ಬೆಂಗಳೂರು: ಅಮೆರಿಕದ 39 ನೇ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ ಅವರು ಅಕ್ಟೋಬರ್ 1 ರಂದು ತಮ್ಮ 100 ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ಮೂಲಕ 100 ವರ್ಷ ಬದುಕಿರುವ ಅಮೆರಿಕದ ಏಕೈಕ ಅಧ್ಯಕ್ಷ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.
100ನೇ ಜನ್ಮದಿನದ ಹಿನ್ನೆಲೆಯಲ್ಲಿ ಕಾರ್ಟರ್ ಅವರ ತವರೂರಾದ ಜಾರ್ಜಿಯಾದ ಪ್ಲೇನ್ಸ್‌ನಲ್ಲಿ ಸಂಭ್ರಮ ಮನೆ ಮಾಡಿತ್ತು. ಜಿಮ್ಮಿ ಅವರ ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ಈ ವೇಳೆ ಹಾಜರಿದ್ದು ಶುಭ ಕೋರಿದರು. ಜಾರ್ಜಿಯಾದ ಹಲವೆಡೆ ಅವರ ಜನ್ಮದಿನದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಪ್ಲೇನ್ಸ್‌ನ ತಮ್ಮ ವಿಶಾಲವಾದ ಮನೆಯ ಎದುರುಗಡೆಯ ಹುಲ್ಲುಸಾಸಿನಲ್ಲಿ ವ್ಹೀಲ್ ಚೇರ್‌ನಲ್ಲಿ ಬಂದು ತಮ್ಮ ಅಭಿಮಾನಿಗಳಿಗೆ ಕಾರ್ಟರ್ ಕೈ ಬೀಸಿದರು. ಕಳೆದ 17 ತಿಂಗಳಿನಿಂದ ಅವರು ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡಿಲ್ಲ. ಮನೆಯಲ್ಲಿಯೇ ಆರೈಕೆಯಲ್ಲಿದ್ದು ಆರೋಗ್ಯವಾಗಿದ್ದಾರೆ.
ಜಗತ್ತಿನ ಶ್ರೇಷ್ಠ ರಾಜಕಾರಣಿ ಎಂದು ಹೆಸರು ಪಡೆದಿರುವ ಜಿಮ್ಮಿ ಕಾರ್ಟರ್ ಅವರಿಗೆ ಅನೇಕ ಜಾಗತಿಕ ನಾಯಕರು ಶುಭ ಕೋರಿದ್ದಾರೆ.