ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel Hamas: ಕದನ ವಿರಾಮ ಆರಂಭ, ಮೊದಲ ಬ್ಯಾಚ್‌ನಲ್ಲಿ 13 ಒತ್ತೆಯಾಳುಗಳ ಬಿಡುಗಡೆ

Published 24 ನವೆಂಬರ್ 2023, 2:34 IST
Last Updated 24 ನವೆಂಬರ್ 2023, 2:34 IST
ಅಕ್ಷರ ಗಾತ್ರ

ಟೆಲ್ ಅವೀವ್: ಇಸ್ರೇಲ್-ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಇಂದಿನಿಂದ ಆರಂಭಗೊಂಡಿದ್ದು, ಮೊದಲ ಬ್ಯಾಚ್‌ನಲ್ಲಿ 13 ಒತ್ತೆಯಾಳು ಸೇರಿದಂತೆ ಪ್ಯಾಲೆಸ್ಟೀನಿಯನ್‌ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಕತಾರ್ ಘೋಷಿಸಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.

ಕದನ ವಿರಾಮವು ಇಂದು ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾಗಲಿದೆ. ಮಹಿಳೆ ಮತ್ತು ಮಕ್ಕಳು ಸೇರಿದಂತೆ 13 ಮಂದಿ ಒತ್ತೆಯಾಳುಗಳನ್ನು ಸಂಜೆ 4 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಕತಾರ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್-ಅನ್ಸಾರಿ ತಿಳಿಸಿದ್ದಾರೆ.

ಬಿಡುಗಡೆ ಮಾಡಲು ನಿರ್ಧರಿಸಲಾದ ಪ್ಯಾಲೆಸ್ಟೀನ್‌ ಕೈದಿಗಳ ಪಟ್ಟಿಯನ್ನು ಇಸ್ರೇಲ್‌ ಗುಪ್ತಚರ ಇಲಾಖೆ ಬಿಡುಗಡೆ ಮಾಡಿರುವುದಾಗಿ ಅನ್ಸಾರಿ ಹೇಳಿದ್ದಾರೆ.

ನಿರೀಕ್ಷೆಯಂತೆ ಪ್ರಕ್ರಿಯೆ ಗುರುವಾರ ಆರಂಭವಾಗಬೇಕಿತ್ತು. ‘ಒತ್ತೆಯಾಳುಗಳ ಬಿಡುಗಡೆಗಾಗಿ ಬಂಡುಕೋರರ ಜೊತೆಗೆ ಸಂಪರ್ಕದಲ್ಲಿದ್ದೇವೆ’ ಎಂದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಟ್ಜಾಚಿ ಹನೆಗ್ಬಿ ಹೇಳಿದ್ದಾರೆ.

ಹಂತ, ಹಂತವಾಗಿ ಹಮಾಸ್‌ ಬಂಡುಕೋರರಿಂದ 50 ಒತ್ತೆಯಾಳುಗಳ ಬಿಡುಗಡೆ ಹಾಗೂ ಪ್ರತಿಯಾಗಿ ಇಸ್ರೇಲ್‌ನಿಂದ 150 ಪ್ಯಾಲೆಸ್ಟೀನ್‌ ಕೈದಿಗಳ ಬಿಡುಗಡೆ ಕುರಿತಂತೆ ಒಪ್ಪಂದ ಆಗಿತ್ತು.

‘ಮೂಲ ಒಪ್ಪಂದದಂತೇ ನಿಗದಿತ ಸ್ಥಳದಲ್ಲೇ ಬಿಡುಗಡೆ ಕಾರ್ಯ ನಡೆಯಲಿದೆ’ ಎಂದು ಹನೆಗ್ಬಿ ಹೇಳಿದ್ದಾರೆ. ‘ತಾತ್ಕಾಲಿಕ ಕದನ ವಿರಾಮವು ಮುಂದೆ ಹೋಗಿದೆ. ಕಾರ್ಯಾಚರಣೆ ಮುಂದುವರಿದಿದೆ’ ಎಂದು ಸೇನೆ ಆಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಳಂಬವು ಒತ್ತೆಯಾಳುಗಳ ಕುಟುಂಬ ಸದಸ್ಯರಲ್ಲಿ ಹಾಗೂ ಕದನ ವಿರಾಮದ ನಿರೀಕ್ಷೆಯಲ್ಲಿದ್ದ, 47 ದಿನಗಳಿಂದ ಭೀತಿಯಲ್ಲಿಯೇ ದಿನದೂಡುತ್ತಿರುವ ಗಾಜಾದ ಅಸಂಖ್ಯಾತ ನಿವಾಸಿಗಳಲ್ಲೂ ಆತಂಕವನ್ನು ಹೆಚ್ಚಿಸಿದೆ.

ಕದನ ನಿರತ ಹಮಾಸ್‌ ಬಂಡುಕೋರರು ಹಾಗೂ ಇಸ್ರೇಲ್‌ ಸೇನೆಯ ನಡುವೆ ಒತ್ತೆಯಾಳುಗಳ ಬಿಡುಗಡೆಗಾಗಿ ಒಡಂಬಡಿಕೆ ಮೂಡಿತ್ತು. ಇಸ್ರೇಲ್‌, ಅಮೆರಿಕ, ಕತಾರ್‌ ಇದಕ್ಕಾಗಿ ಮಧ್ಯಸ್ಥಿಕೆಯನ್ನು ವಹಿಸಿದ್ದವು.

ಆಸ್ಪತ್ರೆ ಕೆಳಗೆ ಸುರಂಗ: ಇಸ್ರೇಲ್‌ನ ಸೇನೆಯು ಗಾಜಾದಲ್ಲಿನ ಅಲ್‌ ಶಿಫಾ ಆಸ್ಪತ್ರೆಯ ಕೆಳಗೆ ಸುರಂಗ, ಹಮಾಸ್‌ ನೆಲೆ ಇದ್ದುದನ್ನು ಪತ್ತೆ ಹೆಚ್ಚಿದ್ದಾರೆ. ಈ ಆಸ್ಪತ್ರೆಯು ಇತ್ತೀಚೆಗೆ ಯುದ್ಧದ ಕೇಂದ್ರ ಸ್ಥಾನವಾಗಿತ್ತು.

ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸೆಲ್ಮಿಯಾ ಅವರನ್ನು ಇಸ್ರೇಲಿ ಸೇನೆ ವಶಕ್ಕೆ ಪಡೆದಿದೆ. ಇಸ್ರೇಲ್‌ ದಾಳಿಯಿಂದ ಗಾಜಾ ಪಟ್ಟಿಯಲ್ಲಿ ಮೃತಪಟ್ಟವರ ಸಂಖ್ಯೆ 13 ಸಾವಿರಕ್ಕೇರಿದೆ ಎಂದು ಹಮಾಸ್‌ನ ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಅಲ್ಲದೆ, ಈ ಅವಧಿಯಲ್ಲಿ 6000 ಜನರು ನಾಪತ್ತೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT