ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: 56 ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ

Published : 29 ಸೆಪ್ಟೆಂಬರ್ 2023, 9:23 IST
Last Updated : 29 ಸೆಪ್ಟೆಂಬರ್ 2023, 12:59 IST
ಫಾಲೋ ಮಾಡಿ
Comments

ಕರಾಚಿ/ ಪೆಶಾವರ (ಪಾಕಿಸ್ತಾನ): ಪಾಕಿಸ್ತಾನದ ಬಲೂಚಿಸ್ತಾನ ಮತ್ತು ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶುಕ್ರವಾರ ನಡೆದ ಎರಡು ಪ್ರತ್ಯೇಕ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ 56 ಮಂದಿ ಮೃತಪಟ್ಟಿದ್ದು,  62ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬಲೂಚಿಸ್ತಾನ ಪ್ರಾಂತ್ಯದ ಮಸೀದಿ ಬಳಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಕನಿಷ್ಠ 52 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.

ಪ್ರವಾದಿ ಮುಹಮ್ಮದ್‌ ಅವರ ಜನ್ಮದಿನದ ಪ್ರಯುಕ್ತ ಬಲೂಚಿಸ್ತಾನ ಪ್ರಾಂತ್ಯದ ಮಸ್ತುಂಗ್‌ ಜಿಲ್ಲೆಯ ಅಲ್‌ ಫಲಾಹ್‌ ರಸ್ತೆಯ ಮದೀನಾ ಮಸೀದಿಯಲ್ಲಿ ಈದ್‌ ಮಿಲಾದ್‌ ಆಚರಿಸುತ್ತಿದ್ದಾಗ ದಾಳಿ ನಡೆದಿದೆ. ಈ ಕಾರ್ಯಕ್ರಮದ ಭದ್ರತೆಗೆ ನಿಯೋಜನೆಗೊಂಡಿದ್ದ ಮಸ್ತುಂಗ್‌ನ ಡಿಎಸ್‌ಪಿ ಸಾವಿಗೀಡಾಗಿದ್ದಾರೆ. ಡಿಎಸ್‌ಪಿ ಅವರ ಕಾರಿನ ಪಕ್ಕದಲ್ಲೇ ದಾಳಿ ನಡೆದಿದೆ ಎಂದು ನಗರ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಮೊಹಮ್ಮದ್‌ ಜಾವೇದ್‌ ಲೆಹ್ರಿ ಹೇಳಿದ್ದಾರೆ.

ಇದುವರೆಗೆ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಅ‌ಫ್ಗಾನಿಸ್ತಾನ ಮತ್ತು ಇರಾನ್‌ ಗಡಿಯಲ್ಲಿರುವ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಐಎಸ್‌, ತೆಹ್ರಿಕ್‌–ಇ– ತಾಲಿಬಾನ್‌ ಪಾಕಿಸ್ತಾನ ಸೇರಿದಂತೆ ವಿವಿಧ ಉಗ್ರಗಾಮಿ ಸಂಘಟನೆಗಳು ಪದೇ ಪದೇ ದಾಳಿ ನಡೆಸುತ್ತಿವೆ.

ತೆಹ್ರಿಕ್‌–ಎ– ತಾಲಿಬಾನ್ ಪಾಕಿಸ್ತಾನ್‌ ಸಂಘಟನೆ ಸಹ ತಾನು ದಾಳಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. 'ಇಂಥ ದಾಳಿಗಳು ನಮ್ಮ ನೀತಿಗಳಿಗೆ ವಿರುದ್ಧವಾಗಿವೆ‘ ಎಂದು ಅದು ಹೇಳಿದೆ.

ಬಲೂಚಿಸ್ತಾನದ ಮಾಹಿತಿ ಸಚಿವ ಜಾನ್ ಅಚಕ್‌ಝೈ ಅವರು, ‘ಶತ್ರುಗಳು ಬಲೂಚಿಸ್ತಾನದಲ್ಲಿ ಧಾರ್ಮಿಕ ಸಹಿಷ್ಣುತೆ ಮತ್ತು ಶಾಂತಿಯನ್ನು ನಾಶ ಮಾಡಲು ಹವಣಿಸುತ್ತಿದ್ದಾರೆ. ಹೀಗಾಗಿಯೇ ಇಂತಹ ದುಷ್ಕೃತ್ಯದಲ್ಲಿ ತೊಡಗಿದ್ದಾರೆ. ರಕ್ಷಣಾ ತಂಡಗಳನ್ನು ಮಸ್ತುಂಗ್‌ಗೆ ಕಳುಹಿಸಲಾಗಿದೆ. ತೀವ್ರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಕ್ವೆಟ್ಟಾಕ್ಕೆ ಕಳುಹಿಸಲಾಗಿದೆ’ ಎಂದು ಹೇಳಿದರು.

ಬಲೂಚಿಸ್ತಾನ ಪ್ರಾಂತ್ಯದಲ್ಲಿ ದಾಳಿ ನಡೆದ ಸ್ವಲ್ಪ ಹೊತ್ತಿನಲ್ಲೇ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ‌ ಹಂಗು ಜಿಲ್ಲೆಯ ದೋಬಾ ಪೊಲೀಸ್‌ ಠಾಣೆ ಬಳಿಯ ಮಸೀದಿ ಬಳಿ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ. 12 ಮಂದಿಗೆ ಗಾಯಗಳಾಗಿವೆ. ದಾಳಿ ನಡೆದಾಗ, ಮಸೀದಿಯಲ್ಲಿ 30ರಿಂದ 40 ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಐವರು ಭಯೋತ್ಪಾದಕರು ದಾವೋಬಾ ಪೊಲೀಸ್‌ ಠಾಣೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿ ವೇಳೆ ಒಬ್ಬ ಭಯೋತ್ಪಾದಕ ಸಾವಿಗೀಡಾಗಿದ್ದಾನೆ. ಮತ್ತೊಬ್ಬ ಮಸೀದಿ ಬಳಿ ತನ್ನನ್ನು ತಾನೇ ಸ್ಫೋಟಿಸಿಕೊಂಡ. ಇದರಿಂದಾಗಿ ಮಸೀದಿಯ ಮೇಲ್ಚಾವಣಿ ಕುಸಿಯಿತು. ಉಳಿದ ಮೂವರು ಪರಾರಿಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ವಿವಿಧ ರಾಜಕೀಯ ಪಕ್ಷಗಳು ದಾಳಿಯನ್ನು ಖಂಡಿಸಿವೆ.  ಮಸ್ತುಂಗ್‌ನಲ್ಲಿ ಉಗ್ರರು ಹಲವು ವರ್ಷಗಳಿಂದ ಪದೇ ಪದೇ ದಾಳಿ ನಡೆಸುತ್ತಿದ್ದಾರೆ. ಕಳೆದ 15 ದಿನಗಳ ಹಿಂದೆಯೂ ದಾಳಿ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT