ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೆಲ್‌ ಅವಿವ್‌ ಮೇಲೆ ಕ್ಷಿಪಣಿ ಉಡಾಯಿಸಿದ ಹಿಜ್ಬುಲ್ಲಾ

ಕಮಾಂಡರ್‌ಗಳ ಹತ್ಯೆ, ಪೇಜರ್‌, ವಾಕಿಟಾಕಿಗಳ ಸ್ಟೋಟಕ್ಕೆ ಪ್ರತ್ಯುತ್ತರವೆಂದ ಲೆಬನಾನ್‌ನ ಬಂಡುಕೋರ ಸಂಘಟನೆ
Published : 25 ಸೆಪ್ಟೆಂಬರ್ 2024, 13:56 IST
Last Updated : 25 ಸೆಪ್ಟೆಂಬರ್ 2024, 13:56 IST
ಫಾಲೋ ಮಾಡಿ
Comments

ಬೈರೂತ್‌ (ಎಪಿ): ಲೆಬನಾನ್‌ ಮೇಲೆ ಇಸ್ರೇಲ್‌ ಬಾಂಬ್‌ ದಾಳಿ ನಡೆಸಿ ನೂರಾರು ಜನರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಹಿಜ್ಬುಲ್ಲಾ ಬಂಡುಕೋರರ ಸಂಘಟನೆಯು ಬುಧವಾರ ನಸುಕಿನಲ್ಲಿ ಇಸ್ರೇಲ್‌ನ ಕೇಂದ್ರ ಭಾಗವನ್ನು ಗುರಿಯಾಗಿಸಿ ಟೆಲ್‌ ಅವಿವ್‌ ನಗರದ ಮೇಲೆ ಕ್ಷಿಪಣಿ ಉಡಾಯಿಸಿದೆ.

‘ಟೆಲ್ ಅವಿವ್ ಮತ್ತು ಕೇಂದ್ರ ಇಸ್ರೇಲ್‌ನಾದ್ಯಂತ ವಾಯುದಾಳಿ ಸೈರನ್‌ಗಳು ಮೊಳಗಿದ್ದು, ಮೇಲ್ಮೈ ಮಾರ್ಗದಲ್ಲೇ ಕ್ಷಿಪಣಿ ಪತ್ತೆಮಾಡಿ ಅದನ್ನು ನಾಶಪಡಿಸಲಾಗಿದೆ. ಯಾವುದೇ ಸಾವುನೋವು ಅಥವಾ ಹಾನಿ ಆಗಿರುವ ವರದಿಯಾಗಿಲ್ಲ. ಕ್ಷಿಪಣಿ ಉಡಾಯಿಸಿರುವ ದಕ್ಷಿಣ ಲೆಬನಾನ್‌ನ ತಾಣವನ್ನು ಪತ್ತೆಹಚ್ಚಿ ಅದನ್ನೂ ಧ್ವಂಸಗೊಳಿಸಲಾಗಿದೆ’ ಎಂದು ಇಸ್ರೇಲ್‌ ಸೇನೆ ಹೇಳಿದೆ.

‘ಇಸ್ರೇಲ್‌ನ ಮೊಸ್ಸಾದ್ ಗುಪ್ತಚರ ಸಂಸ್ಥೆಯ ಪ್ರಧಾನ ಕಚೇರಿ ಗುರಿಯಾಗಿಸಿ ‘ಖಾದರ್ 1’ ಹೆಸರಿನ ಗುರಿ ನಿರ್ದೇಶಿತ (ಬ್ಯಾಲಿಸ್ಟಿಕ್‌) ಕ್ಷಿಪಣಿಯನ್ನು ಹಾರಿಸಲಾಯಿತು. ಇದು ತನ್ನ ಉನ್ನತ ಕಮಾಂಡರ್‌ಗಳ ಇತ್ತೀಚಿನ ಹತ್ಯೆಗಳಿಗೆ ಮತ್ತು ಕಳೆದ ವಾರ ಪೇಜರ್‌ಗಳು ಹಾಗೂ ವಾಕಿ-ಟಾಕಿಗಳಲ್ಲಿ ಅಡಗಿಸಿಟ್ಟಿದ್ದ ಸ್ಫೋಟಕಗಳನ್ನು ಸ್ಫೋಟಿಸಿ ಹಲವು ಮಂದಿಯನ್ನು ಹತ್ಯೆಗೈದ ದಾಳಿಗೆ ಪ್ರತ್ಯುತ್ತರ’ ಎಂದು ಇರಾನ್‌ ಬೆಂಬಲಿತ, ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆ ಹೇಳಿದೆ.

‘ಲೆಬನಾನ್‌ನಿಂದ ಉಡಾಯಿಸಿರುವ ಕ್ಷಿಪಣಿಯು ಇಸ್ರೇಲ್‌ನ ಕೇಂದ್ರ ಭಾಗಕ್ಕೆ ಬಂದಿರುವುದು ಇದೇ ಮೊದಲು’ ಎಂದು ಇಸ್ರೇಲ್‌ ಸೇನೆ  ಹೇಳಿದೆ.

ಹಿಜ್ಬುಲ್ಲಾ ಬುಧವಾರ ಉಡಾಯಿಸಿರುವ ಕ್ಷಿಪಣಿಯು ಭಾರಿ ಸಿಡಿತಲೆಯನ್ನು ಹೊಂದಿತ್ತು ಎಂದು ಇಸ್ರೇಲ್‌ ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನದಾವ್ ಶೋಶಾನಿ ಹೇಳಿದ್ದಾರೆ. ಆದರೆ, ಅವರು ಟೆಲ್ ಅವೀವ್‌ನ ಉತ್ತರ ಭಾಗದಲ್ಲಿರುವ ಮೊಸ್ಸಾದ್ ಪ್ರಧಾನ ಕಚೇರಿಯನ್ನು ಗುರಿಯಾಗಿಸಿದ್ದಾಗಿ ಹಿಜ್ಬುಲ್ಲಾ ಹೇಳಿಕೊಂಡಿರುವುದನ್ನು ತಳ್ಳಿಹಾಕಿದ್ದಾರೆ.

ಕಳೆದ ತಿಂಗಳು ವೈಮಾನಿಕ ದಾಳಿ ನಡೆಸಿದಾಗ ಹಿಜ್ಬುಲ್ಲಾ ಸಂಘಟನೆ, ಟೆಲ್ ಅವಿವ್ ಬಳಿಯ ಗುಪ್ತಚರ ನೆಲೆ ಗುರಿಯಾಗಿಸಿಕೊಂಡಿದ್ದಾಗಿ ಹೇಳಿಕೊಂಡಿತ್ತು. ಗಾಜಾದಲ್ಲಿ ಪ್ಯಾಲೇಸ್ಟಿನಿನ ಹಮಾಸ್ ಬಂಡುಕೋರರ ಗುಂಪು ಯುದ್ಧದ ಆರಂಭದಲ್ಲಿ ಟೆಲ್ ಅವೀವ್ ಅನ್ನೇ ಪದೇ ಪದೇ ಗುರಿಯಾಗಿಸಿ ದಾಳಿಗೆ ಯತ್ನಿಸಿತ್ತು.

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಹಮಾಸ್ ವಿರುದ್ಧ ಹೋರಾಡುತ್ತಿರುವಾಗಲೇ, ಈ ಪ್ರದೇಶವು ಮತ್ತೊಂದು ಸಂಪೂರ್ಣ ಯುದ್ಧದತ್ತ ಸಾಗುತ್ತಿರುವಂತೆ ಕಾಣಿಸುತ್ತಿದೆ. ಹಿಜ್ಬುಲ್ಲಾ ನಡೆಸಿರುವ ಕ್ಷಿಪಣಿ ಉಡಾವಣೆಯು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಸೋಮವಾರ ಮತ್ತು ಮಂಗಳವಾರ ಇಸ್ರೇಲ್‌ ಪಡೆಗಳು ನಡೆಸಿದ ವೈಮಾನಿಕ ದಾಳಿಗಳಿಂದ ಲೆಬನಾನ್‌ನಲ್ಲಿ ಸುಮಾರು 560 ಜನರು ಹತರಾಗಿದ್ದು, ಸಾವಿರಾರು ಜನರು ನೆಲೆ ಕಳೆದುಕೊಂಡು, ಆಶ್ರಯಕ್ಕಾಗಿ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT