ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

115 ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್: ಸಚಿವ ಡಾ.ಕೆ. ಸುಧಾಕರ್

5 ವರ್ಷದೊಳಗಿನ 2,381 ಮಕ್ಕಳಲ್ಲಿ ಗಂಭೀರ ಶ್ರವಣದೋಷ
Last Updated 2 ಮಾರ್ಚ್ 2023, 16:08 IST
ಅಕ್ಷರ ಗಾತ್ರ

ಬೆಂಗಳೂರು: ‘ಶ್ರವಣದೋಷ ಸಮಸ್ಯೆ ಹೊಂದಿದ್ದವರಲ್ಲಿ 115 ಮಕ್ಕಳಿಗೆ ಈ ವರ್ಷ ಕಾಕ್ಲಿಯರ್ ಇಂಪ್ಲಾಂಟ್‌ ಯೋಜನೆಯಡಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಯೋಜನೆಯಡಿ 577 ಫಲಾನುಭವಿಗಳಿಗೆ ವಿವಿಧ ಹಂತದಲ್ಲಿ ಕಾಕ್ಲಿಯರ್‌ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸಲಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಪ್ರತಿ ವರ್ಷ ಮಾರ್ಚ್ 3ರಂದು ವಿಶ್ವ ಶ್ರವಣ ದಿನ ಆಚರಿಸಲಾಗುತ್ತಿದೆ. ಆರೋಗ್ಯ ಇಲಾಖೆಯು ರಾಜ್ಯದ ವಿವಿಧೆಡೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ‘ಕಿವಿ ಮತ್ತು ಶ್ರವಣ ಆರೈಕೆ ಎಲ್ಲರಿಗಾಗಿ, ಬನ್ನಿ ವಾಸ್ತವವಾಗಿಸೋಣ’ ಎನ್ನುವುದು ಈ ಬಾರಿಯ ವಿಶ್ವ ಶ್ರವಣ ದಿನದ ಘೋಷ ವಾಕ್ಯವಾಗಿದೆ.

‘ಎಲ್ಲಾ ಆರೋಗ್ಯ ಕಾರ್ಯಕರ್ತೆಯರಿಗೆ ಕಿವಿಯ ಆರೈಕೆ, ಪ್ರಥಮ ಚಿಕಿತ್ಸೆ ಹಾಗೂ ತಪಾಸಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಶ್ರವಣ ಆರೈಕೆಯನ್ನು ಪ್ರಾಥಮಿಕ ಆರೋಗ್ಯ ಸೇವೆಗಳಲ್ಲಿ ವಿಲೀನಗೊಳಿಸಲಾಗುತ್ತಿದೆ. ಗಂಭೀರ ಸ್ವರೂಪದ ಶ್ರವಣದೋಷ ಸಮಸ್ಯೆ ನಿವಾರಣೆಗೆ 6 ವರ್ಷದೊಳಗಿನ ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಯೋಜನೆಯನ್ನು ಜಾರಿಗೆ ತರಲಾಗಿದೆ. ಫಲಾನುಭವಿಗಳಿಗೆ ವಿವಿಧ ಹಂತದಲ್ಲಿ ಕಾಕ್ಲಿಯರ್‌ ಶಸ್ತ್ರಚಿಕಿತ್ಸೆಗಾಗಿ ತಯಾರಿ ನಡೆಸಲಾಗಿದೆ’ ಎಂದು ಡಾ.ಕೆ. ಸುಧಾಕರ್ ಹೇಳಿದ್ದಾರೆ.

‘ಈ ವಿಶ್ವ ಶ್ರವಣ ದಿನದಂದು ಎಲ್ಲಾ ಜಿಲ್ಲೆಗಳಲ್ಲಿ ಶ್ರವಣ ತಪಾಸಣಾ ಶಿಬಿರ ನಡೆಸಿ, ಚಿಕಿತ್ಸೆ ಒದಗಿಸಲಾಗುವುದು. 6 ವರ್ಷದೊಳಗಿನ ಮಕ್ಕಳಿಗೆ ಗಂಭೀರ ಸ್ವರೂಪದ ಶ್ರವಣ ದೋಷ ಇದ್ದಲ್ಲಿ, ಕಾಕ್ಲಿಯರ್‌ ಇಂಪ್ಲಾಂಟ್‌ ಶಸ್ತ್ರಚಿಕಿತ್ಸೆಗೆ ಶಿಫಾಸರು ಮಾಡಲಾಗುವುದು. ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಶ್ರವಣ ಸಾಧನಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

‘ಶ್ರವಣದೋಷ ಸಮಸ್ಯೆ ತಡೆಗೆ ನಿಯಮಿತ ಶ್ರವಣ ಪರೀಕ್ಷೆ ಅಗತ್ಯ. ನವಜಾತ ಶಿಶುಗಳು, ಗರ್ಭಿಣಿಯರಿಗೆ ಶ್ರವಣ ಪರೀಕ್ಷೆ ಸೇರಿ ವಿವಿಧ ಮುನ್ನೆಚ್ಚರಿಗೆ ಕ್ರಮಗಳಿಂದ ಶ್ರವಣದೋಷ ಸಮಸ್ಯೆ ತಡೆಯಲು ಸಾಧ್ಯ’ ಎಂದು ಹೇಳಿದ್ದಾರೆ.

2 ಲಕ್ಷ ಮಂದಿಗೆ ಶ್ರವಣದೋಷ

‘ರಾಜ್ಯದಲ್ಲಿ 2008-09ರಲ್ಲಿ ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ಜಾರಿಯಾಗಿದ್ದು, ಉಪಕರಣ ಮತ್ತು ಶಸ್ತ್ರಚಿಕಿತ್ಸೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಎನ್.ಪಿ.ಪಿ.ಸಿ.ಡಿ ಕಾರ್ಯಕ್ರಮದಡಿ 2 ಲಕ್ಷ ಮಂದಿ ಶ್ರವಣದೋಷವುಳ್ಳವರನ್ನು, 35,418 ಮಂದಿ ಗಂಭೀರ ಶ್ರವಣದೋಷವುಳ್ಳವರನ್ನು ಗುರುತಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘5 ವರ್ಷದೊಳಗಿನ 2,381 ಮಕ್ಕಳಲ್ಲಿ ಗಂಭೀರ ಶ್ರವಣ ದೋಷವಿದೆ. ರಾಜ್ಯದ ಎಲ್ಲಾ ಇ.ಎನ್.ಟಿ ತಜ್ಞರ ಸಹಾಯದಿಂದ ಕಿವಿಯ ಸಮಸ್ಯೆಗಳಿಗೆ 10,213 ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 11,857 ಫಲಾನುಭವಿಗಳಿಗೆ ಶ್ರವಣ ಸಾಧನ ನೀಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT