ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್‌ಡ್ರೈವ್‌ ಹಂಚಿದ್ದು ಯಾರು?

ಹಾಸನ ಜಿಲ್ಲೆಯಲ್ಲಿ ಬಿಜೆಪಿ – ಜೆಡಿಎಸ್‌ ಮುಖಂಡರ ಆರೋಪ, ಪ್ರತ್ಯಾರೋಪ
Published 3 ಮೇ 2024, 1:36 IST
Last Updated 3 ಮೇ 2024, 1:36 IST
ಅಕ್ಷರ ಗಾತ್ರ

ಹಾಸನ: ಪ್ರಜ್ವಲ್‌ ರೇವಣ್ಣ ಅವರಿಗೆ ಸೇರಿದ್ದೆನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೊಗಳನ್ನು ಪೆನ್‌ಡ್ರೈವ್‌ ಮೂಲಕ ಹಂಚಿದ್ದು ಯಾರೆಂಬ ಚರ್ಚೆ ಜಿಲ್ಲೆಯಲ್ಲಿ ಜೋರಾಗಿದೆ.

‘ನನ್ನ ಬಳಿ ಇದ್ದ ಪೆನ್‌ಡ್ರೈವ್‌ ಅನ್ನು ವಕೀಲ ದೇವರಾಜೇಗೌಡರಿಗೆ ಬಿಟ್ಟರೆ ಯಾರಿಗೂ ನೀಡಿಲ್ಲ’ ಎಂದು ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌, ವಿಡಿಯೋ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಅದನ್ನು ನಿರಾಕರಿಸಿರುವ ದೇವರಾಜೇಗೌಡ, ‘ವಿಡಿಯೋ ಹಂಚುವುದಿದ್ದರೆ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಮಾಡುತ್ತಿದ್ದೆ. ಎಸ್‌ಐಟಿ ತನಿಖೆಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ಈ ಮಧ್ಯೆ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌. ಲಿಂಗೇಶ್‌, ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಳೆನರಸೀಪುರ ತಾಲ್ಲೂಕಿನ ಪೊಲೀಸರ ಮೇಲೆ ಒತ್ತಡ ಹೇರಿ, ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರೇ ಇದಕ್ಕೆಲ್ಲ ಕಾರಣ’ ಎಂದು ಆರೋಪಿಸಿದ್ದಾರೆ. ಆದರೆ, ಇದನ್ನು ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ದೇವರಾಜೇಗೌಡ ನಿರಾಕರಿಸಿದ್ದಾರೆ.

ಪ್ರತಿಭಟನೆ, ಜೆಡಿಎಸ್‌ ಮುಖಂಡರ ಖಂಡನೆ

‘ಪ್ರಜ್ವಲ್‌ ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿ ನಗರದಲ್ಲಿ ಗುರುವಾರ ಬಿಎಸ್ಪಿ, ಅಂಬೇಡ್ಕರ್‌ ಬ್ರಿಗೇಡ್‌, ಎಬಿವಿಪಿ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಈ ನಡುವೆ, ಜೆಡಿಎಸ್‌ ಮುಖಂಡರು ನಗರದಲ್ಲಿ ಸಭೆ ನಡೆಸಿದ್ದು, ‘ಪೆನ್‌ಡ್ರೈವ್ ಹರಿದಾಡಲು ಕಾರಣರಾದವರು, ಅದಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದವರನ್ನು ಪಕ್ಷಾತೀತವಾಗಿ ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಹೊಳೆನರಸೀಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಕೀಲರಾದ ಸೂರನಹಳ್ಳಿ ಮೋಹನ್, ಎಸ್.ಎನ್. ಶ್ರೀನಿವಾಸ್, ಎಚ್.ಆರ್. ಮಂಜುನಾಥ್, ಆರ್. ಶಿವರಾಂ, ‘ಶಾಸಕ ಎಚ್.ಡಿ. ರೇವಣ್ಣ ಹಾಗೂ ಸಂಸದ ಪ್ರಜ್ವಲ್ ಅವರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯ ದೂರಿನಂತೆ ಹೊಳೆನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಲ್ಲ. ದೂರಿನ ಅನ್ವಯ ಕಲಂಗಳನ್ನು ಹಾಕಿಲ್ಲ’ ಎಂದು ದೂರಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸೂರಜ್‌ ರೇವಣ್ಣ, ‘ಜಿಲ್ಲೆಯ ರಾಜಕಾರಣದಲ್ಲಿ ರೇವಣ್ಣ ಅವರಿಗೆ ಪ್ರತಿಸ್ಪರ್ಧಿಯೇ ಇಲ್ಲ. ಅವರನ್ನು ಸಿಲುಕಿಸಬೇಕು, ದುರ್ಬಲಗೊಳಿಸಬೇಕೆಂದು ಈ ಷಡ್ಯಂತ್ರ ನಡೆದಿದೆ’ ಎಂದು ಹೇಳಿದ್ದಾರೆ.

‘ಆ ಪ್ರಕರಣದ ಬಗ್ಗೆ ನಾಲ್ಕು ತಿಂಗಳ ಹಿಂದೆಯೇ ಹೇಳಿದ್ದೆ. ಯಾರೋ ಒಬ್ಬರು ಅಶ್ಲೀಲ ಚಿತ್ರ ತೋರಿಸಲು ಬಂದಿದ್ದರು. ನೋಡುವುದಿಲ್ಲ ಎಂದಿದ್ದೆ. ಸಿಕ್ಕಿರುವ ಅಧಿಕಾರವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಧಿಕಾರದ ದುರಹಂಕಾರ, ಹಣ, ಮದದ ಪಿತ್ತ ಏರಿ ಇವೆಲ್ಲಾ ಆಗಿವೆ’ ಎಂದು ಬಿಜೆಪಿ ಮುಖಂಡ ಎ.ಟಿ. ರಾಮಸ್ವಾಮಿ ಪ್ರತಿಕ್ರಿಯಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT