ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ರಾಂತ ಕುಲಪತಿ ಬಂಧನಕ್ಕೆ ಕಾನೂನು ತಜ್ಞರ ಸಲಹೆ

ಇ–ಟೆಂಡರ್‌ ಇಲ್ಲದೇ ಹಂಪಿ ಕನ್ನಡ ವಿ.ವಿ.ಯಲ್ಲಿ ₹ 50.86 ಕೋಟಿ ಕಾಮಗಾರಿ
Last Updated 24 ಫೆಬ್ರುವರಿ 2023, 5:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ₹50.86 ಕೋಟಿ ಮೊತ್ತದ ಕಾಮಗಾರಿಗಳನ್ನು ಇ–ಟೆಂಡರ್‌ ಇಲ್ಲದೇ ಕೈಗೊಂಡಿದ್ದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ (ಕೆಟಿಪಿಪಿ) ಕಾಯ್ದೆ ಉಲ್ಲಂಘಿಸಲಾಗಿದೆ. ಇದಕ್ಕೆ ಕಾರಣರಾದ ವಿಶ್ರಾಂತ ಕುಲಪತಿ ಮಲ್ಲಿಕಾ ಎಸ್‌. ಘಂಟಿ, ವಿಶ್ರಾಂತ ಕುಲಸಚಿವ ಪ್ರೊ.ಡಿ. ಪಾಂಡುರಂಗಬಾಬು ಹಾಗೂ ಇತರ ಎಂಟು ಜನರನ್ನು ಬಂಧಿಸಬೇಕೆಂದು ವಿ.ವಿ. ನೇಮಿಸಿದ್ದ ವಕೀಲರು ವಿ.ವಿ. ಆಡಳಿತಕ್ಕೆ ನೀಡಿರುವ ಕಾನೂನು ಅಭಿಪ್ರಾಯದಲ್ಲಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು 15 ದಿನಗಳ ಒಳಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು. ಇದರಲ್ಲಿ ಶಾಮಿಲಾದವರನ್ನು ಇನ್ನೂ ತಡಮಾ ಡದೆ ಬಂಧಿಸಬೇಕೆಂದೂ ಸಲಹೆ ಮಾಡಿದ್ದಾರೆ. ಈ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

2015ರಿಂದ 2019ರ ಅವಧಿಯಲ್ಲಿ ನಡೆದ ₹50.86 ಕೋಟಿಯ ವಿವಿಧ ಕಾಮಗಾರಿಗಳನ್ನು ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಮಾಡ ಲಾಗಿದೆ ಎಂದು ವಿಶ್ವವಿದ್ಯಾಲಯದ ಅಂದಿನ ಕಾನೂನು ಘಟಕದ ಸೂಪರಿಂಟೆಂಡೆಂಟ್‌ ಎಚ್‌.ಎಂ. ಸೋಮನಾಥ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಲೋಕಾಯುಕ್ತ ತನಿಖೆ ನಡೆಸಿ, 2021ರಲ್ಲಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿತ್ತು. ಕೆಟಿಪಿಪಿ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿತ್ತು.

ಬಳಿಕ ಲೋಕಾಯುಕ್ತ ವರದಿ ಆಧರಿಸಿ ಸೋಮನಾಥ ರಾಜ್ಯಪಾಲರಿಗೂ ದೂರು ಕೊಟ್ಟಿದ್ದರು. ಪ್ರಕರಣದಲ್ಲಿ ಶಾಮಿಲಾದವರ ವಿರುದ್ಧ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ವಿಶ್ವವಿದ್ಯಾಲಯಕ್ಕೆ ಸೂಚಿ ಸಿತ್ತು. ಈ ಬಗ್ಗೆ 2022ರ ಆಗಸ್ಟ್‌ 4ರಂದು ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯಲ್ಲಿ ಚರ್ಚಿಸಿ, ಕಾನೂನು ಅಭಿಪ್ರಾಯ ಪಡೆದು ಮುಂದು ವರೆಯಲು ನಿರ್ಣಯ ಕೈಗೊಳ್ಳಲಾಗಿತ್ತು.

ನಿರ್ಣಯದ ಪ್ರಕಾರ, ವಕೀಲ ಎಂ. ಅಶ್ವತ್ಥನಾರಾಯಣ ರೆಡ್ಡಿ ಅವರಿಗೆ ವಿ.ವಿ. ಪತ್ರ ಬರೆದು ಇಡೀ ಪ್ರಕರಣದ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಕಾನೂನು ಅಭಿಪ್ರಾಯ ತಿಳಿಸುವಂತೆ ಕೋರಿತ್ತು. ಅದರ ಪ್ರಕಾರ, ರೆಡ್ಡಿ ಅವರು ವಿ.ವಿ. ಕುಲಸಚಿವರಿಗೆ ಕಾನೂನು ಅಭಿಪ್ರಾಯ ತಿಳಿಸಿದ್ದಾರೆ. ಅದರಲ್ಲಿ ಮಲ್ಲಿಕಾ ಘಂಟಿ, ಡಿ. ಪಾಂಡುರಂಗಬಾಬು ಹಾಗೂ ಇತರರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸುವಂತೆ ಸಲಹೆ ಮಾಡಿದ್ದಾರೆ.

ಕಾಮಗಾರಿ ನಡೆದ ಅವಧಿಯಲ್ಲಿ ಮಂಜುನಾಥ ಬೇವಿನಕಟ್ಟಿ, ಅಶೋಕಕುಮಾರ ರಂಜೇರೆ–ಕುಲಸಚಿವರು, ಪಿ. ಮಹದೇವಯ್ಯ, ಸಿದ್ದಗಂಗಮ್ಮ–ಹಣಕಾಸು ಅಧಿಕಾರಿಗಳು, ಜೆ.ಎಸ್‌. ನಂಜಯ್ಯನವರ್–ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ, ಎಚ್‌. ಶ್ರೀನಿವಾಸ್‌–ಸಹಾಯಕ ಕುಲಸಚಿವ, ಈಟಿ ನಾಗರಾಜ–ಯೋಜನಾ ಅಧಿಕಾರಿ, ಹಾಗೂ ಜಿ. ಶಿವಕುಮಾರ ಸೂಪರಿಟೆಂಡೆಂಟ್‌ ಆಗಿದ್ದರು. ಇವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಶೋಧನಾ ಸಮಿತಿ ರಚಿಸಿ ಆದೇಶ

ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಪೂರ್ಣಾವಧಿಗೆ ಕುಲಪತಿ ನೇಮಕ ಪ್ರಕ್ರಿಯೆ ಚುರುಕುಗೊಳಿಸಿರುವ ಉನ್ನತ ಶಿಕ್ಷಣ ಇಲಾಖೆಯು ಗುರುವಾರ, ಮೂವರು ಸದಸ್ಯರನ್ನು ಒಳಗೊಂಡ ಶೋಧನಾ ಸಮಿತಿ ರಚಿಸಿದೆ.

ಉತ್ತರ ಪ್ರದೇಶದ ಮಹಾತ್ಮ ಗಾಂಧಿ ಚಿತ್ರಕೂಟ ಗ್ರಾಮೋದಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎನ್‌.ಸಿ. ಗೌತಮ್‌, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಸಿದ್ದು ಪಿ. ಅಲಗೂರು ಹಾಗೂ ಕರ್ನಾಟಕ ವಿ.ವಿ. ವಿಶ್ರಾಂತ ಕುಲಪತಿ ಪ್ರೊ.ಶ್ರೀನಿವಾಸ.ಕೆ. ಸೈದಾಪುರ ಅವರನ್ನು ಸಮಿತಿಗೆ ನೇಮಿಸಲಾಗಿದೆ. ಈ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಕುಲಪತಿ ಹುದ್ದೆಗೆ ಒಟ್ಟು 22 ಜನ ಅರ್ಜಿ ಸಲ್ಲಿಸಿದ್ದಾರೆ.

ಪೂರ್ಣಾವಧಿ ಕುಲಪತಿ ನೇಮಕಗೊಳ್ಳುವವರೆಗೆ ಫೆ. 21ರಿಂದ ಜಾರಿಗೆ ಬರುವಂತೆ ಆ ಸ್ಥಾನದಲ್ಲಿ ಮುಂದುವರೆಯಲು ವಿ.ವಿ. ಹಿರಿಯ ಪ್ರಾಧ್ಯಾಪಕ ಟಿ.ಪಿ. ವಿಜಯ್‌ ಅವರಿಗೆ ಜವಾಬ್ದಾರಿ ವಹಿಸಿ ಕುಲಪತಿ ಆದೇಶ ಹೊರಡಿಸಿದ್ದಾರೆ.

ಹಂಪಿ ಕನ್ನಡ ವಿ.ವಿ. ಮತ್ತಿಬ್ಬರ ವರ್ಗಾವಣೆ

ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಟಿ.ಪಿ. ವಿಜಯ್‌ ಅವರು ಅಧಿಕಾರ ಸ್ವೀಕರಿಸಿದ ನಂತರ ವಿ.ವಿ.ಯಲ್ಲಿ ವರ್ಗಾವಣೆ ಪರ್ವ ಆರಂಭಗೊಂಡಿದೆ.

ಫೆ. 21ರಂದು ಅವರು ಅಧಿಕಾರ ಸ್ವೀಕರಿಸಿದ್ದರು. ಅದಾದ ಒಂದು ದಿನದ ಬಳಿಕ ಮೂವರನ್ನು ವರ್ಗಾವಣೆಗೊಳಿಸಿದ್ದರು. ಗುರುವಾರ ಮತ್ತಿಬ್ಬರನ್ನು ವರ್ಗಾವಣೆಗೊಳಿಸಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗದಲ್ಲಿನ ಕನ್ನಡ ವಿ.ವಿ. ವಿಸ್ತರಣಾ ಕೇಂದ್ರದಿಂದ ಪ್ರೊ.ವಾಸುದೇವ ಬಡಿಗೇರ, ಎಚ್‌.ಡಿ. ಪ್ರಶಾಂತ್‌ ಅವರನ್ನು ಕನ್ನಡ ವಿ.ವಿ.ಗೆ ವರ್ಗಾವಣೆಗೊಳಿಸಿದ್ದಾರೆ.

ವಾಸುದೇವ ಬಡಿಗೇರ ಅವರು ದೇವದುರ್ಗದ ವಿಸ್ತರಣಾ ಕೇಂದ್ರದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಮನವಿ ಮೇರೆಗೆ ವರ್ಗ ಮಾಡಲಾಗಿದೆ. ಇನ್ನು, ಪ್ರಶಾಂತ್‌, ದೇವದುರ್ಗದಲ್ಲಿ ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿ ಆರಂಭಿಸುವ ಕಾರ್ಯಕ್ಕೆ ನಿಯೋಜನೆಗೊಳಿಸಲಾಗಿತ್ತು. ಇಬ್ಬರು ಫೆ. 27ರೊಳಗೆ ಕನ್ನಡ ವಿ.ವಿ.ಯಲ್ಲಿ ಕೆಲಸಕ್ಕೆ ಹಾಜರಾಗಬೇಕೆಂದು ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ ಗುರುವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.


***

ವಿಶ್ವವಿದ್ಯಾಲಯ ನೇಮಿಸಿದ್ದ ವಕೀಲರು ಕಾನೂನು ಸಲಹೆ ಕೊಟ್ಟಿದ್ದಾರೆ. ಕುಲಪತಿಯವರೊಂದಿಗೆ ಚರ್ಚಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು

-ಪ್ರೊ.ಎ. ಸುಬ್ಬಣ್ಣ ರೈ, ಕುಲಸಚಿವ, ಹಂಪಿ ಕನ್ನಡ ವಿ.ವಿ.

***

ಎಲ್ಲ ಕಾಮಗಾರಿಗಳನ್ನು ಸರ್ಕಾರಿ ಸಂಸ್ಥೆ ಕೆಆರ್‌ಐಡಿಎಲ್‌ನಿಂದ ಮಾಡಿಸ ಲಾಗಿದೆ. ಟೆಂಡರ್‌ ಕರೆಯುವ ಪ್ರಶ್ನೆಯೇ ಇಲ್ಲ. ವಿ.ವಿ. ಪರಿನಿಯಮದ ಪ್ರಕಾರ ಕೆಲಸ ಮಾಡಿರುವೆ‌

-ಮಲ್ಲಿಕಾ ಎಸ್‌. ಘಂಟಿ, ವಿಶ್ರಾಂತ ಕುಲಪತಿ, ಹಂಪಿ ಕನ್ನಡ ವಿ.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT