ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

G20 summit: ಚೀನಾ ಅಧ್ಯಕ್ಷ ಷಿ ಗೈರಿಗೆ ಅಮೆರಿಕ ಅಧ್ಯಕ್ಷ ಬೈಡನ್‌ ಬೇಸರ

Published 4 ಸೆಪ್ಟೆಂಬರ್ 2023, 11:08 IST
Last Updated 4 ಸೆಪ್ಟೆಂಬರ್ 2023, 11:08 IST
ಅಕ್ಷರ ಗಾತ್ರ

ವಾಷಿಂಗ್ಟನ್: ದೆಹಲಿಯಲ್ಲಿ ನಡೆಯಲಿರುವ ಜಿ20 ಸಮಾವೇಶದಲ್ಲಿ ಚೀನಾದ ಅಧ್ಯಕ್ಷ ಷಿ ಜಿಂಗ್‌ಪಿಂಗ್ ಗೈರಾಗಲು ಯೋಜಿಸುತ್ತಿರುವುದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನನಗೆ ಬೇಸರವಾಗಿದೆ. ಆದರೆ ನಾನು ಅವರನ್ನು ನೋಡಿಯೇ ಬರುತ್ತೇನೆ’ ಎಂದು ಷಿ ಹೇಳಿದ್ದಾರೆ. ಆದರೆ ಚೀನಾ ಅಧ್ಯಕ್ಷರನ್ನು ಜೋ ಬೈಡನ್ ಎಲ್ಲಿ ಭೇಟಿ ಮಾಡಲಿದ್ದಾರೆ ಎಂಬ ಅಂಶವನ್ನು ಅವರು ಹೇಳಿಲ್ಲ.

ಒಂದೊಮ್ಮೆ ಷಿ ದೆಹಲಿಗೆ ಬಾರದಿದ್ದರೆ ನವೆಂಬರ್‌ನಲ್ಲಿ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ನಡೆಯಲಿರುವ ಎಪಿಇಸಿ ಸಭೆಯಲ್ಲಿ ಈ ಇಬ್ಬರೂ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿಂದ ಭೇಟಿಯಾಗುವ ಸಾದ್ಯತೆ ಹೆಚ್ಚು ಎಂದು ಹೇಳಲಾಗಿದೆ.

ಚೀನಾ ಹಾಗೂ ಭಾರತ ನಡುವೆ ಉದ್ಭವಿಸಿರುವ ಉದ್ವಿಗ್ನಿತೆಯ ಸಂದರ್ಭದಲ್ಲೇ ದೆಹಲಿಯಲ್ಲಿ ಆಯೋಜನೆಗೊಂಡಿರುವ ಜಿ20 ಶೃಂಗಸಭೆಯಲ್ಲಿ ಷಿ ಪಾಲ್ಗೊಳ್ಳುತ್ತಿಲ್ಲ. ಅವರ ಬದಲು ಪ್ರಧಾನಿ ಲಿ ಕಿಯಾಂಗ್‌ ಅವರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ. 

ಪ್ರಧಾನಿ ಕಿಯಾಂಗ್ ಅವರ ಭೇಟಿ ಕುರಿತು ಚೀನಾದ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ.

ನವೆಂಬರ್‌ನಲ್ಲಿ ಇಂಡೊನೇಷ್ಯಾದ ಬಾಲಿಯಲ್ಲಿ ನಡೆದಿದ್ದ ಜಿ20 ಸಭೆಯಲ್ಲಿ ಬೈಡನ್ ಹಾಗೂ ಷಿ ಅವರ ಭೇಟಿಯಾಗಿತ್ತು. ಆದರೆ ಚೀನಾದ ಬೇಹುಗಾರಿಕಾ ಬಲೂನೊಂದು ಅಮೆರಿಕ ಮೇಲೆ ಹಾರಾಟ ನಡೆಸಿದ ಸುದ್ದಿಯ ನಂತರ ಇಬ್ಬರ ನಡುವಿನ ಮಾತುಕತೆ ಮುಂದಿನ ಹಂತಕ್ಕೆ ಹೋಗಿರಲಿಲ್ಲ. ತೈವಾನ್‌ ವಿಷಯದಲ್ಲಿ ಅಮೆರಿಕದ ಸಂಸದರ ಭೇಟಿ ಹಾಗೂ ತೈವಾನ್‌ ಅಧ್ಯಕ್ಷರಿಂದ ಅಮೆರಿಕ ಭೇಟಿಯಿಂದಾಗಿ ಉಭಯ ರಾಷ್ಟ್ರಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. 

ಕೆಲ ತಿಂಗಳ ಹಿಂದೆ ಅಮೆರಿಕದ ಅಧಿಕಾರಿಗಳು ಚೀನಾ ಭೇಟಿ ಕೈಗೊಂಡು ಎರಡೂ ರಾಷ್ಟ್ರಗಳ ನಡುವೆ ಬಾಂಧವ್ಯ ವೃದ್ಧಿಗೆ ಪ್ರಯತ್ನ ನಡೆಸಿದ್ದರು.

ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಅವರ ಆಹ್ವಾನದ ಮೇರೆಗೆ ಸೆ. 5ರಿಂದ 8ರವರೆಗೆ ನಡೆಯಲಿರುವ ಚೀನಾ–ಆಸಿಯಾನ್ 26ನೇ ಸಭೆಯಲ್ಲಿ ಲಿ ಪಾಲ್ಗೊಳ್ಳುತ್ತಿದ್ದಾರೆ.

ಉಕ್ರೇನ್‌ನೊಂದಿಗಿನ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಗೈರು ಹಾಜರಾತಿ ಕುರಿತು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ. ‌

ಅಮೆರಿಕ ಅಧ್ಯಕ್ಷ ಜೋ ಬೈಡನ್, ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರಾನ್, ಆಸ್ಟ್ರೇಲಿಯಾ ಪ್ರಧಾನಿ ಆಂಥೊಣಿ ಆಲ್ಬನೆಸ್‌, ಜರ್ಮನ್ ಚಾನ್ಸಲರ್‌ ಒಲಾಫ್‌ ಸ್ಕೋಲ್ಜ್‌, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಜಪಾನ್‌ನ ಪ್ರಧಾನಿ ಫ್ಯುಮಿಯೊ ಕಿಷಿದಾ ಹಾಗೂ ಬ್ರಜಿಲ್ ಅಧ್ಯಕ್ಷ ಲ್ಯೂಜ್‌ ಇನಾಸಿಯೊ ಲುಲಾ ಡಿಸಿಲ್ವಾ ಹಾಗೂ ಇನ್ನಿತರ ನಾಯಕರು ಜಿ20 ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಿ20 ಸಮಾವೇಶದಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರಜಿಲ್, ಕೆನಾಡಾ, ಚೀನಾ, ಫ್ರಾನ್ಸ್‌, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಹಾಗೂ ಐರೋಪ್ಯ ಒಕ್ಕೂಟಗಳು ಪಾಲ್ಗೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT