ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾಧಿಕಾರಿ ಕೈಗೆ ಚಳಿಗಾಲದ ಒಲಿಂಪಿಕ್ಸ್ ಜ್ಯೋತಿ: ಚೀನಾದ ಕ್ರಮಕ್ಕೆ ಅಮೆರಿಕ ಕಿಡಿ

ಚೀನಾದ ಬೆದರಿಕೆಯ ತಂತ್ರ: ಭಾರತಕ್ಕೆ ಅಮೆರಿಕ ಬೆಂಬಲ
Last Updated 4 ಫೆಬ್ರುವರಿ 2022, 14:33 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘2020ರ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ದಾಳಿ ಮಾಡಿದ್ದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) ರೆಜಿಮೆಂಟ್ ಕಮಾಂಡರ್‌ಗೆ ಬೀಜಿಂಗ್‌ನ ಚಳಿಗಾಲದ ಒಲಿಂಪಿಕ್ಸ್‌ ಕ್ರೀಡಾಕೂಟದ ಜ್ಯೋತಿ ಹೊತ್ತೊಯ್ಯುವ ಜವಾಬ್ದಾರಿ (ಟಾರ್ಚ್ ಬೇರರ್) ನೀಡಿರುವ ಚೀನಾದ ಕ್ರಮವು ನಾಚಿಕಗೇಡಿನ ಸಂಗತಿ ’ಎಂದು ಅಮೆರಿಕವು ಕಿಡಿಕಾರಿದೆ.

ಈ ಮೂಲಕ ಭಾರತದ ವಿರುದ್ಧ ಪ್ರಚೋದನಕಾರಿ ನಡೆ ತೋರಿ, ಬೆದರಿಕೆ ಒಡ್ಡಿರುವ ಚೀನಾದ ಕ್ರಮವನ್ನು ವಿರೋಧಿಸಿರುವ ಅಮೆರಿಕವು, ತಾನು ಭಾರತವನ್ನು ಬೆಂಬಲಿಸುವುದಾಗಿ ತಿಳಿಸಿದೆ.

ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಬುಧವಾರ ಪಿಎಲ್‌ಎಯ ರೆಜಿಮೆಂಟ್ ಕಮಾಂಡರ್‌ಗೆ ಕ್ರೀಡಾಕೂಟದ ಜ್ಯೋತಿಯನ್ನು ಹೊತ್ತೊಯ್ಯುವ ಜವಾಬ್ದಾರಿ ನೀಡಲಾಗಿದೆ. ಚೀನಾದ ಈ ಕ್ರಮವು ಕ್ರೀಡಾಕೂಟದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳ ರಾಜತಾಂತ್ರಿಕ ಬಹಿಷ್ಕಾರವನ್ನು ಘೋಷಿಸಲು ಭಾರತಕ್ಕೆ ಪ್ರೇರಣೆ ನೀಡಿದಂತಾಗಿದೆ.

ಚೀನಾದ ಪ್ರಚೋದನಕಾರಿ ನಡೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಗುರುವಾರ ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಅವರು, ‘ತನ್ನ ನೆರೆಹೊರೆಯವರನ್ನು ಬೆದರಿಸುವ ಚೀನಾದ ನಿರಂತರ ಪ್ರಯತ್ನಗಳ ಬಗ್ಗೆ ಅಮೆರಿಕವು ಈ ಹಿಂದೆಯೂ ಕಳವಳ ವ್ಯಕ್ತಪಡಿಸಿದೆ. ಭಾರತ- ಚೀನಾದ ಗಡಿ ಪರಿಸ್ಥಿತಿಯ ವಿಷಯಕ್ಕೆ ಬಂದಾಗ, ನಾವು ನೇರ ಮಾತುಕತೆ ಮತ್ತು ಗಡಿ ವಿವಾದಗಳ ಶಾಂತಿಯುತ ಪರಿಹಾರಕ್ಕೆ ಬೆಂಬಲಿಸುವುದನ್ನು ಮುಂದುವರಿಸುತ್ತೇವೆ’ ಎಂದು ಹೇಳಿದ್ದಾರೆ.

‘ನಾವು ಪ್ರತಿಸಲದಂತೆ ಸ್ನೇಹಿತರೊಂದಿಗೆ ನಿಲ್ಲುತ್ತೇವೆ. ಇಂಡೋ- ಪೆಸಿಫಿಕ್‌ನಲ್ಲಿ ಭದ್ರತೆ ಮತ್ತು ಮೌಲ್ಯಗಳನ್ನು ಮುನ್ನಡೆಸಲು ನಾವು ಪಾಲುದಾರರು ಮತ್ತು ಮಿತ್ರರಾಷ್ಟ್ರಗಳೊಂದಿಗೆ ನಿಲ್ಲುತ್ತೇವೆ’ ಎಂದೂ ಅವರು ತಿಳಿಸಿದ್ದಾರೆ.

ಚೀನಾದ ಕ್ರಮಕ್ಕೆ ಅಮೆರಿಕದ ಇಬ್ಬರು ಸೆನೆಟರ್‌ಗಳು ಕೂಡಾ ಟೀಕೆ ವ್ಯಕ್ತಪಡಿಸಿದ್ದಾರೆ.

‘ಚಳಿಗಾಲದ ಒಲಿಂಪಿಕ್ಸ್‌ಗೆ ಭಾರತೀಯ ಸೈನಿಕರ ವಿರುದ್ಧದ ದಾಳಿಯಲ್ಲಿ ಭಾಗವಹಿಸಿದ್ದ ಸೇನಾಧಿಕಾರಿಯನ್ನು ಕ್ರೀಡಾಜ್ಯೋತಿಧಾರಕರನ್ನಾಗಿ ಆಯ್ಕೆ ಮಾಡಿರುವ ಚೀನಾದ ನಿರ್ಧಾರವು ಭಯಾನಕ ಮತ್ತು ಉದ್ದೇಶಪೂರ್ವಕವಾಗಿ ಪ್ರಚೋದನಕಾರಿಯಾದದ್ದು’ ಎಂದು ಫ್ಲಾರಿಡಾದ ಸೆನೆಟರ್ ಮಾರ್ಕೊ ರೂಬಿಯೊ ಅಭಿಪ್ರಾಯಪಟ್ಟಿದ್ದಾರೆ.

‘ಚೀನಾದ ಕ್ರಮವು ನಾಚಿಕೆಗೇಡಿನ ಸಂಗತಿ. ಅಮೆರಿಕವು ಭಾರತದ ಸಾರ್ವಭೌಮತ್ವ ಬೆಂಬಲಿಸುವುದನ್ನು ಮುಂದುವರಿಸುತ್ತದೆ’ ಎಂದು ಅಮೆರಿಕದ ವಿದೇಶ ಸಂಬಂಧಗಳ ಸಮಿತಿಯ ಸದಸ್ಯ, ಸೆನೆಟರ್ ಜಿಮ್ ರಿಶ್ ಅವರು ಟ್ವೀಟ್‌ ಮಾಡಿದ್ದಾರೆ.

ಚೀನಾದ ರಾಯಭಾರ ಕಚೇರಿ ಎದುರು ಟಿಬೆಟಿಯನ್ನರ ಪ್ರತಿಭಟನೆ
ನವದೆಹಲಿ :
ಬೀಜಿಂಗ್‌ನ ಚಳಿಗಾಲದ ಒಲಿಂಪಿಕ್ಸ್‌ 2022 ಅನ್ನು ವಿರೋಧಿಸಿ ದೆಹಲಿಯ ಚಾಣಕ್ಯಪುರಿಯಲ್ಲಿರುವ ಚೀನಾದ ರಾಯಭಾರದ ಕಚೇರಿಯ ಹೊರಗೆ ಟಿಬೆಟಿಯನ್ನರ ಗುಂಪೊಂದು ಶುಕ್ರವಾರ ಪ್ರತಿಭಟನೆ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ.

‘ಸುಮಾರು 50ರಿಂದ 60 ಜನರಿದ್ದ ಗುಂಪೊಂದು ಭಿತ್ತಿಪತ್ರಗಳೊಂದಿಗೆ ಸುಮಾರು 45 ನಿಮಿಷ ಕಾಲ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿತು. ಆ ಸ್ಥಳದಿಂದ ಪ್ರತಿಭಟನನಿರತರನ್ನು ಚದುರಿಸಲಾಯಿತು. ಆದರೆ, ಯಾರನ್ನೂ ಬಂಧಿಸಿಲ್ಲ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

‘ಚೀನಾವು ಟಿಬೆಟ್‌ನಲ್ಲಿ ಸಮಗ್ರ ಮಾನವ ಹಕ್ಕುಗಳ ಉಲ್ಲಂಘನೆ ಮಾಡುವುದನ್ನು ಮುಂದುವರಿಸಿದ್ದು, ಸನ್ಯಾಸಿಗಳ ಸಂಸ್ಥೆಗಳನ್ನು ಕೆಡವಿ, ಸುಟ್ಟು ಭಸ್ಮ ಮಾಡುತ್ತಿದೆ’ ಎಂದು ಗುಂಪು ಆರೋಪಿಸಿದೆ.

ಈ ನಡುವೆ ‘ಒಲಿಂಪಿಕ್ಸ್ ಆಟಗಳು ಪ್ರೀತಿ ಮತ್ತು ಶಾಂತಿಯನ್ನು ಸಂಕೇತಿಸುತ್ತವೆ ಮತ್ತು ಸಂಘರ್ಷಗಳಿಗೆ ಶಾಂತಿಯುತ ಪರಿಹಾರವನ್ನು ಉತ್ತೇಜಿಸುವ ಸಾಧನವಾಗಿ‌ವೆ’ ಎಂದು ಟಿಬೆಟಿಯನ್ ಯುವ ಕಾಂಗ್ರೆಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT