ಬೈರೂತ್: ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ಮುಖ್ಯಸ್ಥ ಸಯ್ಯದ್ ಹಸನ್ ನಸ್ರಲ್ಲಾ (64) ಅವರನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿದೆ.
‘ಹಸನ್ ನಸ್ರಲ್ಲಾ ಇನ್ನು ಮುಂದೆ ಉಗ್ರವಾದದ ಮೂಲಕ ಜಗತ್ತನ್ನು ಬೆದರಿಸಲು ಸಾಧ್ಯವಾಗುವುದಿಲ್ಲ. ನಾವು ಆತನನ್ನು ಹೊಡೆದುರುಳಿಸಿದ್ದೇವೆ’ ಎಂದು ಇಸ್ರೇಲ್ ಶನಿವಾರ ಘೋಷಿಸಿದೆ. ಸಂಘಟನೆಯ ಮುಖ್ಯಸ್ಥನ ಸಾವನ್ನು ದೃಢಪಡಿಸಿರುವ ಹಿಜ್ಬುಲ್ಲಾ, ‘ತನ್ನ ಇತರ ಹುತಾತ್ಮರನ್ನು ನಸ್ರಲ್ಲಾ ಅವರೂ ಹಿಂಬಾಲಿಸಿದ್ದಾರೆ’ ಎಂದು ಹೇಳಿದೆ.
ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯ ಹಲವು ಪ್ರಮುಖರು ದಕ್ಷಿಣ ಬೈರೂತ್‌ನ ದಾಹಿಯಾ ಪ್ರದೇಶದಲ್ಲಿನ ತಮ್ಮ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸಭೆ ಸೇರಿದ್ದರು. ‘ನಸ್ರಲ್ಲಾ ಅವರು ಈ ಸಭೆಯಲ್ಲಿ ಇದ್ದ ಖಚಿತ ಮಾಹಿತಿ ಮೇರೆಗೆ ವಾಯುದಾಳಿ ನಡೆಸಲಾಯಿತು. ಸಭೆಯಲ್ಲಿದ್ದ ಸಂಘಟನೆಯ ಕಮಾಂಡರ್ ಅಲಿ ಕರ್ಕಿ ಅವರೂ ಮೃತಪಟ್ಟಿದ್ದಾರೆ’ ಎಂದು ಇಸ್ರೇಲ್ ಸೇನೆ ತಿಳಿಸಿದೆ.
‘ಹಿಜ್ಬುಲ್ಲಾ ಸಂಘಟನೆಯ ಸಭೆಯಲ್ಲಿದ್ದ ಇರಾನ್‌ನ ‘ರೆವೆಲೂಷನರಿ ಗಾರ್ಡ್’ನ ಕಮಾಂಡರ್ ಅಬ್ಬಾಸ್ ನಿಲ್‌ಫೊರುಶಾನ್ (58) ಅವರೂ ದಾಳಿಯಲ್ಲಿ ಮೃತಪಟ್ಟಿದ್ದಾರೆ’ ಎಂದು ಇರಾನ್ ಮಾಹಿತಿ ನೀಡಿದೆ.
ಯುದ್ಧ ಮುಗಿದಿಲ್ಲ: ಹಿಜ್ಬುಲ್ಲಾ
‘ನಸ್ರಲ್ಲಾ ಅವರ ಹತ್ಯೆಯ ಬಳಿಕ ಯುದ್ಧ ನಿಲ್ಲಲಿದೆ ಎಂದು ತಿಳಿಯಬೇಕಿಲ್ಲ’ ಎಂದು ಇಸ್ರೇಲ್ ಹೇಳಿದೆ. ಹಿಜ್ಬುಲ್ಲಾ ಸಂಘಟನೆ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ನಮ್ಮ ಶತ್ರುವಿನ ವಿರುದ್ಧ ಹಾಗೂ ಪ್ಯಾಲೆಸ್ಟೀನ್ ಪರವಾದ ನಮ್ಮ ಈ ಪವಿತ್ರ ಯುದ್ಧವು ಮುಂದುವರಿಯಲಿದೆ’ ಎಂದಿದೆ.
ಇಸ್ರೇಲ್–ಹಿಜ್ಬುಲ್ಲಾ ಹೋರಾಟ ಶನಿವಾರವೂ ಮುಂದುವರಿದಿದೆ. ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಹಾಗೂ ಉತ್ತರ ಹಾಗೂ ಮಧ್ಯ ಇಸ್ರೇಲ್ ಮೇಲೆ ಹಿಜ್ಬುಲ್ಲಾ ದಾಳಿ ನಡೆಸಿದೆ.
‘ನಸ್ರಲ್ಲಾ ಅವರ ಹತ್ಯೆಗೆ ಇರಾನ್ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂಬ ಎಚ್ಚರಿಕೆ ನಮಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸಿದ್ಧರಿದ್ದೇವೆ. ಮೂರು ಬೆಟಾಲಿಯನ್ ಮೀಸಲು ಸೈನಿಕರನ್ನು ದೇಶದ ಎಲ್ಲ ಗಡಿಗಳಲ್ಲೂ ನಿಯೋಜಿಸಲಾಗಿದೆ’ ಎಂದು ಇಸ್ರೇಲ್ ಸೇನೆ ತಿಳಿಸಿದೆ.