ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ವಿರಾಮ ಪ್ರಸ್ತಾವಕ್ಕೆ ಹಮಾಸ್‌ ತಿರಸ್ಕಾರ

Published 26 ಮಾರ್ಚ್ 2024, 14:18 IST
Last Updated 26 ಮಾರ್ಚ್ 2024, 14:18 IST
ಅಕ್ಷರ ಗಾತ್ರ

ಜೆರುಸಲೇಂ: ಯುದ್ಧ ಅಂತ್ಯಗೊಳಿಸುವುದು ಮತ್ತು ಗಾಜಾದಿಂದ ಪೂರ್ಣ ಪ್ರಮಾಣದಲ್ಲಿ ಸೇನೆ ಹಿಂತೆಗೆದುಕೊಳ್ಳುವುದೂ ಸೇರಿದಂತೆ ತನ್ನ ಪ್ರಮುಖ ಬೇಡಿಕೆಗಳ ಬಗ್ಗೆ ಇಸ್ರೇಲ್‌ ನಿರ್ಲಕ್ಷ್ಯ ವಹಿಸಿದೆ ಎಂದಿರುವ ಹಮಾಸ್‌ ಬಂಡುಕೋರ ಸಂಘಟನೆಯು ಕದನ ವಿರಾಮ ಪ್ರಸ್ತಾವವನ್ನು ತಿರಸ್ಕರಿಸಿದೆ.

ಹೀಗಾಗಿ ತಾನು ತನ್ನ ಮೂಲವಾದಕ್ಕೆ ಅಂಟಿಕೊಂಡಿರುವುದಾಗಿ ಹಮಾಸ್‌ ಸಂಘಟನೆ ಸೋಮವಾರ ಹೇಳಿಕೆಯಲ್ಲಿ ಮಧ್ಯವರ್ತಿಗಳಿಗೆ ತಿಳಿಸಿದೆ. ‘ಸಮಗ್ರ ಕದನ ವಿರಾಮ, ಗಾಜಾ ಪಟ್ಟಿಯಿಂದ ಇಸ್ರೇಲ್‌ ಸೇನೆಯ ಹಿಂತೆಗೆತ, ಸ್ಥಳಾಂತರಗೊಂಡ ಜನರ ವಾಪಸಾತಿ, ನೈಜ ಕೈದಿಗಳ ವಿನಿಮಯ ತನ್ನ ಪ್ರಮುಖ ಬೇಡಿಕೆಗಳಾಗಿವೆ. ಆದರೆ ಇವುಗಳ ಬಗ್ಗೆ ಇಸ್ರೇಲ್‌ ಪ್ರತಿಕ್ರಿಯಿಸಿಲ್ಲ’ ಎಂದು ಅದು ಹೇಳಿದೆ.

ತಕ್ಷಣ ಕದನ ವಿರಾಮ ಘೋಷಿಸಲು ಮತ್ತು ಗಾಜಾದಲ್ಲಿ ಎಲ್ಲ ಒತ್ತೆಯಾಳು ಬಿಡುಗಡೆ ಮಾಡುವ ಕುರಿತ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮೋದಿಸಿದ ಕೆಲ ದಿನಗಳ ಬೆನ್ನಲ್ಲೇ ಹಮಾಸ್‌ ಸಂಘಟನೆಯಿಂದ ಹೇಳಿಕೆ ಬಂದಿದೆ.

ಹಮಾಸ್ ಬೇಡಿಕೆಗಳನ್ನು ತಿರಸ್ಕರಿಸಿದ್ದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಹಮಾಸ್‌ ನಾಶವಾಗುವವರೆಗೆ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದಾರೆ. 

ಹಮಾಸ್‌ ಇನ್ನೂ 100 ಒತ್ತೆಯಾಳುಗಳನ್ನು ಹಿಡಿದುಕೊಂಡಿದೆ ಎಂದು ನಂಬಲಾಗಿದೆ. ಗಾಜಾದಲ್ಲಿ ಇಸ್ರೇಲ್‌ ನರಮೇಧ ನಡೆಸುತ್ತಿದೆ ಎಂಬುದಕ್ಕೆ ಸಮಂಜಸವಾದ ಆಧಾರಗಳಿವೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯೊಂದಿಗೆ ಕೆಲಸ ಮಾಡುವ ಸ್ವತಂತ್ರ ತಜ್ಞರು ಸೋಮವಾರ ಹೇಳಿದ್ದಾರೆ. ಗಾಜಾ ಪಟ್ಟಿಯಲ್ಲಿನ 23 ಲಕ್ಷ ಜನರು ಜನರು ಆಹಾರ ಅಭದ್ರತೆಯಿಂದ ಬಳಲುತ್ತಿದ್ದು, ಉತ್ತರ ಭಾಗದಲ್ಲಿ ಕ್ಷಾಮವೂ ಸನ್ನಿಹಿತವಾಗಿದೆ ಎಂದು ಅಂತರರಾಷ್ಟ್ರೀಯ ನೆರವು ಅಧಿಕಾರಿಗಳು ತಿಳಿಸಿದ್ದಾರೆ. 

ಯುದ್ಧ ಆರಂಭವಾದಾಗಿನಿಂದ ಗಾಜಾ ಪಟ್ಟಿಯಲ್ಲಿ 32,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 74,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಮೂರನೇ ಎರಡರಷ್ಟು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT