ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ನಾಳೆ ಹಾಜರಿ ಕಡ್ಡಾಯ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಕೀಲರಾದ ವಿನೋದ್ ಕುಮಾರ್ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ಸೋಮವಾರದ ಮಟ್ಟಿಗೆ ಖುದ್ದು ಹಾಜರಿಯಿಂದ ವಿನಾಯಿತಿ ದೊರೆತಿದ್ದು, ಬುಧವಾರ ಕಡ್ಡಾಯವಾಗಿ ಖುದ್ದು ಹಾಜರಾಗುವಂತೆ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಜಂತಕಲ್ ಗಣಿ ಕಂಪೆನಿಗೆ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನೀಡಲು ಶಿಫಾರಸು ಮಾಡಿರುವುದು ಮತ್ತು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ನಿವೇಶನ ಮಂಜೂರು ಮಾಡಿರುವ ಆರೋಪದ ಮೇಲೆ ಕುಮಾರಸ್ವಾಮಿ, ಅನಿತಾ ಮತ್ತು ಜಂತಕಲ್ ಗಣಿ ಕಂಪೆನಿ ಮಾಲೀಕ ವಿನೋದ್ ಗೋಯಲ್ ವಿರುದ್ಧ ವಿನೋದ್‌ಕುಮಾರ್ ಅವರು `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ಆರಂಭಿಸಿದ್ದ ನ್ಯಾಯಾಲಯ ಖುದ್ದು ಹಾಜರಿರುವಂತೆ ಎಲ್ಲ ಆರೋಪಿಗಳಿಗೂ ಸಮನ್ಸ್ ಜಾರಿಮಾಡಿತ್ತು.

ಆಗಸ್ಟ್ 30ರಂದು ಅನಾರೋಗ್ಯದ ಕಾರಣ ನೀಡಿ ಕುಮಾರಸ್ವಾಮಿ ದಂಪತಿ ಖುದ್ದು ಹಾಜರಿಯಿಂದ ವಿನಾಯಿತಿ ಪಡೆದಿದ್ದರು.

ಸೋಮವಾರ ಖುದ್ದು ಹಾಜರಾಗುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ಸೋಮವಾರ ಬೆಳಿಗ್ಗೆ ವಿಚಾರಣೆ ಆರಂಭವಾದಾಗ ವಿನೋದ್ ಗೋಯಲ್ ಮಾತ್ರ ಖುದ್ದು ಹಾಜರಾಗಿ ಜಾಮೀನು ಅರ್ಜಿ ಸಲ್ಲಿಸಿದರು.

`ಈ ಹಿಂದೆಯೇ ಕುಮಾರಸ್ವಾಮಿ ಮತ್ತು ಅನಿತಾ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಲಯದ ವಶಕ್ಕೆ ಬಂದಿದ್ದಾರೆ. ಆದ್ದರಿಂದ ಅವರು ವಿಚಾರಣೆಯಿಂದ ದೂರ ಉಳಿಯಲು ಸಾಧ್ಯವಿಲ್ಲ. ಮಧ್ಯಾಹ್ನ ಅವರು ಹಾಜರಾಗಬೇಕು~ ಎಂದು ಮೌಖಿಕವಾಗಿ ಆದೇಶಿಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್, ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿದರು.

ಮತ್ತೆ ಅರ್ಜಿ: ಮಧ್ಯಾಹ್ನ ಪುನಃ ವಿಚಾರಣೆ ಆರಂಭವಾದಾಗ ಕುಮಾರಸ್ವಾಮಿ ದಂಪತಿಗೆ 15 ದಿನಗಳ ಕಾಲ ಖುದ್ದು ಹಾಜರಿಯಿಂದ ವಿನಾಯಿತಿ ಕೋರಿ ಅವರ ಪರ ವಕೀಲ ಹಸ್ಮತ್ ಪಾಷಾ ಅರ್ಜಿ ಸಲ್ಲಿಸಿದರು.

ಕುಮಾರಸ್ವಾಮಿ ಅವರು ಅತಿಯಾದ ರಕ್ತದೊತ್ತಡ, ತಲೆ ಸುತ್ತುವಿಕೆಯಿಂದ ಬಳಲುತ್ತಿರುವುದು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಖುದ್ದು ಹಾಜರಿಯಿಂದ ವಿನಾಯಿತಿ ನೀಡುವಂತೆ ಅವರು ಕೋರಿದರು.

ಕುಮಾರಸ್ವಾಮಿ ದಂಪತಿಯ ಮನವಿಯನ್ನು ವಿರೋಧಿಸಿದ ವಿನೋದ್ ಕುಮಾರ್ ಪರ ವಕೀಲ ಆರ್.ಎನ್.ಪಾಟೀಲ್, `ಆರೋಪಿಗಳು ಆರೋಗ್ಯವಾಗಿಯೇ ಇದ್ದಾರೆ. ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ವಿನಾಯಿತಿ ಕೋರುತ್ತಿದ್ದಾರೆ. ಅದನ್ನು ನ್ಯಾಯಾಲಯ ಮಾನ್ಯ ಮಾಡಬಾರದು~ ಎಂದು ವಾದಿಸಿದರು.

ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶರು, ಸೋಮವಾರದ ಮಟ್ಟಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದರು.

ಬುಧವಾರದ ವಿಚಾರಣೆಯ ವೇಳೆ ಇಬ್ಬರು ಆರೋಪಿಗಳು ಕಡ್ಡಾಯವಾಗಿ ಖುದ್ದು ಹಾಜರಾಗಬೇಕು ಎಂದು ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT