ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೆಶಾವರ| ಆತ್ಮಾಹುತಿ ದಾಳಿ, 40 ಸಾವು

ಪಾಕ್‌ನ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಕೃತ್ಯ * 200ಕ್ಕೂ ಹೆಚ್ಚು ಜನರಿಗೆ ಗಾಯ
Published 30 ಜುಲೈ 2023, 16:31 IST
Last Updated 30 ಜುಲೈ 2023, 16:31 IST
ಅಕ್ಷರ ಗಾತ್ರ

ಪೆಶಾವರ: ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಾನುವಾರ ರಾಜಕೀಯ ಪಕ್ಷವೊಂದರ ಸಭೆಯ ವೇಳೆ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದು, ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ.

ಇಲ್ಲಿನ ಬಜೌರ್ ಖರ್‌ನಲ್ಲಿ ಜಮೈತ್‌ ಉಲೆಮಾ ಇ ಇಸ್ಲಾಂ ಫಜ್ಲ್ (ಜೆಯುಐ–ಎಫ್‌) ಪಕ್ಷದ ಸಭೆಯಲ್ಲಿ ಸ್ಫೋಟ ಸಂಭವಿಸಿತು. 200ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭದ್ರತಾ ಸಿಬ್ಬಂದಿ ಸ್ಥಳವನ್ನು ಸುತ್ತುವರಿದಿದ್ದಾರೆ. ಸ್ಫೋಟದ ಸ್ವರೂಪವನ್ನು ಪರಿಶೀಲಿಸಲಾಗುತ್ತದೆ. ಇದೊಂದು ಆತ್ಮಾಹುತಿ ಸ್ಫೋಟ ಕೃತ್ಯ ಎಂದು ಹೇಳಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಯಾವುದೇ ಸಂಘಟನೆಯು ಇದುವರೆಗೂ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ಮಲಕ್ಕಾಡ್‌ ವಲಯದ ಡಿಐಜಿ ಮೆಹಮೂದ್‌ ಸಟ್ಟಿ ತಿಳಿಸಿದರು.  

‘ಸ್ಫೋಟ ಸಂಭವಿಸಿದಾಗ ಸಭೆಯಲ್ಲಿ ಸುಮಾರು 500 ಜನರು ಸೇರಿದ್ದರು. ಸ್ಥಳಕ್ಕೆ ಐದು ಆಂಬುಲೆನ್ಸ್‌ಗಳು ಧಾವಿಸಿವೆ’ ಎಂದು ರಕ್ಷಣಾ ಸಹಾಯವಾಣಿ 1122ರ ವಕ್ತಾರ ಬಿಲಾಲ್‌ ಫೈಜಿ ಅವರು ತಿಳಿಸಿದ್ದಾರೆ.

ಜೆಯುಐ–ಎಫ್‌ ಮುಖ್ಯಸ್ಥ ಮೌಲಾನಾ ಫಜ್ಲುರ್‌ ರೆಹಮಾನ್ ಅವರು, ಪ್ರಧಾನಿ ಶೆಹಬಾಜ್‌ ಷರೀಫ್‌ ಮತ್ತು ಉಸ್ತುವಾರಿ ಪ್ರಧಾನಿ ಅಜಂ ಖಾನ್ ಅವರಿಗೆ ಕೃತ್ಯದ ಸಮಗ್ರ ತನಿಖೆಗೆ ಆಗ್ರಹಪಡಿಸಿದ್ದಾರೆ.

ಪಕ್ಷದ ಕಾರ್ಯಕರ್ತರು ನೊಂದವರ ನೆರವಿಗಾಗಿ ಆಸ್ಪತ್ರೆಗೆ ಧಾವಿಸಬೇಕು ಹಾಗೂ ಶಾಂತಿ ಕಾಯ್ದುಕೊಳ್ಳಬೇಕು. ಸರ್ಕಾರ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೃತ್ಯವನ್ನು ಖಂಡಿಸಿರುವ ಪಕ್ಷದ ಇನ್ನೊಬ್ಬ ಮುಖಂಡ ಹಫೀಜ್‌ ಹಮ್‌ದುಲ್ಹಾ ಅವರು, ‘ಇದು ಜಿಹಾದ್ ಅಲ್ಲ, ಭಯೋತ್ಪಾದನೆಯ ಕೃತ್ಯ ಎಂದಷ್ಟೇ ಇದರ ಹಿಂದಿರುವವರಿಗೆ ಹೇಳಲು ಬಯಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಪಾಕಿಸ್ತಾನದ ಬಜೌರ್ ಜಿಲ್ಲೆಯಲ್ಲಿ ರಾಜಕೀಯ ಪಕ್ಷದ ಸಭೆ ವೇಳೆ ಸ್ಫೋಟ ಸಂಭವಿಸಿದ ಸ್ಥಳ -ಪಿಟಿಐ ಚಿತ್ರ
ಪಾಕಿಸ್ತಾನದ ಬಜೌರ್ ಜಿಲ್ಲೆಯಲ್ಲಿ ರಾಜಕೀಯ ಪಕ್ಷದ ಸಭೆ ವೇಳೆ ಸ್ಫೋಟ ಸಂಭವಿಸಿದ ಸ್ಥಳ -ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT