ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಾಯವನ್ನು ದಲಿತರು ಪ್ರಶ್ನಿಸುತ್ತಿಲ್ಲ ಏಕೆ: ಸಿದ್ದರಾಮಯ್ಯ

ಆನಂದ್ ತೇಲ್ತುಂಬ್ಡೆ ಬಿಡುಗಡೆ ಒಕ್ಕೊರಲ ಒತ್ತಾಯ
Last Updated 12 ಆಗಸ್ಟ್ 2022, 15:34 IST
ಅಕ್ಷರ ಗಾತ್ರ

ಬೆಂಗಳೂರು: ಕಾನೂನು ಬಾಹಿರ ಚಟುವಟಿಕೆ ತಡೆ ಕಾಯಿದೆ ಅಡಿ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಗಿರುವ ಆನಂದ್ ತೇಲ್ತುಂಬ್ಡೆ ಸೇರಿ ಎಲ್ಲರನ್ನೂ ಬಿಡುಗಡೆ ಮಾಡಬೇಕು ಎಂದು ಶೋಷಿತರ ರಾಜ್ಯ ಮಟ್ಟದ ಐಕ್ಯತಾ ಸಮಾವೇಶ ಒಕ್ಕೊರಲಿನಿಂದ ಒತ್ತಾಯಿಸಿತು.‌

ದಲಿತ ಸಂಘರ್ಷ ಸಮಿತಿ(ಸಂಯೋಜಕ) ಆಯೋಜಿಸಿದ್ದ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳನ್ನು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಸಭೆಗೆ ಮಂಡಿಸಿದರು. ‘ಹೋರಾಟಗಾರರಾದ ತೀಸ್ತಾ ಸೆಟಲ್‌ವಾಡ್‌, ವರವರ ರಾವ್ ಸೇರಿ ಎಲ್ಲರ ವಿರುದ್ಧದ ಪ್ರಕಣಗಳನ್ನು ವಾಪಸ್ ಪಡೆಯಬೇಕು. ಸುಗ್ರೀವಾಜ್ಞೆ ಮೂಲಕ ಕರ್ನಾಟಕದಲ್ಲಿ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಬೇಕು. ಪಿಟಿಸಿಎಲ್ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಬೇಕು, ಭೂಸುಧಾರಣೆ, ಎಪಿಎಂಸಿ, ವಿದ್ಯುತ್ ತಿದ್ದುಪಡಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಂಬೇಡ್ಕರ್ ಅವರ ಮೊಮ್ಮಗಳು ರಮಾಬಾಯಿ ಆನಂದ್ ತೇಲ್ತುಂಬ್ಡೆ, ‘ಭೀಮ ಕೊರೆಗಾಂವ್ ಹೋರಾಟದ 200ನೇ ವರ್ಷದ ನೆನಪಿನ ಕಾರ್ಯಕ್ರಮವನ್ನು ತಡೆಯಲು ನಕ್ಸಲ್ ನಂಟಿನ ಆರೋಪ ಹೊರಿಸಲಾಯಿತು. ಸುಳ್ಳು ಪ್ರಕರಣ ದಾಖಲಿಸಿ ಆನಂದ್ ತೇಲ್ತುಂಬ್ಡೆ ಅವರನ್ನು ಜೈಲಿಗೂ ತಳ್ಳಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ರೀತಿಯ ರಾಜಕೀಯದ ವಿರುದ್ಧ ಸಾಮಾಜಿಕ ಸಂಘಟನೆಗಳು ಬಲಿಷ್ಠಗೊಳ್ಳಬೇಕಿದೆ. ಇದು ಅಂಬೇಡ್ಕರ್ ಅವರ ಆಶಯವೂ ಆಗಿತ್ತು. ಚಳವಳಿ ದುರ್ಬಲ ಆಗಿರುವುದರಿಂದ ಈ ರೀತಿಯ ದಬ್ಬಾಳಿಕೆ ಹೆಚ್ಚಾಗುತ್ತಿದೆ. ವಿರೋಧಿಗಳು ಎಷ್ಟೇ ಬಲಿಷ್ಠವಾಗಿದ್ದರೂ ಒಗ್ಗಟ್ಟಿನಿಂದ ಹೋರಾಡಿದರೆ ಮಣಿಸಲು ಸಾಧ್ಯವಿದೆ’ ಎಂದು ಅವರು ಹೇಳಿದರು.

ಅನ್ಯಾಯವನ್ನು ದಲಿತರು ಪ್ರಶ್ನಿಸುತ್ತಿಲ್ಲ ಏಕೆ: ಸಿದ್ದರಾಮಯ್ಯ

‘ಬಿಜೆಪಿ ಸರ್ಕಾರದಲ್ಲಿ ದಲಿತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ನಿಗದಿಯಾಗಬೇಕಿದ್ದ ಅನುದಾನದಲ್ಲಿ ₹14 ಸಾವಿರ ಕೋಟಿಯಷ್ಟು ಖೋತಾ ಆಗಿದೆ. ಆದರೂ, ಪ್ರಶ್ನೆ ಮಾಡುತ್ತಿಲ್ಲ ಏಕೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

‘2011ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜನಸಂಖ್ಯೆ ಶೇ 24.1ರಷ್ಟಿದೆ. ಅದರ ಪ್ರಕಾರವೇ ಅನುದಾನ ನಿಗದಿ ಮಾಡುತ್ತಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ₹42 ಸಾವಿರ ಕೋಟಿ ಅನುದಾನ ಸಿಗಬೇಕಿತ್ತು. ಆದರೆ, ₹28,234 ಕೋಟಿ ನಿಗದಿ ಮಾಡಲಾಗಿದೆ. ₹7,785 ಕೋಟಿಯನ್ನು ಬೇರೆ ಯೋಜನೆಗಳಿಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಅದನ್ನೂ ಯಾರೂ ಪ್ರಶ್ನೆ ಮಾಡುತ್ತಿಲ್ಲ’ ಎಂದರು.

‘ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಯಾವ ರಾಜ್ಯದಲ್ಲೂ ನಿಗದಿ ಮಾಡಿಲ್ಲ. ಕಾಂಗ್ರೆಸ್ ಅಧಿಕಾರ ಇರುವ ಬೇರೆ ರಾಜ್ಯಗಳಲ್ಲೂ ಜನಸಂಖ್ಯೆ ಆಧರಿಸಿ ದಲಿತರಿಗೆ ಅನುದಾನ ನಿಗದಿ ಮಾಡಿದ ಉದಾಹರಣೆ ಇಲ್ಲ. ಈ ಕೆಲಸವನ್ನು ನಾನು ಮುಖ್ಯಮಂತ್ರಿ ಆಗಿದ್ದಾಗ ಯಾವುದೇ ಮುಲಾಜಿಗೆ ಒಳಗಾಗದೆ ಮಾಡಿದ್ದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಲ್ಲಿ ಕೆಲವರು ಬಿಜೆಪಿ ಸೇರಿ ನರೇಂದ್ರ ಮೋದಿ ಹೊಗಳುತ್ತಿದ್ದಾರೆ. ಇದಕ್ಕಿಂತ ದುರಂತ ಬೇರೆ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಒಳಮೀಸಲಾತಿ ಜಾರಿ ಸಾಧ್ಯವಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಸಚಿವ ಎ.ನಾರಾಯಣಸ್ವಾಮಿ ಹೇಳುತ್ತಿದ್ದಾರೆ. ಅದಕ್ಕೂ ಚಪ್ಪಾಳೆ ಹೊಡೆಯುತ್ತಿದ್ದೀರಿ. ಬಿಜೆಪಿ ಸರ್ಕಾರದ ಮೋಸಗಳನ್ನು ದಲಿತರು, ಕಾರ್ಮಿಕರು, ರೈತ ಸಂಘಟನೆಗಳು ಒಗ್ಗೂಡಿ ಜನರಿಗೆ ತಿಳಿಸಬೇಕಾಗಿದೆ’ ಎಂದರು.

‘ಕಾರಜೋಳ, ನಾರಾಯಣಸ್ವಾಮಿಗೆ ಪ್ರಶ್ನೆ ಮಾಡಿ’

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಭೂಮಿ ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ದೆಗೆ ಸಮಗ್ರ ತಿದ್ದುಪಡಿ ಅಗತ್ಯವಿದ್ದರೂ, ಸದನದಲ್ಲಿ ಪ್ರಶ್ನೆ ಮಾಡುತ್ತಿಲ್ಲ ಏಕೆ’ ಎಂದು ಸಭೆಯಲ್ಲಿದ್ದ ಹೋರಾಟಗಾರರು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದರು.

ಪೊಲೀಸರು ಅವರನ್ನು ಹೊರಕ್ಕೆ ಕಳುಹಿಸುವ ಪ್ರಯತ್ನ ಮಾಡಿದರು. ಅದನ್ನು ತಡೆದ ಸಿದ್ದರಾಮಯ್ಯ, ‘ಚರ್ಚೆ ಮಾಡಲು ಅವಕಾಶ ಇರಬೇಕು. ಕೇಳಲಿ ಸುಮ್ಮನಿರಿ’ ಎಂದರು.

‘ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಆಗಲೇಬೇಕು ಎಂದು ನಾನೂ ಹೇಳುತ್ತಿದ್ದೇನೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮನೆ ಮುಂದೆ ಕುಳಿತು ಈ ಪ್ರಶ್ನೆಗಳನ್ನು ನೀವು ಕೇಳಬೇಕಲ್ಲವೇ’ ಎಂದು ಸಿದ್ದರಾಮಯ್ಯ ಮರು ಪ್ರಶ್ನೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT