ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಷಾಖಾನ ಪ್ರಕರಣ: ಇಮ್ರಾನ್‌ ಖಾನ್‌ಗೆ ವಿಧಿಸಿದ್ದ ಶಿಕ್ಷೆ ಅಮಾನತು

Published 29 ಆಗಸ್ಟ್ 2023, 16:25 IST
Last Updated 29 ಆಗಸ್ಟ್ 2023, 16:25 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ತೋಷಾಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ಎದುರಿಸುತ್ತಿರುವ ಮೂರು ವರ್ಷಗಳ ಶಿಕ್ಷೆಯನ್ನು ಅಮಾನತುಗೊಳಿಸಿರುವ ಇಸ್ಲಾಮಾಬಾದ್‌ ಹೈಕೋರ್ಟ್‌, ಅವರ ಬಿಡುಗಡೆಗೆ ಆದೇಶಿಸಿ ಮಂಗಳವಾರ ತೀರ್ಪು ನೀಡಿದೆ.

ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಹೈಕೋರ್ಟ್‌ನಿಂದ ಈ ತೀರ್ಪು ಬಂದಿರುವುದು ಇಮ್ರಾನ್‌ ಖಾನ್‌ ಅವರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಅಮೀರ್ ಫಾರೂಕ್ ಮತ್ತು ನ್ಯಾಯಮೂರ್ತಿ ತಾರಿಕ್ ಮೆಹಮೂದ್ ಜಹಾಂಗಿರಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಸೋಮವಾರ ಕಾಯ್ದಿರಿಸಿದ್ದ ತೀರ್ಪನ್ನು  ಮಂಗಳವಾರ ಪ್ರಕಟಿಸಿದೆ. 

‘ಇಮ್ರಾನ್‌ ಖಾನ್‌ ಅವರ ಕೋರಿಕೆಯನ್ನು ಅಂಗೀಕರಿಸಲಾಗಿದ್ದು, ತೀರ್ಪಿನ ಪ್ರತಿಯು ಶೀಘ್ರವೇ ದೊರೆಯಲಿದೆ’ ಎಂದು ನ್ಯಾಯಮೂರ್ತಿ ಫಾರೂಕ್‌ ತಿಳಿಸಿದರು.

‘ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್‌ ಅಮಾನತುಗೊಳಿಸಿದೆ’ ಎಂದು ಖಾನ್‌ ಅವರ ಪಿಟಿಐ ಪಕ್ಷವು ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ತಿಳಿಸಿದೆ.

‘ಮುಖ್ಯ ನ್ಯಾಯಮೂರ್ತಿ ಅವರು ನಮ್ಮ ಮನವಿಯನ್ನು ಸ್ವೀಕರಿಸಿದ್ದು, ಶಿಕ್ಷೆಯನ್ನು ಅಮಾನತುಗೊಳಿಸಿದ್ದಾರೆ’ ಎಂದು ಖಾನ್‌ ಅವರ ಕಾನೂನು ಸಲಹೆಗಾರ ನಯೀಮ್ ಹೈದರ್ ಪಂಜೋಥಾ ಅವರು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಇಮ್ರಾನ್‌ ಬಿಡುಗಡೆ ಅಸ್ಪಷ್ಟ ಇಸ್ಲಾಮಾಬಾದ್‌ (ಎಎಫ್‌ಪಿ) ಇಮ್ರಾನ್‌ ಖಾನ್‌ ಅವರಿಗೆ ಜಿಲ್ಲಾ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆಯೇನೋ ಅಮಾನತಾಗಿದೆ. ಆದರೆ ಅವರು ತಕ್ಷಣವೇ ಜೈಲಿನಿಂದ ಬಿಡುಗಡೆ ಆಗುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ‘ಖಾನ್‌ ಅವರಿಗೆ ಜಾಮೀನು ದೊರೆತಿದೆ. ಆದರೆ ಅವರ ವಿರುದ್ಧ 200ಕ್ಕೂ ಹೆಚ್ಚು ಪ್ರಕರಣಗಳು ಇರುವ ಕಾರಣ ಮತ್ತೆ ಅವರನ್ನು ಬಂಧಿಸಬಹುದು ಎಂಬ ಆತಂಕ ಕಾಡುತ್ತಿದೆ’ ಎಂದು ಪಿಟಿಐ ಪಕ್ಷ ಮತ್ತು ಖಾನ್‌ ಅವರ ವಕೀಲರು ಹೇಳಿದ್ದಾರೆ. ‘ಹೀಗಾಗಿಯೇ ನ್ಯಾಯಾಲಯದಲ್ಲಿ ನಾವು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದೇವೆ. ಯಾವುದೇ ಪ್ರಕರಣದಲ್ಲಿ ಇ್ರಮಾನ್‌ ಖಾನ್‌ ಅವರನ್ನು ಬಂಧಿಸದಂತೆ ಆದೇಶಿಸಲು ಕೋರಿದ್ದೇವೆ’ ಎಂದು ಖಾನ್‌ ಪರ ವಕೀಲ ಗೋಹರ್ ಖಾನ್‌ ತಿಳಿಸಿದ್ದಾರೆ.  ‘ಆದ್ದರಿಂದ ಖಾನ್‌ ಅವರನ್ನು ಇತರ ಪ್ರಕರಣಗಳಲ್ಲಿ ಬಂಧಿಸುವುದು ಕಾನೂನು ಬಾಹಿರವಾಗುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ತೋಷಾಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಆಗಿರುವ ಇಮ್ರಾನ್‌ ಖಾನ್‌ ಮೂರು ವಾರಗಳಿಂದ ಜೈಲಿನಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT