ಬೆಂಗಳೂರು: ಕರ್ನಾಟಕ ಉರ್ದು ಅಕಾಡೆಮಿ ರೂಪಿಸಿರುವ 30 ದಿನಗಳಲ್ಲಿ ಉರ್ದು ಕಲಿಯುವ ಪರೀಕ್ಷೆಯಲ್ಲಿ ಶೇ 100ರಷ್ಟು ಅಂಕ ಪಡೆದ ನಾಲ್ವರು ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ವೈಯಕ್ತಿಕವಾಗಿ ತಲಾ ₹50 ಸಾವಿರ ಬಹುಮಾನ ನೀಡಿದರು.
ಉರ್ದು ಅಕಾಡೆಮಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ನಂತರ ಮಾತನಾಡಿದ ಅವರು, ಅಕಾಡೆಮಿ ಕಾರ್ಯಕ್ರಮಗಳು ಬೆಂಗಳೂರಿಗೆ ಸೀಮಿತಗೊಳಿಸದೆ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಿಗೂ ವಿಸ್ತರಿಸಬೇಕು ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಕಾಡೆಮಿಗೆ ಸೂಕ್ತ ಅನುದಾನ ನೀಡಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ₹1.50 ಕೋಟಿ ಅನುದಾನ ಒದಗಿಸಿದೆ. ಮುಂದಿನ ವರ್ಷ ₹15 ಕೋಟಿಗೆ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರದ ಆದೇಶದ ಪ್ರಕಾರ ಖಾಸಗಿ ಶಾಲೆಗಳಲ್ಲೂ ಉರ್ದುವನ್ನು ಒಂದು ಭಾಷೆಯಾಗಿ ಕಲಿಸಲು ಶಿಕ್ಷಣ ಸಚಿವರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ಅಕಾಡೆಮಿ ವತಿಯಿಂದ ಬಸವಣ್ಣನವರ ವಚನಗಳೂ ಸೇರಿದಂತೆ ಮಹಾನ್ ಪುರುಷರ ಜೀವನ ಕೃತಿ ಪ್ರಕಟಿಸಬೇಕು. ಹೆಸರಾಂತ ಸಾಹಿತಿಗಳ ಕೃತಿಗಳನ್ನು ಉರ್ದುವಿಗೆ ಭಾಷಾಂತರಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಆಸೀಫ್ ಸೇಟ್, ವಿಧಾನ ಪರಿಷತ್ ಸದಸ್ಯೆ ಬಿಲ್ಕೀಸ್ ಬಾನು, ಆಯೋಗದ ಅಧ್ಯಕ್ಷ ನಿಸಾರ್ ಅಹಮದ್, ಕೆಎಂಡಿಸಿ ಅಧ್ಯಕ್ಷ ಬಿ.ಕೆ. ಅಲ್ತಾಫ್ ಖಾನ್, ಅಕಾಡೆಮಿ ಅಧ್ಯಕ್ಷ ಮೊಹಮದ್ ಅಲಿ ಖಾಜಿ ಉಪಸ್ಥಿತರಿದ್ದರು.