ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಲ್ಲೇನಿದೆ ಎನ್ನಬೇಡಿ..!

Last Updated 8 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಾಲಯದ ಆನ್‌ಲೈನ್‌ ಆದೇಶಗಳಲ್ಲಿ ಯಾರಿಗಾದರೂ ಸುಲಭವಾಗಿ ದಕ್ಕುವ ವಿವರಗಳು ಯಾರದ್ದಾದರೂ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುತ್ತಿವೆ ಎಂದು ಅನಿಸಿದರೆ, ಅಂತಹವರು ತಮ್ಮ ‘ಗುರುತು ಮರೆಮಾಚು’ವಂತೆ ಕೋರಿ ಪರಿಹಾರ ಪಡೆಯಬಹುದು..! ಇಂಥದೊಂದು ಮಹತ್ವದ ಆದೇಶವನ್ನು ಹೈಕೋರ್ಟ್‌ ನೀಡಿದೆ.

ಅಪಹರಣಕ್ಕೆ ಒಳಗಾಗಿ ಬಲವಂತದ ಮದುವೆಗೆ ಕೊರಳೊಡ್ಡಿದ  ತರುಣಿಯೊಬ್ಬಳು, ‘ಕೋರ್ಟ್‌ನ ಆನ್‌ಲೈನ್‌ ಆದೇಶದಲ್ಲಿ ನನ್ನ ಹೆಸರು ಹಾಗೂ ವಿಳಾಸ ಸಾರ್ವಜನಿಕರಿಗೆ ಲಭ್ಯವಾಗದಂತೆ ನೋಡಿಕೊಳ್ಳಬೇಕು’ ಎಂದು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಪ್ರಕರಣವೇನು?: ತಮಿಳುನಾಡಿನ ತರುಣಿಯೊಬ್ಬಳು ರಾಜ್ಯದಲ್ಲಿ ಅಪಹರಣಕ್ಕೆ ಒಳಗಾಗಿದ್ದಳು. ಅಪಹರಣಕಾರ ಆಕೆಯನ್ನು ಒತ್ತೆಯಾಳಾಗಿ ಇರಿಸಿಕೊಂಡು ಬಲವಂತವಾಗಿ ಮದುವೆಯಾಗಿದ್ದ. ಸ್ಥಳೀಯ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯನ್ನೂ ಮಾಡಿಸಿ ಅದಕ್ಕೆ ಪ್ರಮಾಣ ಪತ್ರ ಪಡೆದಿದ್ದ.  ತದನಂತರ ತರುಣಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು.

‘ಆರೋಪಿಯು ನನ್ನನ್ನು ಅಪಹರಿಸಿ ನನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಕೊಂಡಿದ್ದಾನೆ. ಹಾಗಾಗಿ ಈತ ಮದುವೆಯ ಪ್ರಮಾಣ ಪತ್ರದ ಆಧಾರದಲ್ಲಿ ಯಾವುದೇ ವೈವಾಹಿಕ ಹಕ್ಕಿನ ಪ್ರತಿಪಾದನೆ ಮಾಡದಂತೆ ನಿರ್ಬಂಧಿಸಬೇಕು’ ಎಂದು ಕೋರಿದ್ದಳು. ಇದರನ್ವಯ ಪೊಲೀಸರು ನಗರದ 2ನೇ ಮುಖ್ಯ ಮೆಟ್ರೊಪಾಲಿಟನ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ಮಧ್ಯೆ ತರುಣಿ ಸಿವಿಲ್‌ ನ್ಯಾಯಾಲಯದಲ್ಲೂ ದಾವೆ ದಾಖಲಿಸಿ ‘ನೋಂದಾಣಿಧಿಕಾರಿ ಕಚೇರಿಯಲ್ಲಿ ದಾಖಲಾಗಿರುವ ನಮ್ಮ ಮದುವೆ ಕಾನೂನುಬದ್ಧವಾಗಿಲ್ಲ. ಇದನ್ನು ರದ್ದುಗೊಳಿಸಬೇಕು’ ಎಂದು ಅರಿಕೆ ಮಾಡಿಕೊಂಡಿದ್ದಳು.

ಈ ಮಧ್ಯೆ, ಆರೋಪಿಯಾದ ಆಕೆಯ ಗಂಡ  ‘ನನ್ನ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಬೇಕು’ ಎಂದು ಹೈಕೋರ್ಟ್‌ ಮೆಟ್ಟಿಲೇರಿದ್ದ. ಬಳಿಕ ಆತ ರಾಜಿ ಮಾಡಿಕೊಳ್ಳಲು ಬಯಸಿದ.

ಇಬ್ಬರ ಒಪ್ಪಿಗೆ ಅನುಸಾರ ಪ್ರಕರಣ ಅಂತ್ಯ ಕಂಡಿತು. ಆಕೆ ಮತ್ತೊಂದು ಮದುವೆಯಾಗಿ ಸಂಸಾರ ಶುರು ಮಾಡಿದಳು. ಆದರೆ, ತಾನು ಅಪಹರಣಕ್ಕೆ ಒಳಗಾಗಿ ಮದುವೆಯಾದ ಕಥೆ ಕೋರ್ಟ್‌ನ ಆನ್‌ಲೈನ್‌ ಆದೇಶದಲ್ಲಿ ಇದ್ದುದ್ದನ್ನು ಕಂಡು ದಿಗಿಲುಗೊಂಡಳು. 

ಈ ಕುರಿತು ಹೈಕೋರ್ಟ್‌ ಮೆಟ್ಟಿಲೇರಿದ ತರುಣಿಯ ತಂದೆ,  ‘ಈ ಪ್ರಕರಣದ ವಿವರ ಹೈಕೋರ್ಟ್‌ನ ಆನ್‌ಲೈನ್‌ ಆದೇಶದಲ್ಲಿ ಸಾದ್ಯಂತವಾಗಿ ಲಭ್ಯವಿದೆ. ಯಾರಾದರೂ ಅಂತರ್ಜಾಲದ ಗೂಗಲ್‌ ಮತ್ತು ಯಾಹೂ ಸರ್ಚ್‌ನಲ್ಲಿ ನನ್ನಮಗಳ ಹೆಸರನ್ನು ಟೈಪ್‌ ಮಾಡಿದರೆ ಆಕೆ ಅಪಹರಣಕ್ಕೆ ಒಳಗಾದ ಎಲ್ಲ  ವಿವರ ದಕ್ಕುತ್ತದೆ. ಇದು ಆಕೆಯ ಭವಿಷ್ಯಕ್ಕೆ ಮತ್ತು ಸಂಸಾರಕ್ಕೆ ಧಕ್ಕೆ ಉಂಟು ಮಾಡಬಹುದು’ ಎಂಬ ಭೀತಿ ವ್ಯಕ್ತಪಡಿಸಿದ್ದರು.

‘ಕೋರ್ಟ್‌ ಆದೇಶದಲ್ಲಿ ಅವಳ ಹೆಸರು ಮತ್ತು ವಿಳಾಸ ಸಾರ್ವಜನಿಕರ ಅವಗಾಹನೆಗೆ ಲಭ್ಯವಾಗದಂತೆ ನೋಡಿಕೊಳ್ಳಲು ಹೈಕೋರ್ಟ್ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನಿರ್ದೇಶಿಸಬೇಕು’ ಎಂದೂ ಕೋರಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಅರ್ಜಿದಾರರ ಕೋರಿಕೆ ಕಾನೂನು ಬದ್ಧವಾಗಿದೆ’ ಎಂದು ಹೇಳಿದೆ.

***

ಗುರುತು ಮರೆಮಾಚುವ ಹಕ್ಕು
ಅತ್ಯಾಚಾರಕ್ಕೆ ಈಡಾದವರು, ಅಪಹರಣಕ್ಕೆ ಒಳಗಾದವರು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ವಿವಾಹ ವಿಚ್ಛೇದನ ಪಡೆದವರು, ಇಲ್ಲವೇ ಪ್ರತಿಷ್ಠಿತ ಕಂಪೆನಿಗಳಲ್ಲಿ ಉನ್ನತ ಹುದ್ದೆಯಲ್ಲಿ ದುಡಿಯುವವರು ಸೂಕ್ಷ್ಮ ಪ್ರಕರಣಗಳಲ್ಲಿ ಸಿಲುಕಿ, ಕೋರ್ಟ್‌ ಆದೇಶಗಳ ಆನ್‌ಲೈನ್‌ನಲ್ಲಿ ಅವರ ವಿವರ  ಲಭ್ಯವಾಗುವಂತಿದ್ದರೆ ಅಂತಹವರು ತಮ್ಮ ಗುರುತು ಮರೆಮಾಚುವಿಕೆ ಹಕ್ಕನ್ನು ಪ್ರತಿಪಾದಿಸಬಹುದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ವಿದೇಶಗಳಲ್ಲಿ ಇದನ್ನು ‘ಗುರುತು ಮರೆಮಾಚುವ ಹಕ್ಕು’ ಅಥವಾ ‘right to be forgotten’ ಎಂದು ಕರೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT