ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾಗಿ ಚಂಡಮಾರುತಕ್ಕೆ ಮ್ಯಾನ್ಮಾರ್‌ ತತ್ತರ: 226 ಮಂದಿ ಸಾವು; 77 ಮಂದಿ ನಾಪತ್ತೆ

Published : 17 ಸೆಪ್ಟೆಂಬರ್ 2024, 15:37 IST
Last Updated : 17 ಸೆಪ್ಟೆಂಬರ್ 2024, 15:37 IST
ಫಾಲೋ ಮಾಡಿ
Comments

ಬ್ಯಾಂಕಾಕ್‌: ಕಳೆದ ವಾರ ಬೀಸಿದ ‘ಯಾಗಿ’ ಚಂಡಮಾರುತದಿಂದಾಗಿ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹ ಮತ್ತು ಮಳೆ ಕಾರಣದಿಂದ ಸುಮಾರು 226 ಮಂದಿ ಮೃತಪಟ್ಟು, 77 ಮಂದಿ ನಾಪತ್ತೆಯಾಗಿದ್ದಾರೆ.

ಇದರಿಂದಾಗಿ ಆಗ್ನೇಯ ಏಷ್ಯಾದಲ್ಲಿ ಈ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 500ಕ್ಕೆ ತಲುಪಿದೆ ಎಂದು ಅಂದಾಜಿಸಲಾಗಿದೆ.

ಚಂಡಮಾರುತದಿಂದ ತತ್ತರಿಸಿದ್ದ ಕೆಲವು ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆ ಸ್ಥಗಿತಗೊಂಡಿದೆ. ಸಂವಹನ ಸುಲಭದಲ್ಲಿ ಸಾಧ್ಯವಾಗಿಲ್ಲ ಕಾರಣ ಸಾವಿಗೀಡಾದವರ ಸಂಖ್ಯೆ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ದೇಶದ ಹಲವೆಡೆ ಈಗಲೂ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ 1.60 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 438 ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

‘ಯಾಗಿ’ ಚಂಡಮಾರುತವು ಮೊದಲಿಗೆ ವಿಯೆಟ್ನಾಂ, ಉತ್ತರ ಥಾಯ್ಲೆಂಡ್‌ ಮತ್ತು ಲಾವೋಸ್‌ ಮೇಲೆ ಬೀಸಿತು. ವಿಯೆಟ್ನಾಂನಲ್ಲಿ 300 ಜನರು, ಥಾಯ್ಲೆಂಡ್‌ನಲ್ಲಿ 42 ಮತ್ತು ಲಾವೊಸ್‌ನಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ಎಎಸ್‌ಇಎಎನ್‌) ಮಾನವೀಯ ನೆರವುಗಳ ಸಹಯೋಗ ಕೇಂದ್ರ ಮಾಹಿತಿ ನೀಡಿದೆ. ಇದೇ ವೇಳೆ, ಫಿಲಿಪ್ಪಿನ್ಸ್‌ನಲ್ಲಿ 21 ಜನರು ಮೃತಪಟ್ಟು, ಇನ್ನೂ 26 ಜನರು ಕಾಣೆಯಾಗಿದ್ದಾರೆ ಎಂದೂ ಹೇಳಿದೆ. 

ಮ್ಯಾನ್ಮಾರ್‌ನಲ್ಲಿ 6.31 ಲಕ್ಷ ಜನರ ಜೀವನದ ಮೇಲೆ ಚಂಡಮಾರುತ ದುಷ್ಪರಿಣಾಮ ಉಂಟುಮಾಡಿದೆ. ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಮಿಲಿಟರಿ ಸಂಘರ್ಷ ಮತ್ತು ಇತರ ಕಾರಣಗಳಿಂದಾಗಿ ಸೆಪ್ಟೆಂಬರ್‌ ಆರಂಭದಲ್ಲಿ 34 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಮ್ಯಾನ್ಮಾರ್‌ನಲ್ಲಿ 1.30 ಲಕ್ಷ ಪ್ರಾಣಿಗಳು ಸಾವಿಗೀಡಾಗಿದ್ದು, 2.59 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಗೆ ಹಾನಿಯಾಗಿದೆ. ಪ್ರವಾಹ ಸಂತ್ರಸ್ತರಿಗೆ ಆಹಾರ, ಕುಡಿಯುವ ನೀರು,  ಔಷಧ, ಬಟ್ಟೆ ಅಗತ್ಯವಿದೆ ಎಂದು ತಿಳಿಸಿದೆ.

ಮ್ಯಾನ್ಮಾರ್‌ನ ಕರೆನ್ನಿ ರಾಜ್ಯದಲ್ಲಿನ ಫಾಯಾರ್‌ಫ್ಯು ಗ್ರಾಮದಲ್ಲಿ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದ್ದು ರೈತರು ದೋಣಿಯಲ್ಲಿ ಭತ್ತವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು– ಎಎಫ್‌ಪಿ ಚಿತ್ರ
ಮ್ಯಾನ್ಮಾರ್‌ನ ಕರೆನ್ನಿ ರಾಜ್ಯದಲ್ಲಿನ ಫಾಯಾರ್‌ಫ್ಯು ಗ್ರಾಮದಲ್ಲಿ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದ್ದು ರೈತರು ದೋಣಿಯಲ್ಲಿ ಭತ್ತವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು– ಎಎಫ್‌ಪಿ ಚಿತ್ರ
‘ಆಪರೇಷನ್‌ ಸದ್ಭವ್‌’ ಮುಂದುವರಿದಿದೆ. ಎರಡನೇ ತಂಡದ ನೆರವು ಸಾಮಗ್ರಿಯನ್ನು ಭಾರತವು ಮ್ಯಾನ್ಮಾರ್‌ಗೆ ಮಂಗಳವಾರ ರವಾನಿಸಿದೆ 
- ರಣಧೀರ್‌ ಜೈಸ್ವಾಲ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ

ಮ್ಯಾನ್ಮಾರ್‌ಗೆ ಭಾರತದ ನೆರವು

ಚಂಡಮಾರುತದ ಅಡ್ಡಪರಿಣಾಮಗಳಿಂದ ತತ್ತರಿಸಿರುವ ಮ್ಯಾನ್ಮಾರ್‌ಗೆ ಭಾರತವು 32 ಟನ್‌ ನೆರವು ಸಾಮಗ್ರಿಗಳನ್ನು ಸೇನಾ ಸರಕು ಸಾಗಣೆ ವಿಮಾನದ ಮೂಲಕ ಮಂಗಳವಾರ ಕಳಿಸಿದೆ. ಭಾನುವಾರವಷ್ಟೇ 10 ಟನ್‌ ನೆರವು ಸಾಮಗ್ರಿಯನ್ನು ಭಾರತ ರವಾನಿಸಿತ್ತು. ಚಂಡಮಾರುತದಿಂದ ಸಂಕಷ್ಟಕ್ಕೀಡಾಗಿರುವ ಆಗ್ನೇಯ ಏಷ್ಯಾಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಎರಡು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರವು ‘ಆಪರೇಷನ್ ಸದ್ಭವ್‌’ ಎಂಬ ಹೆಸರಿನ ಕಾರ್ಯಾಚರಣೆಗೆ ಚಾಲನೆ ನೀಡಿತ್ತು. ಆ ಕಾರ್ಯಾಚರಣೆ ಅಡಿ ನೆರವು ಸಾಮಗ್ರಿ ರವಾನೆ ಮಾಡಿದೆ. ಚಂಡಮಾರುತದಿಂದ ತತ್ತರಿಸಿರುವ ಇನ್ನೆರಡು ದೇಶಗಳಾದ ವಿಯೆಟ್ನಾಂ ಮತ್ತು ಲಾವೋಸ್‌ಗೆ ಈಗಾಗಲೇ ಭಾರತವು ನೆರವು ಸಾಮಗ್ರಿ ರವಾನಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT