ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ: ಶಾಲೆಗೆ ಹೋಗಿದ್ದ 80 ಬಾಲಕಿಯರಿಗೆ ವಿಷಪ್ರಾಷನ

ಉತ್ತರ ಅಫ್ಗಾನಿಸ್ತಾನದ ಸಾರ್–ಎ–ಪಾಲ್ ಎಂಬ ಪ್ರದೇಶದ ಎರಡು ಶಾಲೆಗಳಲ್ಲಿ ಈ ದುರ್ಘಟನೆ ನಡೆದಿದೆ.
Published 5 ಜೂನ್ 2023, 12:57 IST
Last Updated 5 ಜೂನ್ 2023, 12:57 IST
ಅಕ್ಷರ ಗಾತ್ರ

ಕಾಬೂಲ್: ದುಷ್ಕರ್ಮಿಗಳು ಸುಮಾರು 80 ವಿದ್ಯಾರ್ಥಿನಿಯರಿಗೆ ದುರುದ್ದೇಶಪೂರಿತವಾಗಿ ವಿಷಪ್ರಾಷನ ಮಾಡಿಸಿರುವ ಘಟನೆ ಅಫ್ಗಾನಿಸ್ತಾನದ ಉತ್ತರ ಭಾಗದ ಎರಡು ಪ್ರತ್ಯೇಕ ಶಾಲೆಗಳಲ್ಲಿ ನಡೆದಿದೆ.

ಆ ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರನ್ನು ಹೊರತುಪಡಿಸಿ ಉಳಿದ ಬಹುತೇಕರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಅಫ್ಗಾನಿಸ್ತಾನದ ಸಾರ್–ಎ–ಪಾಲ್ ಎಂಬ ಪ್ರದೇಶದ ಎರಡು ಶಾಲೆಗಳಲ್ಲಿ ಈ ದುರ್ಘಟನೆ ನಡೆದಿದೆ. ಒಂದು ಶಾಲೆಯಲ್ಲಿ 63 ಬಾಲಕಿಯರಿಗೆ, ಇನ್ನೊಂದು ಶಾಲೆಯಲ್ಲಿ 17 ಬಾಲಕಿಯರಿಗೆ ಯಾವುದೋ ರೂಪದಲ್ಲಿ ವಿಷವುಣಿಸಲಾಗಿದೆ. ಇವರು 1 ರಿಂದ 6ನೇ ತರಗತಿಯ ಹೆಣ್ಣುಮಕ್ಕಳಾಗಿದ್ದಾರೆ ಎಂದು ತಿಳಿಸಿದ್ದಾರೆ.

2021 ರಲ್ಲಿ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಜಾರಿಗೆ ಬಂದ ನಂತರ ಈ ರೀತಿ ಶಾಲಾ ಬಾಲಕಿಯರ ಮೇಲೆ ನಡೆದ ಮೊದಲ ದಾಳಿ ಇದಾಗಿದೆ. ತಾಲಿಬಾನ್ ಹೆಣ್ಣು ಮಕ್ಕಳ ಶಿಕ್ಷಣ, ಉದ್ಯೋಗಕ್ಕೆ ನಿಷೇಧ ಹೇರಿದೆ. ಕೇವಲ ಪ್ರಾಥಮಿಕ ಶಾಲೆಗೆ (1ರಿಂದ 6ನೇ ತರಗತಿ) ಮಾತ್ರ ಅವಕಾಶ ಇದೆ.

ವಿಷಪ್ರಾಷನಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲವಾದರೂ ಬಾಲಕಿಯರನ್ನು ಹತ್ಯೆ ಮಾಡಲೆಂದೇ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ವಿಷಾನಿಲ ಅಥವಾ ಬಲವಂತದ ವಿಷಪ್ರಾಷನ ಮಾಡಿಸಿರುವ ಶಂಕೆ ಇದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಹೆರಾತ್ ಪ್ರಾಂತ್ಯದಲ್ಲಿ 2015ರಲ್ಲಿ 600 ಶಾಲಾ ಬಾಲಕಿಯರಿಗೆ ವಿಷಪ್ರಾಷನ ಮಾಡಿಸಲಾಗಿತ್ತು. ಆ ಘಟನೆಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲವಾಗಿದ್ದರೂ ತಾಲಿಬಾನಿಗಳ ಮೇಲೆ ಆರೋಪ ಕೇಳಿ ಬಂದಿತ್ತು.

ಅಲ್ಲದೇ ಈಚೆಗೆ ಕಳೆದ ಹಲವಾರು ದಿನಗಳಿಂದ ಅಫ್ಗನ್ ಪಕ್ಕದ ಇರಾನ್‌ನಲ್ಲಿ ಶಾಲಾ ಬಾಲಕಿಯರಿಗೆ ವಿಷವುಣಿಸುವ ಕುಕೃತ್ಯಗಳು ನಡೆಯುತ್ತಿರುವುದು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT