ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎತ್ತಿನಹೊಳೆ ಯೋಜನೆ ಏತ ಕಾಮಗಾರಿ ಸೆ. 6ರಂದು ಉದ್ಘಾಟನೆ: ಡಿ.ಕೆ. ಶಿವಕುಮಾರ್

Published : 1 ಸೆಪ್ಟೆಂಬರ್ 2024, 9:46 IST
Last Updated : 1 ಸೆಪ್ಟೆಂಬರ್ 2024, 9:46 IST
ಫಾಲೋ ಮಾಡಿ
Comments

ಬೆಂಗಳೂರು: ‘ರಾಜ್ಯದ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಗೌರಿ ಹಬ್ಬದಂದು (ಸೆ. 6) ಉದ್ಘಾಟಿಸಲಿದ್ದಾರೆ’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಜಿಲ್ಲೆಯ ಜನರು ಈ ಯೋಜನೆಯನ್ನು ಎದುರು ನೋಡುತ್ತಿದ್ದಾರೆ’ ಎಂದರು.

‘ಅನೇಕ ನಾಯಕರು ಈ ಯೋಜನೆಗೆ ಹೋರಾಟ ಮಾಡಿದ್ದು, ಅನೇಕ ಪಕ್ಷಗಳು ಇದಕ್ಕೆ ಸಹಕಾರ ನೀಡಿವೆ. ಕಳೆದ ಒಂದು ವರ್ಷದಿಂದ ಈ ಯೋಜನೆಯನ್ನು ಸವಾಲಾಗಿ ಸ್ವೀಕರಿಸಿದ್ದೆ. ಮೊನ್ನೆಯಷ್ಟೇ ಯೋಜನೆಯ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ಮಾಡಿದ್ದೆ’ ಎಂದು ತಿಳಿಸಿದರು.

‘ಈ ಯೋಜನೆಯಲ್ಲಿ ನೀರನ್ನು ಪಂಪ್ ಮಾಡುವ ಮೂಲಕ ಕಾಲುವೆಗಳಿಗೆ ಹರಿಸುತ್ತಿದ್ದೇವೆ. ಈ ಯೋಜನೆ ಮಾರ್ಗದ ಮಧ್ಯೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಅವುಗಳನ್ನು ಬಗೆಹರಿಸಿದ್ದೇವೆ. ಈ ಜಾಗ ಹಸ್ತಾಂತರವಾದ ಬಳಿಕ ಪ್ರಮುಖ ಕಾಲುವೆಗಳಿಗೆ ನೀರು ಹರಿಯಲಿವೆ. ಈಗ ತಾತ್ಕಾಲಿಕವಾಗಿ ವಾಣಿ ವಿಲಾಸ ಅಣೆಕಟ್ಟಿಗೆ ನೀರು ಹರಿಸಲಾಗುತ್ತಿದೆ. ಯೋಜನೆಯ 7 ವಿಯರ್‌ಗಳು ನೀರು ಎತ್ತುತ್ತಿವೆ’ ಎಂದು ತಿಳಿಸಿದರು.

‘ಈ ಯೋಜನೆಯ ಫಲಾನುಭವಿ ಜಿಲ್ಲೆಯ ಜನರು ನೀರನ್ನು ಎತ್ತುವ ದೃಶ್ಯ ಕಣ್ತುಂಬಿಕೊಳ್ಳಬಹುದು. ಅಲ್ಲಿ ಜಾಗ ಕಿರಿದಾಗಿದ್ದರೂ ಪೊಲೀಸರಿಗೆ ಹೇಳಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಪಕ್ಷಬೇಧ ಮರೆತು ಎಲ್ಲ ನಾಯಕರು, ರೈತರಿಗೆ ಆಹ್ವಾನಿಸಲಾಗುವುದು. ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಹ್ವಾನ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ತಿಳಿಸಿದರು.

ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಭೋಜನ ಕೂಟದಲ್ಲಿ ಯಾವ ವಿಚಾರ ಚರ್ಚೆಯಾಯಿತು ಎಂದು ಕೇಳಿದಾಗ, ‘ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಬೆಳಗಾವಿಯಲ್ಲಿ ನಡೆದ ಎಐಸಿಸಿ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣಗೊಂಡಿವೆ. ಈಗ ಆ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ. ಗಾಂಧೀಜಿ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನ ವಿಶ್ವವೇ ಗಮನಿಸಿದೆ. ಇದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಯಿತು. ಮುಂದಿನ ಒಂದು ವಾರದಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವರದಿ ನೀಡುವಂತೆ ಸಚಿವರಿಗೆ ತಿಳಿಸಲಾಗಿದೆ. ಪಕ್ಷದ ವತಿಯಿಂದಲೂ ಕಾರ್ಯಕ್ರಮ ಮಾಡಲಾಗುತ್ತಿದ್ದು, ಆ ಬಗ್ಗೆ ಪಕ್ಷದ ಕಚೇರಿಯಲ್ಲಿ ಚರ್ಚೆ ಮಾಡಿದ್ದೆವು’ ಎಂದು ತಿಳಿಸಿದರು.

ಕೋವಿಡ್ ಅಕ್ರಮದ ಬಗ್ಗೆ ನ್ಯಾ. ಡಿಕುನ್ಹಾ ಅವರ ಸಮಿತಿ ವರದಿ ಸಲ್ಲಿಕೆ ಹಾಗೂ ಮಾಜಿ ಆರೋಗ್ಯ ಸಚಿವ ಡಾ. ಸುಧಾಕರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಕುನ್ಹಾ ಅವರ ವರದಿಯಲ್ಲಿ ಏನಿದೆ ಎಂದು ಗೊತ್ತಿಲ್ಲ. ಸುಧಾಕರ್ ಅವರ ಹೇಳಿಕೆಯ ಬಗ್ಗೆಯೂ ಮಾಹಿತಿ ಇಲ್ಲ. ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ. ಈ ವಿಚಾರವಾಗಿ ಸರ್ಕಾರದ ವಕ್ತಾರರು ಪ್ರತಿಕ್ರಿಯೆ ನೀಡುತ್ತಾರೆ’ ಎಂದು ತಿಳಿಸಿದರು.

ರಾಜಭವನದಲ್ಲಿ ವಿರೋಧ ಪಕ್ಷಗಳ ನಾಯಕರ ವಿರುದ್ಧ ಯಾವುದೇ ಅರ್ಜಿ ಇಲ್ಲ ಎಂದು ರಾಜ್ಯಪಾಲರು ಹೇಳಿದ್ದು, ಹಾಗಾದರೆ ಕಡತಗಳು ಏನಾದವು ಎಂದು ಕೇಳಿದಾಗ, ‘ನಮಗೂ ಅದೇ ಯಕ್ಷಪ್ರಶ್ನೆಯಾಗಿದೆ. ಈ ವಿಚಾರವಾಗಿ ಮಾಹಿತಿ ಪಡೆಯುತ್ತೇವೆ. ನಾವು ನಮಗೆ ಬಂದಿರುವ ಮಾಹಿತಿಗಳ ಮೇರೆಗೆ ನಮ್ಮ ಮನವಿ ಸಲ್ಲಿಸಿದ್ದೇವೆ’ ಎಂದರು.

ಕಾಂಗ್ರೆಸ್ ನಾಯಕರ ವಿರುದ್ಧದ ಎರಡು ಅರ್ಜಿಗಳು ಮಾತ್ರ ರಾಜ್ಯಪಾಲರ ಬಳಿ ಉಳಿದುಕೊಂಡಿವೆಯಂತೆ ಎಂದು ಕೇಳಿದಾಗ, ‘ಆ ಬಗ್ಗೆ ನಮಗೆ ಮಾಹಿತಿ ಇಲ್ಲ. ನಮ್ಮ ವಿರುದ್ಧ ಕೆಲವರು ಅರ್ಜಿ ಕೊಡುತ್ತಿರುತ್ತಾರೆ. ಮತ್ತೆ ಕೆಲವರು ನನ್ನ ವಿರುದ್ಧ ದೂರು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರು ದೂರು ನೀಡಲಿ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT