ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತುಕತೆ ವಿಫಲವಾದರೆ ಇಮ್ರಾನ್‌ಗೆ ನಷ್ಟ: ಪಿಎಂಎಲ್‌–ಎನ್‌

Published 1 ಮೇ 2023, 14:13 IST
Last Updated 1 ಮೇ 2023, 14:13 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದ ಸಂಸತ್ತನ್ನು ಮೇ 14ರ ಒಳಗೆ ವಿಸರ್ಜಿಸಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ ತಹ್ರೀಕ್‌ ಇನ್ಸಾಫ್‌ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಅವರು ನೀಡಿರುವ ಪ್ರಸ್ತಾವನೆಯನ್ನು ಪಾಕಿಸ್ತಾನದ ಆಡಳಿತಾರೂಢ ಮೈತ್ರಿಕೂಟ ತಿರಸ್ಕರಿಸಿದೆ. 

ಪಾಕಿಸ್ತಾನ ಮುಸ್ಲಿಂ ಲೀಗ್‌ (ನವಾಜ್‌) ನೇತೃತ್ವದ ಆಡಳಿತಾರೂಢ ಮೈತ್ರಿಕೂಟ ಮತ್ತು ಪಿಟಿಐ ನಡುವಿನ ಮೂರನೇ ಸುತ್ತಿನ ಮಾತುಕತೆಯನ್ನು ಮಂಗಳವಾರ ನಿಗದಿಪಡಿಸಲಾಗಿದೆ. ಸಂಸತ್ತನ್ನು ವಿಸರ್ಜಿಸದಿದ್ದರೆ ಸಂಧಾನ ಯಶಸ್ವಿಯಾಗುವುದು ಅಸಾಧ್ಯ ಎಂದು ಇಮ್ರಾನ್ ಖಾನ್‌ ಹೇಳಿದ್ದರು. ಅದಕ್ಕೆ ತಿರುಗೇಟು ನೀಡಿರುವ ಪಿಎಂಎಲ್‌–ಎನ್‌, ಒಂದು ವೇಳೆ ಮಾತುಕತೆ ವಿಫಲವಾದರೆ ಪಿಟಿಐ ಬಹುವಾಗಿ ನಷ್ಟ ಅನುಭವಿಸುತ್ತದೆ ಎಂದು ಹೇಳಿದೆ.

ಇಮ್ರಾನ್‌ ಖಾನ್‌ ಪ್ರಸ್ತಾವನೆ ಕುರಿತು ಪ್ರತಿಕ್ರಿಯೆ ನೀಡಿರುವ ಪಿಎಂಎಲ್‌–ಎನ್‌ ಪ್ರಧಾನ ಕಾರ್ಯದರ್ಶಿ ಅಹ್ಸಾನ್‌ ಇಕ್ಬಾಲ್‌ ಅವರು, 'ಬಂದೂಕು ಹಿಡಿದು ಮಾತುಕತೆಯನ್ನು ನಡೆಸಲಾಗುವುದಿಲ್ಲ. ಮಾತುಕತೆಯ ಮೊದಲ ಷರತ್ತೇ ಮಾತುಕತೆಗೂ ಮೊದಲು ಯಾವುದೇ ಷರತ್ತು ಹಾಕಬಾರದು ಎಂಬುವುದು. ಇಮ್ರಾನ್‌ ಅವರ ಪ್ರಸ್ತಾವನೆಯು ಕಾರ್ಯಸಾಧ್ಯವಲ್ಲ. ಈ ಸಂಧಾನವು ಯಶಸ್ವಿಯಾಗಬೇಕು ಎಂದರೆ ಇಮ್ರಾನ್‌ ಹಠಮಾರಿತನ ಬಿಡಬೇಕು ಎಂದಿದ್ದಾರೆ' ಎಂದು ಡಾನ್‌ ಸುದ್ದಿಪತ್ರಿಕೆ ವರದಿ ಮಾಡಿದೆ. 

‘ಜುಲೈನಲ್ಲಿ ಚುನಾವಣೆ ನಡೆಸದಿದ್ದರೆ ದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದಾಗಿ ಇಮ್ರಾನ್‌ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ, ಸಂವಿಧಾನದ ಅಡಿ ಚುನಾವಣೆಯನ್ನು ಒಂದು ವರ್ಷಕ್ಕೆ ಮುಂದೂಡಲು ಅವಕಾಶವಿದೆ. ಹೀಗಾಗಿ ಸಂಧಾನ ವಿಫಲವಾದರೆ ಇಮ್ರಾನ್‌ ಪಕ್ಷಕ್ಕೇ ನಷ್ಟ’ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಲೋಕಸಭೆ ಅವಧಿಯು ಇದೇ ಆಗಸ್ಟ್‌ನಲ್ಲಿ ಮುಕ್ತಾಯವಾಗಲಿದೆ. ಮೇ 14ರಂದು ಪಾಕಿಸ್ತಾನದ ಪಂಜಾಬ್‌ನಲ್ಲಿ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಆದರೆ ಸಂವಿಧಾನದ ಪ್ರಕಾರ ಲೋಕಸಭೆ ವಿಸರ್ಜಿಸಿದ ಬಳಿಕ ಚುನಾವಣೆ ನಡೆಸಲು 90 ದಿನಗಳ ಕಾಲಾವಕಾಶ ಇರುತ್ತದೆ. ಹೀಗಾಗಿ ಅಕ್ಟೋಬರ್‌ನಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT