ವಾಷಿಂಗ್ಟನ್: ಚೀನಾ ಮತ್ತು ತೈವಾನ್ ಮೇಲೆ ಅಮೆರಿಕದ ಆರ್ಥಿಕ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನೊಂದಿಗೆ ಸದೃಢ ಸಂಬಂಧಗಳು ಮುಖ್ಯವಾಗಿದೆ ಎಂದು ಭಾರತೀಯ ಅಮೆರಿಕನ್, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಪ್ರತಿಪಾದಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆ ಕುರಿತಂತೆ ಕಳೆದ ವಾರ ನಡೆದ ಮೊದಲ ಪ್ರಾಥಮಿಕ ಚರ್ಚೆಯ ನಂತರ 38 ವರ್ಷದ ರಾಮಸ್ವಾಮಿ, ತಮ್ಮ ಯೋಜನೆಗಳು ಮತ್ತು ವಿದೇಶಾಂಗ ನೀತಿ ದೃಷ್ಟಿಕೋನಗಳನ್ನು ವಿವರಿಸಿದ್ದಾರೆ.
ವಿದೇಶಾಂಗ ನೀತಿ ವಿಷಯಗಳ ಬಗ್ಗೆ ಅನನುಭವಿ ಎಂದು ತಮ್ಮನ್ನು ಟೀಕಿಸಿದ್ದ ರಿಪಬ್ಲಿಕನ್ ಪಕ್ಷದ ಮತ್ತೊಬ್ಬ ಆಕಾಂಕ್ಷಿ ನಿಕ್ಕಿ ಹ್ಯಾಲೆ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
‘ನಾವು ಭಾರತದೊಂದಿಗೆ ಬಲವಾದ ಪಾಲುದಾರಿಕೆಯನ್ನು ಹೊಂದುತ್ತೇವೆ. ಅದರಲ್ಲಿ ತೈವಾನ್ ಸಂಬಂಧಿತ ಸಂಘರ್ಷ ಎದುರಾದಾಗ ಮಲಕ್ಕಾ ಜಲಸಂಧಿಯನ್ನು ಮುಚ್ಚುವ ಭಾರತದ ಬದ್ಧತೆ ಒಳಗೊಂಡಿರುತ್ತದೆ. ಚೀನಾದ ಮೇಲಿನ ನಮ್ಮ ಆರ್ಥಿಕ ಅವಲಂಬನೆಯನ್ನು ಕಡಿಮೆ ಮಾಡಲು ದಕ್ಷಿಣ ಕೊರಿಯಾ ಮತ್ತು ಜಪಾನ್ ಸೇರಿದಂತೆ ಇತರ ಮಿತ್ರರಾಷ್ಟ್ರಗಳೊಂದಿಗೆ ಬಲವಾದ ಪಾಲುದಾರಿಕೆಯನ್ನು ಪ್ರವೇಶಿಸುತ್ತೇವೆ’ಎಂದು ರಾಮಸ್ವಾಮಿ ಹೇಳಿದರು.
ಸೆಮಿ ಕಂಡಕ್ಟರ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವವರೆಗೆ ಅಮೆರಿಕವು ತೈವಾನ್ ಅನ್ನು ಬಲವಾಗಿ ರಕ್ಷಿಸಬೇಕು. ಅಮೆರಿಕವು ತೈವಾನ್‌ನಲ್ಲಿ ತಯಾರಿಸಲಾಗುವ ಪ್ರಮುಖ ಸೆಮಿ ಕಂಡಕ್ಟರ್‌ಗಳ ಮೇಲೆ ಬಹಳ ಅವಲಂಬಿತವಾಗಿದೆ ಎಂದು ಹೇಳಿದರು.
‘ನಾವು ತೈವಾನ್ ಅನ್ನು ರಕ್ಷಿಸುತ್ತೇವೆ ಎಂದು ಹೇಳುವ ಮೂಲಕ, ಭವಿಷ್ಯದಲ್ಲಿ ಚೀನಾವು ತೈವಾನ್ ಅನ್ನು ಆಕ್ರಮಿಸದಂತೆ ಬಲವಾಗಿ ತಡೆಯಬಹುದು. ಇದೇವೇಳೆ, ತೈವಾನ್ ತನ್ನ ಮಿಲಿಟರಿ ವೆಚ್ಚವನ್ನು ದ್ವಿಗುಣಗೊಳಿಸಬೇಕು’ ಎಂದು ಅವರು ಹೇಳಿದರು.
ಪ್ರತಿ ವಾರ ತೈವಾನ್ ಜಲಸಂಧಿಯ ಮೂಲಕ ಕನಿಷ್ಠ ಒಂದು ಯುದ್ಧನೌಕೆಯನ್ನು ಓಡಿಸುವ ಮೂಲಕ ಅಮೆರಿಕವು ತ್ವರಿತವಾಗಿ ತೈವಾನ್‌ಗೆ ಶತ್ರುಗಳನ್ನು ಹಿಮ್ಮೆಟ್ಟಿಸುವ ತರಬೇತಿ ನೀಡಬೇಕು ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.