಳಲ್ಲಿ ದುರ್ಘಟನೆಗಳು ನಡೆದಿವೆ. ಅಲ್ಲೂ ಜನರು ಮೃತಪಟ್ಟಿದ್ದಾರೆ. ಆದರೆ, ವಯನಾಡ್‌ನಲ್ಲಿ ಆಗಿರುವಷ್ಟು ದೊಡ್ಡ ಪ್ರಮಾಣದಲ್ಲಿ ಆಗಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಹಿಂದಿನವರು ಕೃಷಿ ಮಾಡುವಾಗಲೂ ನಾಗಬನ ಎಂದು ಸೂಕ್ಷ್ಮ ಜಾಗಗಳನ್ನು ಮೀಸಲಿಡುತ್ತಿದ್ದರು. ಆದರೆ, ಈಗ ಅಂಥ ಸಂಸ್ಕೃತಿ ಉಳಿದಿಲ್ಲ. ಸಮುದ್ರ ತೀರಗಳಿಗೂ ಬೃಹತ್‌ ಕೈಗಾರಿಕೆಗಳು ಬರುತ್ತಿವೆ. ನೀರು, ಗಾಳಿಯನ್ನು ದೊಡ್ಡ ಪ್ರಮಾಣದಲ್ಲಿ ಮಲೀನಗೊಳಿಸುತ್ತಿವೆ’ ಎಂದು ಹೇಳಿದರು.

ಮೇಕೆದಾಟು ಬೇಡ:

ಬೆಂಗಳೂರು ನಗರಕ್ಕೆ ವರ್ಷಕ್ಕೆ 18 ಟಿಎಂಸಿ ಅಡಿ ನೀರು ಬೇಕು. ಮಳೆ ನೀರು ಸಂಗ್ರಹದ ಮೂಲಕವೇ 15 ಟಿಎಂಸಿ ಅಡಿ ನೀರು ಪೂರೈಸಬಹುದು. ಅದೇ ನೀರನ್ನು ಮರುಬಳಕೆ ಮಾಡಿದರೆ, ಎಲ್ಲದ್ದಕ್ಕೂ ಸಾಕಾಗುತ್ತದೆ. ಅದನ್ನು ಬಿಟ್ಟು ಪರಿಸರಕ್ಕೆ ಮಾರಕವಾದ ಮೇಕೆದಾಟು ಯೋಜನೆ ತರಲು ಮುಂದಾಗಿದ್ದಾರೆ ಎಂದು ಪರಿಸರ ವಿಜ್ಞಾನಿ ಟಿ.ವಿ. ರಾಮಚಂದ್ರ ತಿಳಿಸಿದರು.

ಕಾಡುಗಳು ನೀರನ್ನು ಇಂಗಿಸುವ ಪ್ರದೇಶಗಳಾಗಿವೆ. ಮೇಕೆದಾಟು ಯೋಜನೆಗೆ 5,000 ಹೆಕ್ಟೇರ್‌ ಕಾಡು ನಾಶವಾಗಲಿದೆ. ಅಂದರೆ 100 ಟಿಎಂಸಿ ಅಡಿ ನೀರು ಇಂಗಿಸುವ ಪ್ರದೇಶವನ್ನು ನಾಶಮಾಡಿ ಕಾಂಕ್ರೀಟ್‌ ಅಣೆಕಟ್ಟು ಕಟ್ಟಿ 65 ಟಿಎಂಸಿ ಅಡಿ ನೀರು ತರಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಪರಿಸರ ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಹಕ್ಕೊತ್ತಾಯ ಮಂಡಿಸಿದರು. ಸಂಘಟನೆಯ ಸದಸ್ಯರಾದ ಆಂಜನೇಯರೆಡ್ಡಿ, ಪರಶುರಾಮೇಗೌಡ ಮಾತನಾಡಿದರು.

ಹಕ್ಕೊತ್ತಾಯ

* ಗಾಡ್ಗೀಳ್‌ ಸಮಿತಿಯ ವರದಿ ಕುರಿತು ಇರುವ ತಪ್ಪು ಕಲ್ಪನೆಯನ್ನು ಸರ್ಕಾರ ಹೋಗಲಾಡಿಸಬೇಕು. ವರದಿಯ ಸಂಕ್ಷಿಪ್ತ, ಸರಳ ಅನುವಾದ ತರಲು ಸಮಿತಿ ಮಾಡಬೇಕು.

* ಪಶ್ಚಿಮ ಘಟ್ಟದ ವ್ಯಾಪ್ತಿಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸೌರಶಕ್ತಿ ಬಳಕೆ, ಮಳೆ ನೀರು ಸಂಗ್ರಹ ಕಡ್ಡಾಯಗೊಳಸಿಬೇಕು.

* ಕರಾವಳಿ ನಿಯಂತ್ರಿತ ವಲಯ (ಸಿಆರ್‌ಝೆಡ್‌) ಮಾದರಿಯಲ್ಲಿ ಪಶ್ಚಿಮ ಘಟ್ಟದಲ್ಲಿ ನದಿಗಳಿಗೂ ನದಿತಟಾಕ ನಿಯಂತ್ರಣ ವಲಯ ಗುರುತಿಸಿ ಪರಿಸರ ವಿರೋಧಿ ಚಟುವಟಿಕೆ ನಿಯಂತ್ರಿಸಬೇಕು.

* ಹೊರರಾಜ್ಯಗಳ ವಲಸಿಗರ ನಿಯಂತ್ರಣಕ್ಕೆ ಇನ್ನರ್ ಲೈನ್‌ ಪರ್ಮಿಟ್‌ ಮಾದರಿಯನ್ನು ಪಶ್ಚಿಮ ಘಟ್ಟಗಳಲ್ಲಿ ಜಾರಿ ಮಾಡಬೇಕು.

* ಮರ ಕಡಿಯದೇ ಉಳಿಸುವವರಿಗೆ ಪಂಜಾಬ್‌ನಲ್ಲಿರುವ ‘ಕಾರ್ಬನ್‌ ಕ್ರೆಡಿಟ್‌’ ಮಾದರಿಯಲ್ಲಿ ಪ್ರೋತ್ಸಾಹಧನ ನೀಡಬೇಕು.

* ಶೇ 21ರಷ್ಟು ಇರುವ ಅರಣ್ಯ ಪ್ರದೇಶ ಶೇ 33ರಷ್ಟು ಆಗುವವರೆಗೆ ಅರಣ್ಯ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗೆ ಬಳಸಬಾರದು.

* ವಿದ್ಯುತ್‌ಚಾಲಿತ ಶವಾಗಾರಗಳಿಗೆ ಜೈವಿಕ ಅನಿಲ, ಸೌರವಿದ್ಯುತ್‌ಗಳನ್ನೇ ಬಳಸಬೇಕು.

* ಕೊಳವೆ ಬಾವಿಗಳ ಅಗತ್ಯವೇ ಇಲ್ಲದಂತೆ ಮಾಡುವಷ್ಟು ವ್ಯಾಪಕವಾಗಿ ಮಳೆನೀರು ಇಂಗಿಸಬೇಕು.

* ಕಾಫಿ/ಟಿ ಎಸ್ಟೇಟ್‌ಗಳಲ್ಲಿ ಕಳೆನಾಶಕಕ್ಕೆ ಕೆಮಿಕಲ್‌ ಬಳಸುವ ಬದಲು ಜೈವಿಕ ಕಳೆನಿಯಂತ್ರಣಗಳನ್ನು ಜನಪ್ರಿಯಗೊಳಿಸಬೇಕು.

* ಪಶ್ಚಿಮಘಟ್ಟದಲ್ಲಿ ಲಂಟಾನಾ, ಯುಪಟೋರಿಯಂ, ಪಾರ್ಥೇನಿಯಂ, ಜಲಕಳೆಗಳನ್ನು ನಿಯಂತ್ರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT