ವಿಶ್ವಸಂಸ್ಥೆ (ಜಿನೀವಾ)(ಪಿಟಿಐ): ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ಎತ್ತಿಹಿಡಿಯುವ ಪ್ರಯತ್ನಗಳನ್ನು ದ್ವಿಗುಣಗೊಳಿಸುವ ಅಗತ್ಯ ಇದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಲ್ಕರ್ ಟರ್ಕ್ ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.
ಜಿನೀವಾದಲ್ಲಿ ನಡೆದ ಮಾನವ ಹಕ್ಕುಗಳ ಮಂಡಳಿಯ 54ನೇ ಅಧಿವೇಶನದಲ್ಲಿ ಮಾತನಾಡಿದ ಟರ್ಕ್, ‘ಅಲ್ಪಸಂಖ್ಯಾತ ಸಮುದಾಯಗಳು ಹಿಂಸಾಚಾರ, ತಾರತಮ್ಯಕ್ಕೆ ಗುರಿಯಾಗುತ್ತಿರುವ ಬಗ್ಗೆ ಭಾರತದಲ್ಲಿರುವ ನಮ್ಮ ಕಚೇರಿಗೆ ಆಗಾಗ್ಗೆ ಮಾಹಿತಿ ಬರುತ್ತಲೇ ಇರುತ್ತದೆ’ ಎಂದು ಹೇಳಿದ್ದಾರೆ.
‘ಉತ್ತರ ಭಾರತದಲ್ಲಿ ಮುಸ್ಲಿಮರು ಆಗಾಗ್ಗೆ ದಾಳಿಗಳಿಗೆ ಗುರಿಯಾಗುತ್ತಿರುತ್ತಾರೆ. ಇತ್ತೀಚೆಗೆ ಹರಿಯಾಣ ಮತ್ತು ಗುರುಗ್ರಾಮ್‌ದಲ್ಲಿ ಅಂತಹದ್ದೇ ದಾಳಿ ನಡೆದಿದೆ. ಮಣಿಪುರದಲ್ಲಿ ಇತರ ಸಮುದಾಯಗಳು ಮೇ ತಿಂಗಳಿನಿಂದ ಹಿಂಸೆಗೆ ಗುರಿಯಾಗಿವೆ. ಅಭದ್ರತೆ ಎದುರಿಸುತ್ತಿವೆ’ ಎಂದರು.
‘ಅಸಹಿಷ್ಣುತೆ, ದ್ವೇಷ ಭಾಷಣ, ಧಾರ್ಮಿಕ ಮೂಲಭೂತವಾದ ಮತ್ತು ತಾರತಮ್ಯವನ್ನು ಹತ್ತಿಕ್ಕಬೇಕು. ಈ ಮೂಲಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಪ್ರಯತ್ನಗಳನ್ನು ದ್ವಿಗುಣಗೊಳಿಸುವ ಅಗತ್ಯತೆ ಭಾರತದಲ್ಲಿ ಕಾಣಿಸುತ್ತಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.