ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾನು ಜಾದೂಗಾರನಲ್ಲ, ನಿಮ್ಮಲ್ಲಿ ನಾನೂ ಒಬ್ಬ:ದಿಸ್ಸಾನಾಯಕೆ

ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ದೇಶದಲ್ಲಿ ‘ನವಯುಗ’ ಆರಂಭ: ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ದಿಸ್ಸಾನಾಯಕೆ ಅಭಿಮತ
Published : 23 ಸೆಪ್ಟೆಂಬರ್ 2024, 14:20 IST
Last Updated : 23 ಸೆಪ್ಟೆಂಬರ್ 2024, 14:20 IST
ಫಾಲೋ ಮಾಡಿ
Comments

ಕೊಲಂಬೊ: ಶ್ರೀಲಂಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅನುರಾ ಕುಮಾರಾ ದಿಸ್ಸಾನಾಯಕೆ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದು ‘ನವಯುಗದ ಆರಂಭವಿದು’ ಎಂದು ಅವರು ಘೋಷಿಸಿದ್ದಾರೆ.

ಶ್ರೀಲಂಕಾದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕುಟುಂಬ ರಾಜಕಾರಣಕ್ಕೆ ಹೊರತಾದ ಎಡಪಂಥೀಯ ವಿಚಾರಧಾರೆಯ ನಾಯಕರೊಬ್ಬರು ಅಧ್ಯಕ್ಷರಾಗಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರು ದಿಸ್ಸಾನಾಯಕೆ ಅವರಿಗೆ ಪ್ರಮಾಣವಚನ ಬೋಧಿಸಿದರು. ಪೀಪಲ್ಸ್‌ ಲಿಬರೇಷನ್‌ ಫ್ರಂಟ್‌ (ಜೆವಿಪಿ) ಪಕ್ಷದ ನಾಯಕರಾದ ದಿಸ್ಸಾನಾಯಕೆ ಅವರನ್ನು ‘ನ್ಯಾಷನಲ್ಸ್‌ ಪೀಪಲ್ಸ್‌ ಪವರ್‌’ ಮೈತ್ರಿಕೂಟವು ತನ್ನ ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿಸಿತ್ತು.

‘ನಾನು ಜಾದೂಗಾರನಲ್ಲ. ನನಗೆ ಹಲವು ವಿಷಯಗಳು ತಿಳಿದಿಲ್ಲ ಹಾಗೂ ನನಗೆ ಮಿತಿಗಳೂ ಇವೆ. ಆದರೆ, ಪ್ರಜಾಪ್ರಭುತ್ವವನ್ನು ಕಾಪಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ದೇಶವನ್ನು ಆರ್ಥಿಕ ಹಿಂಜರಿತದಿಂದ ಮೇಲೆತ್ತಲು ಸಾಮೂಹಿಕ ಹೊಣೆಗಾರಿಕೆಯ ಅಗತ್ಯವಿದೆ. ನಾನೂ ಈ ಹೊಣೆಗಾರಿಕೆಯ ಭಾಗವಾಗಿರುತ್ತೇನೆ’ ಎಂದು ಅಧ್ಯಕ್ಷ ದಿಸ್ಸಾನಾಯಕೆ ಹೇಳಿದರು.

‘ರಾಜಕಾರಣಿಗಳಲ್ಲಿ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಈ ನಂಬಿಕೆಯನ್ನು ಪುನಃಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಜೊತೆಗೆ, ದೇಶವು ಒಬ್ಬಂಟಿಯಾಗಿ ಇರುವುದಕ್ಕೆ ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಸಹಕಾರವು ಅಗತ್ಯವಾಗಿದೆ’ ಎಂದರು.

ಪ್ರಧಾನಿ ರಾಜೀನಾಮೆ:

ಪ್ರಧಾನಿ ದಿನೇಶ್‌ ಗುಣವರ್ಧನೆ ಅವರು ತಮ್ಮ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷೀಯ ಚುನಾವಣೆ ಬಳಿಕ ಅಧಿಕಾರ ಹಸ್ತಾಂತರ ಮಾಡುವ ಭಾಗವಾಗಿ ದಿನೇಶ್‌ ರಾಜೀನಾಮೆ ನೀಡಿದ್ದಾರೆ. 2022ರಿಂದ ದಿನೇಶ್‌ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಧ್ಯಕ್ಷ ದಿಸ್ಸಾನಾಯಕೆ ಅವರು ಈಗ ಹೊಸ ಸಂಪುಟವನ್ನು ರಚಿಸಬೇಕಿದೆ.

ದಿಸ್ಸಾನಾಯಕೆ ಅವರಿಗೆ ಅಭಿನಂದನೆಗಳು. ನೆರೆರಾಷ್ಟ್ರಗಳೇ ಪ್ರಥಮ ಆದ್ಯತೆ ಎನ್ನುವ ನಮ್ಮ ‘ಪ್ರಥಮ ನೀತಿ’ಯಲ್ಲಿ ಶ್ರೀಲಂಕಾಗೆ ವಿಶೇಷ ಸ್ಥಾನವಿದೆ. ನಮ್ಮ ಜನರ ನಮ್ಮ ಪ್ರದೇಶಗಳ ಹಿತಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡುವ ಕುರಿತು ಎದುರು ನೋಡುತ್ತಿದ್ದೇನೆ.
ನರೇಂದ್ರ ಮೋದಿ, ಭಾರತದ ಪ್ರಧಾನಿ
ಪ್ರಧಾನಿ ಮೋದಿ ಅವರೇ ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗೂ ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಎರಡು ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುವ ಕುರಿತು ನಿಮ್ಮಷ್ಟೇ ಬದ್ಧತೆಯುನ್ನು ನಾನೂ ಹೊಂದಿದ್ದೇನೆ. ನಮ್ಮ ದೇಶದ ನಮ್ಮ ಜನರ ಅಭ್ಯುದಯಕ್ಕೆ ಎರಡೂ ದೇಶಗಳು ಒಟ್ಟುಗೂಡಿ ಕೆಲಸ ಮಾಡಬೇಕಿದೆ.
ಅನುರಾ ಕುಮಾರಾ ದಿಸ್ಸಾನಾಯಕೆ, ಶ್ರೀಲಂಕಾ ಅಧ್ಯಕ್ಷ
ನಮ್ಮ ಸಾಂಪ್ರದಾಯಿಕವಾದ ಸ್ನೇಹವನ್ನು ಮುಂದುವರೆಸಿ ಪರಸ್ಪರರ ರಾಜಕೀಯ ನಂಬಿಕೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಎರಡೂ ದೇಶಗಳು ಕೆಲಸ ಮಾಡಲಿವೆ ಎಂಬ ಭರವಸೆ ಇದೆ.
ಷಿ ಜಿಂಗ್‌ಪಿನ್‌, ಚೀನಾ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT