ವಾಷಿಂಗ್ಟನ್: ನಿಕ್ಕಿ ಹ್ಯಾಲೆ, ವಿವೇಕ್ ರಾಮಸ್ವಾಮಿ ನಂತರ ಇದೀಗ ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿ ಹರ್ಷ ವರ್ಧನ್ ಸಿಂಗ್ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ 38 ವರ್ಷದ ಹರ್ಷ ವರ್ಧನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾಗವಹಿಸುವ ಕುರಿತು 3 ನಿಮಿಷಗಳ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ.
'ನ್ಯೂಜೆರ್ಸಿ ರಿಪಬ್ಲಿಕ್ ಪಾರ್ಟಿಯ 'ಅಮೆರಿಕ ಮೊದಲು' ಎಂಬ ಸಿದ್ದಾಂತವನ್ನು ಬಲಪಡಿಸುವ ಕೆಲಸ ಮಾಡಿದ ರಿಪಬ್ಲಿಕ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ' ಎಂದು ಹೇಳಿಕೊಂಡಿದ್ದಾರೆ.
'ಅಮೆರಿಕದ ಮೌಲ್ಯಗಳನ್ನು ಪುನರ್ ಸ್ಥಾಪಿಸಲು ನಮಗೆ ಬಲವಾದ ನಾಯಕತ್ವದ ಅಗತ್ಯವಿದ್ದು, ಅದಕ್ಕಾಗಿಯೇ 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ' ಎಂದಿದ್ದಾರೆ.
ಗುರುವಾರ ಚುನಾವಣಾ ಆಯೋಗಕ್ಕೆ ಹರ್ಷ ವರ್ಧನ್ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು 'ದಿ ಹಿಲ್' ಪತ್ರಿಕೆ ವರದಿ ಮಾಡಿದೆ.
ವರ್ಷದ ಆರಂಭದಲ್ಲಿ ದಕ್ಷಿಣ ಕೆರೊಲಿನಾದ ಮಾಜಿ ಗವರ್ನರ್ ನಿಕ್ಕಿ ಹ್ಯಾಲೆ (51), ಉದ್ಯಮಿ ವಿವೇಕ್ ರಾಮಸ್ವಾಮಿ (37) ರಿಪಬ್ಲಿಕ್‌ನ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.
ಹರ್ಷ ವರ್ಧನ್ ಸಿಂಗ್ ಪರಿಚಯ
ನ್ಯೂಜೆರ್ಸಿಯ ಅಟ್ಲಾಂಟಿಕ್ ನಗರದಲ್ಲಿ ಜನಿಸಿದ ಹರ್ಷ ವರ್ಧನ್ ಸಿಂಗ್ ಅವರ ಪೋಷಕರು ಭಾರತದಿಂದ ಅಮೆರಿಕಕ್ಕೆ ವಲಸೆ ಬಂದಿದ್ದರು. 2009ರಲ್ಲಿ ನ್ಯೂಜೆರ್ಸಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಏರೋನಾಟಿಕಲ್ ಎಂಜಿನಿಯರ್ ಆಗಿದ್ದ ಹರ್ಷವರ್ಧನ್ ಅವರಿಗೆ 'ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್' 2003ರಲ್ಲಿ 'ಏವಿಯೇಷನ್ ಅಂಬಾಸಿಡರ್' ಪ್ರಶಸ್ತಿಯನ್ನು ನೀಡಿತ್ತು.
2017 ರಾಜಕೀಯ ಪ್ರವೇಶ ಮಾಡಿದ ಹರ್ಷ ವರ್ಧನ್ ಅವರು ನ್ಯೂಜೆರ್ಸಿಯ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. 2018ರಲ್ಲಿ ಅಮೆರಿಕ ಕಾಂಗ್ರೆಸ್ ಚುನಾವಣೆಯಲ್ಲಿ, 2020 ಯುಎಸ್ ಸೆನೆಟ್ ಚುನಾವಣೆಯಲ್ಲಿ, ಮತ್ತು 2021ರಲ್ಲಿ ಗವರ್ನರ್ ಚುನಾವಣೆಯಲ್ಲಿ ಸೋಲು ಕಂಡಿದ್ದರು.
I'm entering the race for President.https://t.co/OEHCSYOdvK pic.twitter.com/RyxW4sKMSW
— Hirsh Vardhan Singh (@HirshSingh) July 27, 2023
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.