ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಡಿ ಘಾಟಿ: ನಿರ್ಬಂಧ ತೆರವು ಸದ್ಯಕ್ಕಿಲ್ಲ?

ಐಐಎಸ್‌ಸಿ ತಜ್ಞರ ವರದಿಗೆ ಕಾಯುತ್ತಿರುವ ಲೋಕೋಪಯೋಗಿ ಇಲಾಖೆ
Last Updated 26 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಮತ್ತು ಬೆಂಗಳೂರಿನ ನಡುವಣ ಸಂಪರ್ಕದ ಕೊಂಡಿಯಾಗಿರುವ ಶಿರಾಡಿ ಘಾಟಿ (ರಾಷ್ಟ್ರೀಯ ಹೆದ್ದಾರಿ 75) ಮಾರ್ಗದಲ್ಲಿ ಭೂಕುಸಿತ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಲೋಕೋಪಯೋಗಿ ಇಲಾಖೆಯು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ)ತಜ್ಞರ ವರದಿಯನ್ನು ಕಾಯುತ್ತಿದೆ. ಹೀಗಾಗಿ ಈ ಮಾರ್ಗದಲ್ಲಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಇರುವ ನಿರ್ಬಂಧ ದೀರ್ಘಕಾಲ ಮುಂದುವರಿಯುವ ಸಾಧ್ಯತೆ ಇದೆ.

‘ಶಿರಾಡಿ ಘಾಟಿ ಮಾರ್ಗದಲ್ಲಿ ಭೂಕುಸಿತ ಸಂಭವಿಸಿರುವ 14 ಸ್ಥಳಗಳಿಗೆ ಭೇಟಿ ನೀಡಿರುವ ಬೆಂಗಳೂರಿನ ಐಐಎಸ್‌ಸಿ ಜಿಯೋಟೆಕ್ನಿಕಲ್‌ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಎಲ್‌.ಶಿವಕುಮಾರ್‌ ಬಾಬು ನೇತೃತ್ವದ ತಂಡ, ಭೂಕುಸಿತ ತಡೆಗೆ ಕೈಗೊಳ್ಳಬೇಕಾದ ಶಾಶ್ವತ ಕ್ರಮಗಳ ಕುರಿತು ಅಧ್ಯಯನ ನಡೆಸುತ್ತಿದೆ. ನವೆಂಬರ್‌ 10ರ ಸುಮಾರಿಗೆ ಈ ತಂಡ ವರದಿ ನೀಡಲಿದೆ. ಆ ಬಳಿಕ ಕಾಮಗಾರಿ ಕುರಿತು ನಿರ್ಧರಿಸಲಾಗುವುದು. ಕಾಮಗಾರಿ ಮುಗಿದ ಬಳಿಕವೇ ನಿರ್ಬಂಧ ತೆರವು ಮಾಡುವ ಯೋಚನೆ ಇದೆ’ ಎಂದು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ಮುಖ್ಯ ಎಂಜಿನಿಯರ್‌ ಗಣೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕಾಗಿ ಈ ವರ್ಷ ಜನವರಿಯಿಂದ ಜುಲೈ ಮಧ್ಯದವರೆಗೆ ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಜುಲೈ 15ರಂದು ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ, ಅದೇ ದಿನ ಮತ್ತೆ ಬಂದ್ ಮಾಡಲಾಗಿತ್ತು. ಕೆಲವು ದಿನಗಳ ಬಳಿಕ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಆಗಸ್ಟ್‌ 13ರಂದು ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ ಕಾರಣಕ್ಕೆ ಮತ್ತೆ ಈ ಮಾರ್ಗವನ್ನು ಬಂದ್‌ ಮಾಡಲಾಗಿತ್ತು. ಈಗ ಬಸ್‌ ಸೇರಿದಂತೆ ಪ್ರಯಾಣಿಕ ವಾಹನಗಳ ಸಂಚಾರಕ್ಕಷ್ಟೇ ಅವಕಾಶವಿದೆ.

ಮಂಗಳೂರು– ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶಿರಾಡಿ ಘಾಟಿ (ಎನ್‌ಎಚ್‌ 75) ಮತ್ತು ಸಂಪಾಜೆ ಘಾಟಿ (ಎನ್‌ಎಚ್‌ 234) ಮಾರ್ಗಗಳಲ್ಲಿ ಮಾತ್ರ ಬೃಹತ್‌ ಗಾತ್ರದ ಸರಕು ಸಾಗಣೆ ವಾಹನಗಳು ಸಂಚರಿಸಲು ಅವಕಾಶವಿತ್ತು. ಚಾರ್ಮಾಡಿ ಘಾಟಿಯಲ್ಲಿ ಸಣ್ಣ ವಾಹನಗಳಷ್ಟೇ ಸಂಚರಿಸಬಹುದು. ಸಂಪಾಜೆ ಘಾಟಿ ಮಾರ್ಗ ಸಂಪೂರ್ಣ ಹಾನಿಗೀಡಾಗಿದೆ. ಈಗ ಶಿರಾಡಿಯಲ್ಲೂ ನಿರ್ಬಂಧ ಇರುವುದರಿಂದ ಸರಕು ಸಾಗಣೆ ವಹಿವಾಟಿಗೆ ತೀವ್ರ ಧಕ್ಕೆಯಾಗಿದೆ.

ತರಾತುರಿ ನಿರ್ಧಾರ ಸಾಧ್ಯವಿಲ್ಲ: ‘ಶಿರಾಡಿ ಘಾಟಿಯಲ್ಲಿ ಭೂಕುಸಿತ ಸಂಭವಿಸಿರುವ 14 ಸ್ಥಳಗಳ ಪೈಕಿ ಮೂರು ಕಡೆ ರಸ್ತೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಅಲ್ಲಿ ಮತ್ತೆ ಅವಘಡಗಳು ಸಂಭವಿಸುವ ಅಪಾಯವಿದೆ. ಭೂಕುಸಿತ ತಡೆಗೆ ಕ್ರಮ ಕೈಗೊಳ್ಳದೇ ನಿರ್ಬಂಧ ತೆರವು ಮಾಡಿದರೆ ದೊಡ್ಡ ಪ್ರಮಾಣದ ಸಮಸ್ಯೆ ಸೃಷ್ಟಿಯಾಗಬಹುದು ಎಂಬ ಆತಂಕವಿದೆ. ತಜ್ಞರ ಸಮಿತಿಯ ವರದಿ ಬಂದ ಬಳಿಕವಷ್ಟೇ ನಾವು ಮುಂದಿನ ನಿರ್ಧಾರಕ್ಕೆ ಬರಲು ಸಾಧ್ಯ’ ಎಂದು ಗಣೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT