ಸಾವೊ ಪೌಲೊ: ಶುಕ್ರವಾರ ಸಂಭವಿಸಿದ ಬ್ರೆಜಿಲ್ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಅದೃಷ್ಟವಶಾತ್ ಪ್ರಾಣ ಉಳಿಸಿಕೊಂಡಿರುವ ಆಶ್ವರ್ಯಕರ ಘಟನೆ ಬೆಳಕಿಗೆ ಬಂದಿದೆ.
ಅಡ್ರಿನೊ ಅಸಿಸ್ ಎನ್ನುವ ವ್ಯಕ್ತಿಯೇ ಪ್ರಾಣ ಉಳಿಸಿಕೊಂಡವರು. ಅಡ್ರಿನೊ ಶುಕ್ರವಾರ ಕಸ್ಕಾವೇಲ್ ಆಸ್ಪತ್ರೆಯೊಂದರಲ್ಲಿ ಕೆಲಸ ಮುಗಿಸಿಕೊಂಡು ಸಾವೊ ಪೌಲೋಕ್ಕೆ ತೆರಳಬೇಕಿತ್ತು.
ಬೆಳಿಗ್ಗೆ 11.50 ಕ್ಕೆ ವಿಮಾನ ಸಾವೊ ಪೌಲೋಗೆ ಹೊರಡಬೇಕಿತ್ತು. ಆಗ 10.40ಕ್ಕೆ ಅಡ್ರಿನೊ, ಕಸ್ಕಾವೇಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಬೋರ್ಡಿಂಗ್ ಪಾಯಿಂಟ್‌ನಲ್ಲಿ ದೊಡ್ಡ ಸರತಿ ಇದ್ದಿದ್ದಕ್ಕೆ ಅಡ್ರಿನೊ ತಕ್ಷಣವೇ ಅಲ್ಲಿಯೇ ಇದ್ದ ಅಂಗಡಿಯೊಂದರಲ್ಲಿ ಕಾಫೀ ಕುಡಿಯಲು ತೆರಳಿದ್ದಾರೆ. ವಾಪಸ್ ಬೋರ್ಡಿಂಗ್ ಪಾಯಿಂಟ್‌ಗೆ ಬಂದ ನಂತರ ಅಲ್ಲಿದ್ದ ಸಿಬ್ಬಂದಿ ಅಡ್ರಿನೊ ಅವರನ್ನು ತಡವಾಗಿ ಬಂದಿರುವುದಕ್ಕೆ (ಒಂದು ಗಂಟೆ ಮೊದಲು) ವಿಮಾನ ಹತ್ತಲು ಬಿಟ್ಟಿರಲಿಲ್ಲ
ಇದರಿಂದ ನಿರಾಶೆಯಾಗಿದ್ದ ಅಡ್ರಿನೊ ಅವರು ಅಲ್ಲಿಯೇ ಕೆಲ ಹೊತ್ತು ಇದ್ದು ವಾಪಸ್ ಕಸ್ಕಾವೇಲ್ ಗೆ ಹೋಗಲು ತಯಾರಿ ನಡೆಸಿದ್ದರು. ಆದರೆ, ತಾವು ಸಾವೊ ಪೌಲೋಗೆ ಹೊರಡಬೇಕಿದ್ದ Voepass ಏರ್‌ಲೈನ್ಸ್‌ನ ATR-72 ವಿಮಾನ ವಿನೆದೊ ನಗರದ ಜನವಸತಿ ಪ್ರದೇಶದಲ್ಲಿ ಪತನವಾಗಿದೆ ಎಂದು ಸುದ್ದಿ ಕೇಳಿ ಕೆಲಕಾಲ ದಂಗಾಗಿ ಹೋಗಿದ್ದರು. ತಮ್ಮ ಪ್ರಾಣ ಉಳಿದಿದ್ದರ ಬಗ್ಗೆ ಅವರು ಸ್ಥಳೀಯ ಮಾಧ್ಯಮ ಸಂಸ್ಥೆ ಜೊತೆ ಭಾವನಾತ್ಮಕವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಡ್ರಿನೊ ಅವರನ್ನು ವಿಮಾನ ಹತ್ತಲು ಬಿಡದಿದ್ದಾಗ ಅವರು ಸಿಬ್ಬಂದಿ ಜೊತೆ ಜಗಳ ಮಾಡಿದ್ದರು. ಆದರೆ, ದುರಂತ ನಡೆದ ಮೇಲೆ ಅವರು ಸಿಬ್ಬಂದಿಯನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದ್ದಾರೆ. ಹಾಗೆಯೇ ಇನ್ನೂ ಕೆಲವರು ಇದೇ ವಿಮಾನಕ್ಕೆ ಹೋಗಬೇಕಿತ್ತು. ಆದರೆ, ಅವರು ಸಹ ವೇಳಾಪಟ್ಟಿ ಬದಲಾಯಿಸಿಕೊಂಡಿದ್ದರು.
ಈ ಕುರಿತು ಯುಕೆ ಡೇಲಿ ಮೇಲ್ ವರದಿ ಮಾಡಿದೆ.
ಕಸ್ಕಾವೇಲ್ ನಗರದಿಂದ ಸಾವೊ ಪೌಲೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ Voepass ಏರ್‌ಲೈನ್ಸ್‌ನ ATR-72 ವಿಮಾನ ವಿನೆದೊ ನಗರದ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಪತನಗೊಂಡಿದೆ. ಇದರಿಂದ ಸಿಬ್ಬಂದಿ ಸೇರಿ 61 ಜನ ಮೃತಪಟ್ಟಿದ್ದಾರೆ.
ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನ ನೇರವಾಗಿ ಚಲಿಸದೇ ಆಕಾಶದಲ್ಲೇ ಗಿರಕಿ ಹೊಡೆಯುತ್ತಾ ವೇಗವಾಗಿ ನೆಲಕ್ಕೆ ಅಪ್ಪಳಿಸಿದೆ. ಈ ಆತಂಕಕಾರಿ ವಿಡಿಯೊ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
Voepass ಏರ್‌ಲೈನ್ಸ್ ಬ್ರೆಜಿಲ್‌ನ ನಾಲ್ಕನೇ ಅತಿದೊಡ್ಡ ನಾಗರಿಕ ವಿಮಾನಯಾನ ಸಂಸ್ಥೆಯಾಗಿದೆ.
This man wasn’t allowed to board the plane that just crashed in Vinhedo in São Paulo, Brazil because he was LATE.
— Cillian (@CilComLFC) August 9, 2024
He argued with the man at the boarding gate, but ended up hugging him after hearing the plane had crashed.
This is unbelievable… 🙏 pic.twitter.com/wrplK3lVr4
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.