ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮಾಸ್ ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದ 4 ವರ್ಷದ ಬಾಲಕಿಯನ್ನು ಭೇಟಿಯಾದ ಬೈಡನ್

Published 25 ಏಪ್ರಿಲ್ 2024, 3:11 IST
Last Updated 25 ಏಪ್ರಿಲ್ 2024, 3:11 IST
ಅಕ್ಷರ ಗಾತ್ರ

ವಾಷಿಂಗ್ಟನ್: ಹಮಾಸ್ ಉಗ್ರರು ಗಾಜಾದಲ್ಲಿ ಹಲವು ವಾರಗಳ ಕಾಲ ಒತ್ತೆಯಾಳಾಗಿರಿಸಿಕೊಂಡಿದ್ದ 4 ವರ್ಷದ ಬಾಲಕಿ, ಅಮೆರಿಕ ಪ್ರಜೆ ಅಬಿಗೈಲ್ ಇಡನ್ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭೇಟಿ ಮಾಡಿದ್ದಾರೆ.

ಅಬಿಗೈಲ್ ಮತ್ತು ಅವರ ಕುಟುಂಬದ ಜೊತೆಗಿನ ಅಧ್ಯಕ್ಷರ ಭೇಟಿಯು ಇನ್ನೂ ಮತ್ತಷ್ಟು ಪ್ರಯತ್ನದ ಮೂಲಕ ಉಳಿದಿರುವ ಹಲವು ಜನರ ಬಿಡುಗಡೆಗೆ ಪ್ರಯತ್ನಿಸಬೇಕಿದೆ ಎಂಬುದರ ಜ್ಞಾಪನೆಯಾಗಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜ್ಯಾಕ್ ಸುಲ್ಲಿವನ್ ಹೇಳಿದ್ದಾರೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಹಮಾಸ್ ಉಗ್ರರು ಹಲವರನ್ನು ಬಂಧಿಸಿ ಕರೆದೊಯ್ದಿದ್ದರು. ಅದರಲ್ಲಿ ಇನ್ನೂ ಹಲವು ಮಂದಿ ಹಮಾಸ್ ವಶದಲ್ಲೇ ಇರುವ ಸಾಧ್ಯತೆ ಇದೆ.

ಇಸ್ರೇಲ್–ಅಮೆರಿಕ ಎರಡೂ ದೇಶಗಳ ಪೌರತ್ವ ಹೊಂದಿರುವ ಬಾಲಕಿ ಅಬಿಗೈಲ್ ಅವರ ಪೋಷಕರನ್ನು ಕೊಂದಿದ್ದ ಹಮಾಸ್ ಉಗ್ರರು, ಬಳಿಕ ಆಕೆಯನ್ನೂ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. 7 ವಾರಗಳ ಬಳಿಕ ಸಂಧಾನ ಮಾತುಕತೆಯಲ್ಲಿ ಒತ್ತೆಯಾಳುಗಳ ಪರಸ್ಪರ ಹಸ್ತಾಂತರ ಪ್ರಕ್ರಿಯೆಯಲ್ಲಿ ಬಿಡುಗಡೆ ಮಾಡಿದ್ದರು. ಹಮಾಸ್ ಉಗ್ರರು ಬಿಡುಗಡೆ ಮಾಡಿದ ಮೊದಲ ಅಮೆರಿಕ ಪ್ರಜೆಯೂ ಅಬಿಗೈಲ್ ಆಗಿದ್ದಾರೆ.

ಹಮಾಸ್ ಉಗ್ರರು 100ಕ್ಕೂ ಅಧಿಕ ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ಇಸ್ರೇಲ್ ಹೇಳಿದೆ.

ಅಬಿಗೈಲ್ ಬಿಡುಗಡೆ ಬಳಿಕ ಒಮ್ಮೆ ಮಾತನಾಡಿದ್ದ ಬೈಡನ್ ಅವರಿಗೆ ಈ ಭೇಟಿ ಅತ್ಯಂತ ಭಾವನಾತ್ಮಕವಾಗಿತ್ತು ಎಂದು ಭದ್ರತಾ ಸಲಹೆಗಾರರು ತಿಳಿಸಿದ್ದಾರೆ.

ಅಬಿಗೈಲ್ ಈಗಲೂ ತನ್ನ ತಂದೆ ತಾಯಿಯ ಸಾವು ಮತ್ತು ಹಮಾಸ್ ಉಗ್ರರ ಸೆರೆಯಲ್ಲಿ ಅನುಭವಿಸಿದ ಹಿಂಸೆಯ ಆಘಾತದಿಂದ ಹೊರಬಂದಿಲ್ಲ ಎಂದೂ ಅವರು ಹೇಳಿದ್ದಾರೆ.

ಇಸ್ರೇಲ್–ಅಮೆರಿಕನ್‌ನ ಪ್ರಜೆಯೊಬ್ಬರು ಈಗಲೂ ಹಮಾಸ್ ಉಗ್ರರ ವಶದಲ್ಲಿರುವ ಬಗ್ಗೆ ವಿಡಿಯೊ ಬಿಡುಗಡೆಯಾದ ಬಳಿಕ ಬೈಡನ್ ಅವರ ಈ ಭೇಟಿ ನಡೆದಿದೆ.

ವಿಡಿಯೊದಲ್ಲಿ 23 ವರ್ಷದ ಇಸ್ರೇಲ್–ಅಮೆರಿಕನ್‌ ಪ್ರಜೆ ಹೆರ್ಶ್ ಗೋಲ್ಡ್‌ಬರ್ಗ್ ಪೊಲಿನ್ ದೃಶ್ಯಾವಳಿ ಇದ್ದು, ಅಕ್ಟೋಬರ್ 7 ಹಮಾಸ್ ನಡೆಸಿದ ದಾಳಿ ವೇಳೆ ಅವರು ಇಸ್ರೇಲ್‌ನ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಡಿಯೊ ಚಿತ್ರೀಕರಿಸಿದ ಸಮಯ ಮತ್ತು ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT