ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ವಾಡ್‌ಗೆ ಚೀನಾ ಸವಾಲು: ಬೈಡನ್‌

ಮೈಕ್ರೊಫೋನ್‌ ‘ಸ್ವಿಚ್‌ ಆನ್’ ಇದ್ದಾಗಲೇ ಅಮೆರಿಕ ಅಧ್ಯಕ್ಷ ಬೈಡನ್‌ ಮಾತು
Published : 22 ಸೆಪ್ಟೆಂಬರ್ 2024, 22:54 IST
Last Updated : 22 ಸೆಪ್ಟೆಂಬರ್ 2024, 22:54 IST
ಫಾಲೋ ಮಾಡಿ
Comments

ವಾಷಿಂಗ್ಟನ್ : ‘ಆರ್ಥಿಕತೆ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ವಿಚಾರದಲ್ಲಿ ಚೀನಾ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದು, ಈ ಮೂಲಕ ನಮಗೆ (ಕ್ವಾಡ್‌ ಸದಸ್ಯ ರಾಷ್ಟ್ರಗಳಿಗೆ) ಸವಾಲು ಒಡ್ಡುತ್ತಿದೆ’ ಎಂಬ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಕ್ಕೆ ಕ್ವಾಡ್‌ ಶೃಂಗಸಭೆ ಶನಿವಾರ ಸಾಕ್ಷಿಯಾಯಿತು.

ಪತ್ರಕರ್ತರು ಸಭಾಂಗಣದಿಂದ ಹೊರ ನಡೆಯುತ್ತಿದ್ದ ವೇಳೆ, ಕ್ವಾಡ್‌ ನಾಯಕರನ್ನು ಉದ್ದೇಶಿಸಿ ಬೈಡನ್ ಅವರು ಈ ರೀತಿ ಹೇಳುವಾಗ ಮೈಕ್ರೊಫೋನ್‌ ಬಂದ್‌ ಆಗಿರಲಿಲ್ಲ ಎಂಬುದು ಗಮನಾರ್ಹ. 

ಚೀನಾ ಒಡ್ಡುತ್ತಿರುವ ಬೆದರಿಕೆಯನ್ನು ಅಮೆರಿಕ ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ಬೈಡನ್‌ ಅವರ ಈ  ಹೇಳಿಕೆ ತೋರಿಸುತ್ತದೆ ಎಂದೇ ವಿಶ್ಲೇಷಿಸಲಾಗಿದೆ.

ವಿವಾದಿತ ದಕ್ಷಿಣ ಚೀನಾ ಸಮುದ್ರ ಹಾಗೂ ಪೂರ್ವ ಚೀನಾ ಸಮುದ್ರ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಹಾಗೂ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಲು ಚೀನಾ ನಿರಂತರವಾಗಿ ಪ್ರಯತ್ನಿಸುತ್ತಿದೆ. ಹೀಗಾಗಿ, ಬೈಡನ್‌ ಅವರ ಹೇಳಿಕೆಗೆ ಮಹತ್ವ ಇದೆ.

‘ದೇಶದ ಆರ್ಥಿಕತೆ ಕುಸಿದು ಎದುರಾಗುವ ಸವಾಲುಗಳ ಮೇಲೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಗಮನ ಹರಿಸುತ್ತಾರೆ. ಆ ಮೂಲಕ ಆಂತರಿಕವಾಗಿ ಪ್ರಕ್ಷುಬ್ಧ ಸ್ಥಿತಿ ಉಂಟಾಗುವುದನ್ನು ತಪ್ಪಿಸಿಕೊಳ್ಳುತ್ತಾರೆ’ ಎಂದು ಬೈಡನ್‌ ಹೇಳಿದ್ದಾರೆ. 

‘ಚೀನಾದ ಹಿತಾಸಕ್ತಿಯನ್ನು ಆಕ್ರಮಣಕಾರಿಯಾಗಿ ಮುಂದಕ್ಕೆ ಒಯ್ಯಲು ಬೇಕಾದ ಸಮಯವನ್ನು ರಾಜತಾಂತ್ರಿಕ ಕ್ರಮಗಳ ಮೂಲಕ ಜಿನ್‌ಪಿಂಗ್‌ ಪಡೆದುಕೊಳ್ಳುತ್ತಾರೆ. ಎದುರಾಳಿಯ ತೀವ್ರ ನಡೆಗೆ ರಾಜತಾಂತ್ರಿಕವಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡುವುದು ಅಗತ್ಯ’ ಎಂದಿದ್ದಾರೆ.

ಬೈಡನ್‌ ಅವರು ಈ ಮಾತುಗಳನ್ನು ಹೇಳುವಾಗ ಮೈಕ್ರೊಫೋನ್‌ ಬಂದ್ ಆಗಿರಲಿಲ್ಲ ಎಂಬುದನ್ನು ಗಮನಿಸಿದ ಹಿರಿಯ ಅಧಿಕಾರಿಯೊಬ್ಬರು, ತಪ್ಪನ್ನು ತಿದ್ದುವ ಪ್ರಯತ್ನ ನಡೆಸಿದರು.

‘ಈ ವಿಚಾರವಾಗಿ ನಾವು ಹೆಚ್ಚು ವಿವರವಾಗಿ ಹೇಳುವುದೇನೂ ಇಲ್ಲ. ಆಂತರಿಕವಾಗಿ ನಾವು ಹೊಂದಿರುವ ಅಭಿಪ್ರಾಯಗಳು ಬಹಿರಂಗವಾಗಿ ವ್ಯಕ್ತವಾಗುವ ಅಭಿಪ್ರಾಯಗಳ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲ’ ಎಂದು ಹೇಳಿದ್ದಾರೆ.

‘ಇದು ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶ ಕುರಿತ ಸಮಾವೇಶ. ಈ ಪ್ರದೇಶದಲ್ಲಿ ಚೀನಾ ದೊಡ್ಡ ರಾಷ್ಟ್ರವೂ ಆಗಿದೆ. ಹೀಗಾಗಿ ಶೃಂಗಸಭೆಯ ಕಾರ್ಯಸೂಚಿಯಲ್ಲಿ ಚೀನಾ ವಿಚಾರವೂ ಇದ್ದದ್ದು ನ್ಯಾಯಯುತವಾಗಿಯೇ ಇದೆ’ ಎಂದು ಸಮರ್ಥನೆ ನೀಡಿದ್ದಾರೆ.

ಕ್ವಾಡ್‌ ಯಾರ ವಿರುದ್ಧವೂ ಅಲ್ಲ: ಮೋದಿ  

‘ಕ್ವಾಡ್‌ ಸಂಘಟನೆ ಯಾವ ದೇಶದ ವಿರುದ್ಧವೂ ಅಲ್ಲ. ನಿಯಮಬದ್ಧ ಜಾಗತಿಕ ವ್ಯವಸ್ಥೆ ಹಾಗೂ ಎಲ್ಲ ದೇಶಗಳ ಸಾರ್ವಭೌಮತೆಗೆ ಗೌರವ ತೋರುವುದು ಸಂಘಟನೆಯ ಉದ್ದೇಶ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ‘ಮುಕ್ತ ಒಳ್ಳಗೊಳ್ಳುವಿಕೆಯಿಂದ ಕೂಡಿದ ಹಾಗೂ ಪ್ರಗತಿ ಹೊಂದಿದ ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶ ನಮ್ಮ ಆದ್ಯತೆ’ ಎಂದು ‘ಕ್ವಾಡ್‌ ಶೃಂಗಸಭೆ’ಯಲ್ಲಿ ಶನಿವಾರ ಹೇಳಿದ್ದಾರೆ. ‘ಎಲ್ಲ ದೇಶಗಳ ಭೌಗೋಳಿಕ ಸಮಗ್ರತೆಯನ್ನು ಗೌರವಿಸುವುದು ಎಲ್ಲ ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದು ನಮ್ಮ ಉದ್ದೇಶ’ ಎಂದು ಯಾವುದೇ ದೇಶದ ಹೆಸರು ಉಲ್ಲೇಖಿಸದೆ ಮೋದಿ ಹೇಳಿದರು. ‘ತನ್ನ ಸದಸ್ಯ ರಾಷ್ಟ್ರಗಳಿಗೆ ನೆರವಿನ ಹಸ್ತ ಚಾಚಲು ಅವುಗಳೊಂದಿಗೆ ಪಾಲುದಾರಿಕೆ ಸಾಧಿಸಲು ಹಾಗೂ ಅವುಗಳ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಸಲುವಾಗಿಯೇ ಕ್ವಾಡ್ ಅಸ್ತಿತ್ವಕ್ಕೆ ಬಂದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT