ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನೋತ್ಸವ | ದೇಶಕ್ಕಾಗಿ ಜೀವವಲ್ಲ, ಜೀವನ ನೀಡಬೇಕಾಗಿದೆ: ಬೊಮ್ಮಾಯಿ

ರಾಷ್ಟ್ರೀಯ ಯುವಜನೋತ್ಸವ ಸಮಾರೋಪದಲ್ಲಿ ಮುಖ್ಯಮಂತ್ರಿ
Last Updated 16 ಜನವರಿ 2023, 8:56 IST
ಅಕ್ಷರ ಗಾತ್ರ

ಧಾರವಾಡ: ‘ದೇಶಕ್ಕಾಗಿ ಜೀವ ಕಾಲ ಗತಿಸಿದೆ. ಈಗ ಏನಿದ್ದರೂ ದೇಶಕ್ಕಾಗಿ ಜೀವನ ನೀಡಬೇಕಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

26ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಸೋಮವಾರ ನಡೆದ ಸಮಾರೋಪದಲ್ಲಿ ಅವರು ಕನ್ನಡದ ನಮಸ್ಕಾರದೊಂದಿಗೆ ಹಿಂದಿಯಲ್ಲಿ ಮಾತನಾಡಿದರು.

‘ಸಮಯ, ದೇಶ ಹಾಗೂ ಭವಿಷ್ಯ ಯಾರಿಗೂ ಕಾಯುವುದಿಲ್ಲ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಾವು ಬದಲಾಗಿ ಅದರೊಂದಿಗೆ ಸಾಗಬೇಕು. ಭಾರತ ಯುವಶಕ್ತಿಯ ಕಾಲಘಟ್ಟದಲ್ಲಿದ್ದು, ಆತ್ಮವಿಶ್ವಾಸ ಹಾಗೂ ನಿಶ್ಚಿತ ಗುರಿಯೊಂದಿಗೆ ಮುಂದೆ ಸಾಗಿದರೆ ಎಂಥದ್ದೇ ಸವಾಲು ಎದುರಿಸಲು ಸಾಧ್ಯ. ಆ ಮೂಲಕ ಭಾರತವನ್ನೂ ಜಗತ್ತಿನ ಮುಂಚೂಣಿ ರಾಷ್ಟ್ರವನ್ನಾಗಿಸಬಹುದು’ ಎಂದರು.

‘ಭಾರತೀಯರು ಬುದ್ಧಿಮತ್ತೆಯ ಜತೆಗೆ ಇಲ್ಲಿನ ಸಂಸ್ಕೃತಿ, ಸಂಸ್ಕಾರದಿಂದಲೂ ಶ್ರೀಮಂತರಾಗಿದ್ದಾರೆ. ಜತೆಗೆ ದೇಶದ ಜನಸಂಖ್ಯೆಯೂ ನಮ್ಮ ಶಕ್ತಿಯಾಗಿದೆ. ಬದುಕಿನ ಆಟವನ್ನು ಗೆಲ್ಲುವ ಸಲುವಾಗಿಯೇ ಆಡಬೇಕು. ಇಟ್ಟ ಹೆಜ್ಜೆಯನ್ನು ಹಿಂದಿಡದೆ ಹೋರಾಡಿದರೆ ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸಬಹುದು. ಇಡೀ ದೇಶದ ಯುವ ಸಮೂಹವನ್ನು ಒಂದೆಡೆ ಸೇರಿಸುವ ಈ ಯುವಜನೋತ್ಸವದ ಮೂಲಕ ದೇಶದ ಭವಿಷ್ಯವೇ ಹೊಸ ಮನ್ವಂತರದತ್ತ ಸಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ 5ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಂಡಿದೆ. 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ದತ್ತುಪಡೆಯಲಾಗಿದೆ. ಮುಂದಿನ ಒಲಿಂಪಿಕ್‌ಗೆ ಇವರನ್ನು ಸಜ್ಜುಗೊಳಿಸುವ ಹೊಣೆಯನ್ನು ರಾಜ್ಯ ಸರ್ಕಾರವೇ ಪಡೆದಿದೆ’ ಎಂದು ಬೊಮ್ಮಾಯಿ ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್, ‘ಯುವಜನೋತ್ಸವದ ನಂತರ ದೇಶದ ವಿವಿಧ ಪ್ರದೇಶಗಳಿಂದ ಬಂದಿರುವ ಪ್ರತಿನಿಧಿಗಳು ಪರಸ್ಪರ ಸಂಪರ್ಕದಲ್ಲಿದ್ದಲ್ಲಿ ಯುವ ಶಕ್ತಿ ವೃದ್ಧಿಸಲಿದೆ. ಅದರ ಮೂಲಕ ದೇಶದ ಆರ್ಥಿಕತೆ ಹಾಗೂ ಭವಿಷ್ಯ ಇನ್ನಷ್ಟು ಬಲಿಷ್ಠವಾಗಲಿದೆ’ ಎಂದರು.

‘ಕೋವಿಡ್‌–19 ಅನ್ನು ಭಾರತ ಎದುರಿಸಿದ ರೀತಿ ಇಡೀ ಜಗತ್ತನ್ನೇ ಚಕಿತಗೊಳಿಸಿತು. ಹಾಗೆಯೇ ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಇದೀಗ ರಫ್ತು ಮಾಡುವ ಮಟ್ಟಿಗೆ ಬೆಳೆದಿದೆ. ಹೀಗಾಗಿ ಭವಿಷ್ಯದಲ್ಲಿ ಭ್ರಷ್ಟಾಚಾರಮುಕ್ತ, ಕಸ ಮುಕ್ತ ಹಾಗೂ ಸ್ತೂಲಕಾಯ ಮುಕ್ತ ಭಾರತವನ್ನು ನಿರ್ಮಿಸುವ ಹೊಣೆ ಯುವಸಮುದಾಯದ ಮೇಲಿದೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲೂ ಜಿ–20 ಹಾಗೂ ಯುವಜನತೆ ವೈ–20ರ ಕುರಿತು ಕಾರ್ಯಕ್ರಮವನ್ನು ಆಯೋಜಿಸಿ, ಯುವಶಕ್ತಿಯ ಮಹತ್ವವನ್ನು ತಿಳಿಸಲಾಗುವುದು’ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ರಾಷ್ಟ್ರದ ಏಕತೆಗಾಗಿ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳಾದರೂ ಇಮೇಲ್ ಮೂಲಕ ತಿಳಿಸಿ. ಇಷ್ಟವಾಗಿದ್ದರೆ ನಿಮ್ಮ ಸ್ಥಳಗಳಿಗೆ ಹೋಗಿ ಅದನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಹಂಚಿಕೊಳ್ಳಿ’ ಎಂದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಧಾರವಾಡ ಮೇಲೆ ಇಟ್ಟ ಭರವಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಂತೃಪ್ತಿ ಇದೆ. ಈ ಯಶಸ್ವಿಯ ಹಿಂದೆ ಅಧಿಕಾರಿಗಳ ಹಾಗೂ ಇತರ ಸಿಬ್ಬಂದಿಗಳ ಪರಿಶ್ರಮ ಅಡಗಿದೆ. ಧಾರವಾಡದ ಜನರೂ ಇದಕ್ಕೆ ಉತ್ತಮ ಸಹಕಾರ ನೀಡಿದರು’ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಮಾತನಾಡಿ, ‘ಅನಾದಿ ಕಾಲದಿಂದಲೂ ಎಲ್ಲರನ್ನೂ ಸೇರಿಸಿಕೊಂಡು ಬೆಳೆಯುವ ಹಾಗೂ ಸೋದರತೆ ಹಾಗೂ ಶಾಂತಿಯನ್ನು ಭಾರತ ಪ್ರತಿಪಾದಿಸುತ್ತಲೇ ಬಂದಿದೆ. ಇದರಿಂದ ವಿಶ್ವ ಕಲ್ಯಾಣ ಕಾರ್ಯಕ್ಕೆ ಭಾರತ ಸದಾ ಮುಂಚೂಣಿಯಲ್ಲಿ ನಿಲ್ಲುತ್ತದೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕ್ರೀಡಾ ಸಚಿವ ನಾರಾಯಣಗೌಡ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕರಾದ ಅಮೃತ ದೇಸಾಯಿ ಹಾಗೂ ಅರವಿಂದ ಬೆಲ್ಲದ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಇದ್ದರು.

ಇನ್‌ಕಿಲಾಬ್ ಬಿಟ್ಟುಬಿಡು

ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ತಮ್ಮ ಮಾತಿಗೂ ಮುನ್ನ ಇಡೀ ಸಭಾಂಗಣದಲ್ಲಿ ‘ಭಾರತ್ ಮಾತಾ ಕೀ... ಜೈ. ವಂದೇ ಮಾತರಂ’ ಘೋಷಣೆಯನ್ನು ಯುವಜನರಿಂದ ಮೊಳಗಿಸಿದರು. ಸಭಾಂಗಣದ ಹೊರಗೂ ಕೇಳುವಂತೆ ಘೋಷಣೆ ಕೂಗುವಂತೆ ಪ್ರೇರೇಪಿಸಿದರು. ಇದರಿಂದ ಉತ್ಸಾಹಗೊಂಡ ಯುವಸಮೂಹ ‘ಇನ್‌ಕಿಲಾಬ್‌ ಜಿಂದಾಬಾದ್’ ಘೋಷಣೆ ಕೂಗಿದರು. ಇದಕ್ಕೆ ಅಸಮಾಧಾನಗೊಂಡ ಅನುರಾಗ್‌ ಸಿಂಗ್ ಠಾಕೂರ್, ‘ಅದನ್ನು ಬಿಟ್ಟುಬಿಡಿ’ ಎಂದು ಹೇಳಿದ ಮಾತು ಆರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT