ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌: ಬೆತ್ಲೆಹೆಮ್‌ನಲ್ಲಿ ಮರುಕಳಿಸಿದ ಸಂಭ್ರಮ

Last Updated 25 ಡಿಸೆಂಬರ್ 2022, 13:23 IST
ಅಕ್ಷರ ಗಾತ್ರ

ಬೆತ್ಲೆಹೆಮ್‌/ಜೆರುಸಲೇಮ್‌ (ಪಿಟಿಐ): ಏಸು ಕ್ರಿಸ್ತನ ಜನ್ಮಸ್ಥಳ ಬೆತ್ಲೆಹೆಮ್‌ನಲ್ಲಿ ಈ ಬಾರಿ ಕ್ರಿಸ್‌ಮಸ್‌ ಸಂಭ್ರಮ ಮೇಳೈಸಿತ್ತು. ಕೋವಿಡ್‌ನಿಂದಾಗಿ ಹಿಂದಿನ ಎರಡು ವರ್ಷ ಹಬ್ಬದ ಸಡಗರ ಕಳೆಗುಂದಿತ್ತು. ಭಾರತ ಸೇರಿದಂತೆ ವಿದೇಶಿ ಯಾತ್ರಿಕರೂ ನಗರಕ್ಕೆ ಭೇಟಿ ನೀಡಿರುವುದರಿಂದ ಈ ಬಾರಿ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಗರಿಗೆದರಿವೆ.

‘ಈ ಬಾರಿ ಕ್ರಿಸ್‌ಮಸ್‌ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಸಲುವಾಗಿಭಾರತದಿಂದ ಸುಮಾರು 250 ಮಂದಿ ಯಾತ್ರಿಕರು ನಗರಕ್ಕೆ ಬಂದಿದ್ದಾರೆ’ ಎಂದು ಸ್ಕಾಪಸ್ ವರ್ಲ್ಡ್‌ ಟ್ರಾವೆಲ್‌ನ ಸಿಇಒ ಅಶೋಕ್‌ ರವಿ ಹೇಳಿದ್ದಾರೆ.

ಪ್ಯಾಲೆಸ್ಟೀನ್‌ನ ಬಾಲಕ ಮತ್ತು ಬಾಲಕಿಯರು ಶನಿವಾರ ಮ್ಯಾಂಗರ್‌ ಸ್ಕ್ವೇರ್‌ ಬಳಿ ಸಾಂಪ್ರದಾಯಿಕ ಪಥ ಸಂಚಲನ ನಡೆಸುವ ಮೂಲಕ ಕ್ರಿಸ್‌ಮಸ್‌ ಸಂಭ್ರಮಾಚರಣೆಗೆ ಚಾಲನೆ ನೀಡಿದರು. ಸ್ಕ್ವೇರ್‌ ಬಳಿ ಸಿಂಗರಿಸಲಾಗಿದ್ದ ಕ್ರಿಸ್‌ಮಸ್‌ ಟ್ರೀ ಎದುರು ನಿಂತು ವಿದೇಶಿ ಪ್ರವಾಸಿಗರು ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

‘ಕ್ರಿಸ್‌ಮಸ್‌ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವ ಸಲುವಾಗಿ ಈ ಬಾರಿ ಜಗತ್ತಿನ ವಿವಿಧ ಭಾಗಗಳಿಂದ 1.20 ಲಕ್ಷ ಮಂದಿ ಪ್ರವಾಸಿಗರು ಹಾಗೂ ಭಕ್ತರು ಬೆತ್ಲೆಹೆಮ್‌ಗೆ ಭೇಟಿ ನೀಡುವ ನಿರೀಕ್ಷೆ ಇದೆ’ ಎಂದು ಇಸ್ರೇಲ್‌ನ ಪ್ರವಾಸೋದ್ಯಮ ಸಚಿವಾಲಯ ಹೇಳಿದೆ.

‘ಜಗತ್ತು ಶಾಂತಿಯ ಕ್ಷಾಮದಿಂದ ಬಳಲುತ್ತಿದೆ’

ವ್ಯಾಟಿಕನ್‌ ಸಿಟಿ (ರಾಯಿಟರ್ಸ್‌): ‘ಜಗತ್ತು ಶಾಂತಿಯ ಕ್ಷಾಮದಿಂದ ಬಳಲುತ್ತಿದೆ. ಉಕ್ರೇನ್‌ ಮೇಲಿನ ಯುದ್ಧ ಹಾಗೂ ಇತರೆ ಸಂಘರ್ಷಗಳಿಗೆ ತೆರೆ ಎಳೆಯಬೇಕಿದೆ’ ಎಂದು ಪೋಪ್‌ ಫ್ರಾನ್ಸಿಸ್‌ ಭಾನುವಾರ ಹೇಳಿದ್ದಾರೆ.

‘ನಿರಾಶ್ರಿತರು, ವಲಸಿಗರು ಹಾಗೂ ಬಡವರಿಗೆ ಸಹಾಯ ಮಾಡಿ’ ಎಂದು 10ನೇ ಕ್ರಿಸ್‌ಮಸ್‌ ಭಾಷಣದಲ್ಲಿ ಮನವಿ ಮಾಡಿದ್ದಾರೆ.

‘ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತಹ ಮನಸ್ಸನ್ನು ಆ ದೇವರು ನಮ್ಮೆಲ್ಲರಿಗೂ ಕರುಣಿಸಲಿ. ಆಯುಧಗಳ ಘರ್ಜನೆಯನ್ನು ನಿಶಬ್ದಗೊಳಿಸುವಂತೆ ಅಧಿಕಾರಸ್ಥರ ಮನಸ್ಸನ್ನು ಪರಿವರ್ತಿಸಲಿ. ಆ ಮೂಲಕ ಅರ್ಥವಿಲ್ಲದ ಈ ಯುದ್ಧಗಳಿಗೆ ತಕ್ಷಣವೇ ಅಂತ್ಯ ಹಾಡುವಂತೆ ಮಾಡಲಿ’ ಎಂದೂ ಅವರು ಹೇಳಿದ್ದಾರೆ.

ಆಹಾರವನ್ನು ಯುದ್ಧದ ಅಸ್ತ್ರವನ್ನಾಗಿ ಬಳಸುವುದಕ್ಕೆ ಖಂಡನೆ ವ್ಯಕ್ತಪಡಿಸಿರುವ ಅವರು ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವು ಲಕ್ಷಾಂತರ ಮಂದಿಯನ್ನು ಸಂಕಷ್ಟಕ್ಕೆ ದೂಡಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT