ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ20: ಮಾಲಿನ್ಯ ಕಡಿತಕ್ಕೆ ಬದ್ಧತೆ ಇಲ್ಲ

ಜಾಗತಿಕ ತಾಪಮಾನ ಏರಿಕೆ ತಡೆ ಸಮಾಲೋಚನೆ
Last Updated 31 ಅಕ್ಟೋಬರ್ 2021, 22:00 IST
ಅಕ್ಷರ ಗಾತ್ರ

ರೋಮ್‌: ಜಾಗತಿಕ ತಾಪಮಾನ ಹೆಚ್ಚಳವನ್ನು ಕಡಿಮೆ ಮಾಡಲು ‘ಅರ್ಥ‍ಪೂರ್ಣ ಮತ್ತು ಪರಿಣಾಮಕಾರಿ’ ಕ್ರಮಗಳಿಗೆ ಜಿ–20 ದೇಶಗಳ ಮುಖಂಡರು ಭಾನುವಾರ ನಡೆದ ಶೃಂಗಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಅದಕ್ಕಾಗಿ ನಿಖರವಾದ ಯಾವುದೇ ಬದ್ಧತೆ ಪ್ರಕಟಿಸಿಲ್ಲ. ಇದು ಹವಾಮಾನ ಬದಲಾವಣೆ ತಡೆ ಕಾರ್ಯಕರ್ತರಲ್ಲಿ ನಿರಾಶೆ ಮೂಡಿಸಿದೆ.

ರೋಮ್ ಶೃಂಗಸಭೆಯು ತಮ್ಮ ಭರವಸೆಗಳನ್ನು ಈಡೇರಿಸಿಲ್ಲ, ಹಾಗಂತ ಅವುಗಳನ್ನು ಹೂತೂ ಹಾಕಿಲ್ಲ ಎಂದು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಹೇಳಿದ್ದಾರೆ. ಜಗತ್ತು ಹವಾಮಾನ ದುರಂತದತ್ತ ಅತಿ ವೇಗದಿಂದ ಓಡುತ್ತಿದೆ ಎಂದು ಶುಕ್ರವಾರವಷ್ಟೇ ಅವರು ಎಚ್ಚರಿಕೆ ನೀಡಿದ್ದರು.

ಕೈಗಾರಿಕಾ ಪೂರ್ವ ದಿನಗಳನ್ನು ಮೂಲವಾಗಿ ಇರಿಸಿಕೊಂಡು, ಜಾಗತಿಕ ತಾಪಮಾನದ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸಬೇಕು ಎಂಬ ವಿಚಾರದಲ್ಲಿ ಜಿ20 ನಾಯಕರಲ್ಲಿ ಒಮ್ಮತ ಇದೆ. ಬರಗಾಲ, ಪ್ರವಾಹ, ಬಿರುಗಾಳಿಯಂತಹ ನೈಸರ್ಗಿಕ ವಿಕೋಪಗಳನ್ನು ತಡೆಯಲು ಇದು ಅನಿವಾರ್ಯ ಎಂದು ವಿಶ್ವ ಸಂಸ್ಥೆಯು ಪ್ರತಿಪಾದಿಸುತ್ತಿದೆ.

ಒಟ್ಟು ಇಂಗಾಲ ಹೊರಸೂಸುವಿಕೆಯಲ್ಲಿ ಜಿ20 ದೇಶಗಳ ಪಾಲು ಶೇ 80 ರಷ್ಟು. ಇದನ್ನು ಕಡಿತ ಮಾಡಲು ಈ ದೇಶಗಳು ಯಾವ ಕ್ರಮಗಳಿಗೆ ಬದ್ಧವಾಗಲಿವೆ ಎಂಬುದೇ ಮುಂದಿನ ಹದಿನೈದು ದಿನಗಳಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದ (COP26 ಗ್ಲಾಸ್ಗೊ) ಯಶಸ್ಸು ಅಥವಾ ವೈಫಲ್ಯವನ್ನು ನಿರ್ಧರಿಸಲಿದೆ.

ತಾಪಮಾನ ಏರಿಕೆಯನ್ನು ನಿರ್ವಹಿಸುವುದಕ್ಕಾಗಿ ಅಂತರಾಷ್ಟ್ರೀಯ ಸಹಕಾರ ಹಾಗೂ ಬೆಂಬಲದೊಂದಿಗೆ ದೀರ್ಘಾವಧಿ, ಮಧ್ಯಮ ಹಾಗೂ ಸಣ್ಣ ಅವಧಿಯ ಗುರಿ ಹಾಕಿಕೊಂಡು ಯೋಜನೆಗಳನ್ನು ರೂಪಿಸಬೇಕು ಎಂದು ಅಮೆರಿಕ, ಚೀನಾ, ಭಾರತ, ರಷ್ಯಾ, ಐರೋ‍ಪ್ಯ ರಾಷ್ಟ್ರಗಳು ಸೇರಿದಂತೆ ವಿವಿಧ ದೇಶಗಳ ನಾಯಕರು ಕರೆ ನೀಡಿದ್ದಾರೆ.

ಆದರೆ, ತಜ್ಞರ ಪ್ರಕಾರ, 1.5 ಡಿ.ಸೆ ಗುರಿಯನ್ನು ಸಾಧಿಸುವುದು ಎಂದರೆ, 2030ರ ವೇಳೆಗೆ ಜಾಗತಿಕ ಇಂಗಾಲದ ಹೊರಸೂಸುವಿಕೆಯನ್ನು ಶೇ 50ರಷ್ಟು ಕಡಿಮೆ ಮಾಡುವುದು ಹಾಗೂ 2050ರ ವೇಳೆ ‘ನೆಟ್‌ ಜೀರೊ’ ಗುರಿ ಸಾಧಿಸುವುದು. ಆದರೆ, ಜಿ 20 ಹೇಳಿಕೆಯಲ್ಲಿ ಗುರಿ ತಲುಪುವ ಬಗ್ಗೆ ನಿರ್ದಿಷ್ಟ ದಿನಾಂಕದ ಉಲ್ಲೇಖವಿಲ್ಲ. ಅದು, ನೆಟ್‌ ಜೀರೊ ವಿಷಯವಾಗಿ ‘ಶತಮಾನದ ಮಧ್ಯಂತರಕ್ಕೆ ಅಥವಾ ಆ ಹೊತ್ತಿಗೆ’ ಗುರಿ ಸಾಧಿಸುವುದಾಗಿ ಹೇಳುತ್ತದೆ ಅಷ್ಟೆ ಎಂದಿದ್ದಾರೆ.

ಸಂಸ್ಕರಣೆ ಪ್ರಕ್ರಿಯೆ ಇಲ್ಲದೇ ಇಂಗಾಲ ಹೊರಸೂಸುವಿಕೆ ನಡೆದಿರುವ ಕಲ್ಲಿದ್ದಲು ಘಟಕಗಳಿಗೆ 2021ರ ಕೊನೆಯಲ್ಲಿ ಹಣಕಾಸು ಸಹಾಯ ನಿಲ್ಲಿಸಲೂ ಜಿ 20 ನಾಯಕರು ಸಮ್ಮತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT