ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ 2024: ಸೆ.4ರಂದು ಕಮಲಾ -ಟ್ರಂಪ್ ಮುಖಾಮುಖಿ

Published 3 ಆಗಸ್ಟ್ 2024, 5:30 IST
Last Updated 3 ಆಗಸ್ಟ್ 2024, 5:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಸೆಪ್ಟೆಂಬರ್‌ 4ರಂದು ‘ಫಾಕ್ಸ್‌ ನ್ಯೂಸ್‌’ ಸುದ್ದಿಸಂಸ್ಥೆಯ ಚರ್ಚಾ ಕಾರ್ಯಕ್ರಮದಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಮುಖಾಮುಖಿಯಾಗಲಿದ್ದಾರೆ.

‘ಸೆಪ್ಟೆಂಬರ್ 4ರಂದು ಕಮಲಾ ಹ್ಯಾರಿಸ್‌ ಅವರಿಗೆ ಯಾವುದೇ ಕಾರಣಕ್ಕೂ ಚರ್ಚೆ ನಡೆಸಲು ಇಷ್ಟವಿಲ್ಲದಿದ್ದರೆ ಅಥವಾ ಸಾಧ್ಯವಾಗದಿದ್ದರೆ, ನಾನು ಆದೇ ದಿನ ಸಂಜೆ ‘ಫಾಕ್ಸ್‌ ನ್ಯೂಸ್‌’ನೊಂದಿಗಿನ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ.

ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ 78 ವರ್ಷದ ಡೊನಾಲ್ಡ್ ಟ್ರಂಪ್ ಅವರು 59 ವರ್ಷದ ಕಮಲಾ ಹ್ಯಾರಿಸ್ ಅವರನ್ನು ಎದುರಿಸಲಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಕಮಲಾ ಅಧಿಕೃತವಾಗಿ ತಾನು ಆಕಾಂಕ್ಷಿ ಎಂದು ಪ್ರಕಟಿಸಿದ್ದರು. ಇದೀಗ ಕಮಲಾ ಅಭ್ಯರ್ಥಿ ಎಂದು ಪಕ್ಷ ಅಧಿಕೃತವಾಗಿ ಘೋಷಿಸಿದೆ.

ಈಚೆಗೆ ಕಮಲಾ ಹ್ಯಾರಿಸ್ ಅವರ ವಿರುದ್ಧ ಡೊನಾಲ್ಡ್ ಟ್ರಂಪ್ ಜನಾಂಗೀಯ ಮಾತಿನ ದಾಳಿ ನಡೆಸಿದ್ದರು. ‘ಕಮಲಾ ಹ್ಯಾರಿಸ್ ಕಪ್ಪು ವರ್ಣೀಯರೋ ಅಥವಾ ಭಾರತೀಯರೋ’ ಎಂದು ಟ್ರಂಪ್ ಪ್ರಶ್ನಿಸಿದ್ದರು.

ಕಮಲಾ ಹ್ಯಾರಿಸ್ ಅವರು ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಆಗಲು ಬಯಸುವವರೆಗೆ ಭಾರತ–ಅಮೆರಿಕ ಮೂಲದ ಕುರಿತು ಒತ್ತಿ ಹೇಳುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಕಪ್ಪು ವರ್ಣೀಯರೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಷಿಕಾಗೊದಲ್ಲಿ ಕಪ್ಪುವರ್ಣೀಯ ಪತ್ರಿಕೋದ್ಯಮಿಗಳ ರಾಷ್ಟ್ರೀಯ ಸಂಘದ ಸಮ್ಮೇಳನದಲ್ಲಿ ಟ್ರಂಪ್ ವ್ಯಂಗ್ಯವಾಡಿದ್ದರು.

ಟ್ರಂಪ್ ಅವರ ಈ ಹೇಳಿಕೆಗೆ ಡೆಮಾಕ್ರಟಿಕ್ ಪಕ್ಷವು ಪ್ರತಿಕ್ರಿಯಿಸಿದ್ದು, ‘ಇದು ಮತದಾರರನ್ನು ವಿಭಜಿಸುವ, ಅಭ್ಯರ್ಥಿಗೆ ಅಗೌರವ ತೋರುವ ಟ್ರಂಪ್ ಅವರ ಹಳೆಯ ತಂತ್ರವಾಗಿದೆ’ ಎಂದು ತಿರುಗೇಟು ನೀಡಿತ್ತು.

ತಮ್ಮ ಜನಾಂಗೀಯ ಪರಂಪರೆ ಪ್ರಶ್ನಿಸಿದ್ದ ಡೊನಾಲ್ಡ್ ಟ್ರಂಪ್‌ಗೆ ತಿರುಗೇಟು ನೀಡಿದ್ದ ಕಮಲಾ ಹ್ಯಾರಿಸ್, ‘ನಾನು ಜಿಲ್ಲಾ ಅಟಾರ್ನಿ, ಅಟಾರ್ನಿ ಜನರಲ್ ಮತ್ತು ಕೋರ್ಟ್‌ರೂಮ್ ಪ್ರಾಸಿಕ್ಯೂಟರ್ ಆಗಿದ್ದಾಗ ಎಲ್ಲ ರೀತಿಯ ದುಷ್ಕರ್ಮಿಗಳನ್ನು ನೋಡಿದ್ದೇನೆ ಮತ್ತು ಆ ರೀತಿಯ (ಡೊನಾಲ್ಡ್ ಟ್ರಂಪ್) ವ್ಯಕ್ತಿಗಳನ್ನು ನಿಭಾಯಿಸುತ್ತಲೇ ಬಂದಿದ್ದೇನೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT