ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ಅಜರ್‌ ಮಸೂದ್‌ ವಿಚಾರದಲ್ಲಿ ಭಾರತದ ಯತ್ನಕ್ಕೆ ತಡೆ: ಚೀನಾ ಸಮರ್ಥನೆ

ಅಜರ್‌ ಮಸೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಮನವಿ ಮಾಡಿದ್ದ ಭಾರತ
Last Updated 29 ಸೆಪ್ಟೆಂಬರ್ 2018, 12:19 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ಪಾಕಿಸ್ತಾನದ ಜೈಶ್‌–ಎ– ಮೊಹಮ್ಮದ್‌ (ಜೆಇಎಂ) ಸಂಘಟನೆಯ ಉಗ್ರ ಅಜರ್‌ ಮಸೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕು ಎಂಬ ಭಾರತದ ಯತ್ನಕ್ಕೆ ತಡೆಯೊಡ್ಡಿದ್ದನ್ನು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಸಮರ್ಥಿಸಿಕೊಂಡಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಈ ಕುರಿತು ಮಾಡಿರುವ ಮನವಿಯನ್ನು ಚೀನಾ ಪುರಸ್ಕರಿಸಿಲ್ಲ. ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವಾದ ಚೀನಾ ವಿಟೊ ಅಧಿಕಾರ ಹೊಂದಿದ್ದು, ಭಾರತದ ಈ ಪ್ರಸ್ತಾವಕ್ಕೆ ಮೊದಲಿನಿಂದಲೂ ತಡೆಯೊಡ್ಡುತ್ತಿದೆ. ಆದರೆ, ಅಮೆರಿಕ, ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ ಭಾರತವನ್ನು ಬೆಂಬಲಿಸಿವೆ.

ಭಾರತದಲ್ಲಿ ಅನೇಕ ಬಾರಿ ಭಯೋತ್ಪಾದಕ ದಾಳಿ ನಡೆಸಿದ ಆರೋಪ ಅಜರ್‌ ಮೇಲಿದೆ. ಈ ಪೈಕಿ, 2016ರಲ್ಲಿ ಕಾಶ್ಮೀರದ ಉರಿಯಲ್ಲಿ ನಡೆದ ದಾಳಿ ಪ್ರಮುಖವಾದುದು. ಈ ದಾಳಿಯಲ್ಲಿ 17 ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದರು.

‘ಅಜರ್‌ ಮಸೂದ್‌ಗೆ ಸಂಬಂಧಿಸಿದ ವಿವಾದ ಇರುವುದು ಭಾರತ ಮತ್ತು ಪಾಕಿಸ್ತಾನದ ನಡುವೆ. ಆದರೆ, ಈ ವಿಷಯದಲ್ಲಿ ಉಭಯ ರಾಷ್ಟ್ರಗಳ ಒಮ್ಮತವಿಲ್ಲ. ಭಾರತದ ನಿಲುವನ್ನು ಪಾಕಿಸ್ತಾನ ಒಪ್ಪಿಲ್ಲ. ಉಭಯ ರಾಷ್ಟ್ರಗಳು ಒಮ್ಮತಕ್ಕೆ ಬರುವವರೆಗೆ ಅಜರ್‌ ಮಸೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾವಕ್ಕೆ ನಮ್ಮ ಒಪ್ಪಿಗೆಯಿಲ್ಲ’ ಎಂದು ವಾಂಗ್‌ ಯಿ ಹೇಳಿದ್ದಾರೆ.

ಚೀನಾ ಮತ್ತು ಪಾಕಿಸ್ತಾನ ಮಿತ್ರರಾಷ್ಟ್ರಗಳಾಗಿವೆ. ‘ಭಯೋತ್ಪಾದನೆ ನಿಗ್ರಹಕ್ಕೆ ಪಾಕಿಸ್ತಾನ ದಿಟ್ಟ ಹೋರಾಟ ನಡೆಸುತ್ತಿದೆ’ ಎಂದೂ ವಾಂಗ್‌ ಪ್ರಶಂಸಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT